The Federal Exclusive | ಜಾತಿಗಣತಿ 2.0 | ಜಿಯೋ ಟ್ಯಾಗ್, ಎಐ ಬಳಕೆ ; ಸಮೀಕ್ಷೆಗೆ ವಿಶ್ವಸಂಸ್ಥೆ ಪರಿಣತರ ನೆರವು- ಮಧುಸೂದನ್ ನಾಯ್ಕ್
x
ಮಧುಸೂದನ್‌ ನಾಯಕ್‌

The Federal Exclusive | ಜಾತಿಗಣತಿ 2.0 | ಜಿಯೋ ಟ್ಯಾಗ್, ಎಐ ಬಳಕೆ ; ಸಮೀಕ್ಷೆಗೆ ವಿಶ್ವಸಂಸ್ಥೆ ಪರಿಣತರ ನೆರವು- ಮಧುಸೂದನ್ ನಾಯ್ಕ್

ವೈಜ್ಞಾನಿಕ ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಖಾತ್ರಿಪಡಿಸಿಕೊಳ್ಳಲು ಆಯೋಗವು ಜಿಯೋ ಟ್ಯಾಗ್ ಅಳವಡಿಸಿಕೊಳ್ಳಲು ಮುಂದಾಗಿದೆ.


ರಾಜ್ಯದಲ್ಲಿ ಹೊಸದಾಗಿ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ, ಲೋಪಗಳಿಗೆ ಆಸ್ಪದ ಇಲ್ಲದಂತೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಆರಂಭಿಸಿದೆ.

ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗುವ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ ಕುರಿತಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್ ಅವರು 'ದ ಫೆಡರಲ್ ಕರ್ನಾಟಕ' ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಸಮೀಕ್ಷೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.

ಜಿಯೋ ಟ್ಯಾಗ್ ಬಳಕೆ

ವೈಜ್ಞಾನಿಕ ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಖಾತ್ರಿಪಡಿಸಿಕೊಳ್ಳಲು ಆಯೋಗವು ಜಿಯೋ ಟ್ಯಾಗ್ ಅಳವಡಿಸಿಕೊಳ್ಳಲು ಮುಂದಾಗಿದೆ.

ಜಿಯೊ ಟ್ಯಾಗ್ ಎಂದರೆ ಭೌಗೋಳಿಕ ಮಾಹಿತಿಯನ್ನು ಅಕ್ಷಾಂಶ ಮತ್ತು ರೇಖಾಂಶ ಸೂಚಿಸುವ ಡಿಜಿಟಲ್ ಮೀಡಿಯಾ ಫೈಲ್ ನಲ್ಲಿ ಎಂಬೆಡ್ ಮಾಡಲಾಗುವ ದತ್ತಾಂಶವಾಗಿರುತ್ತದೆ.

ಸಮೀಕ್ಷೆ ಮಾಡುವ ಸಿಬ್ಬಂದಿಗೆ ಜಿಯೋ ಟ್ಯಾಗ್ ಅಳವಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿ ಯಾವ ಮನೆಗೆ ಹೋಗಿದ್ದಾರೆ, ಯಾವ ಊರು ಎಂಬ ಮಾಹಿತಿ ಜಿಯೋ ಟ್ಯಾಗ್ ಮೂಲಕ ಸಂಗ್ರಹಿಸಬಹುದಾಗಿದೆ.

ವಾಯ್ಸ್ ರೆಕಾರ್ಡ್ ಮತ್ತು ಯೂನಿಕ್ ಕೋಡ್ ವ್ಯವಸ್ಥೆ

ಪ್ರತಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯವರ ಪ್ರತಿ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ವೋಟರ್ ಕಾರ್ಡ್, ಪಡಿತರ ಚೀಟಿ, ಶೈಕ್ಷಣಿಕ ಮಾಹಿತಿ ಎಲ್ಲವನ್ನು ಪಡೆಯಲಾಗುತ್ತದೆ. ಈ ಹಿಂದೆ ಸಮೀಕ್ಷೆ ಮಾಡಿದ ಮಾಹಿತಿಯೂ ಪ್ರದರ್ಶಿಸುವಂತೆ ವ್ಯವಸ್ಥೆ ಮಾಡಲಾಗುವುದು. ಒಂದು ಮನೆಗೆ 30 ನಿಮಿಷ ಸಮಯ ನಿಗದಿ ಮಾಡುತ್ತೇವೆ. ಮನೆಯವರಿಂದ ಎಲ್ಲಾ ಮಾಹಿತಿ ಪಡೆದುಕೊಂಡ ಬಳಿಕ ಸರಿಯಾಗಿರುವ ಬಗ್ಗೆ ಧ್ವನಿ ಸಂಗ್ರಹ ಮಾಡಲಾಗುತ್ತದೆ.‌ ಇದರ ಜತೆಗೆ ಅವರಿಗೆ ಯೂನಿಕ್ ಕೋಡ್ ನೀಡಲಾಗುತ್ತದೆ. ಆಗ ನಮ್ಮ ಮನೆಗೆ ಬಂದಿಲ್ಲ, ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂದು ದೂರಲು ಆಗುವುದಿಲ್ಲ.

ಪ್ರತಿ ಮನೆಯ ಸದಸ್ಯರೊಬ್ಬರಿಗೆ ಗಣತಿ ಕಾರ್ಯ ಮುಗಿದ ಬಳಿಕ ಯೂನಿಕ್ ಕೋಡ್ ನೀಡಲಾಗುವುದು. ಆ ಯೂನಿಕ್ ಕೋಡ್ ಮೂಲಕ ಆ ಮನೆಯ ಸದಸ್ಯ ಮಾತ್ರ ಅದನ್ನು ಓಪನ್ ಮಾಡಬಹುದು. ಸಮೀಕ್ಷೆ ಮುಗಿದ ಬಳಿಕ ಏನಾದರೂ ಮಾಹಿತಿ ತಪ್ಪಾಗಿದೆಯಾ ಅಥವಾ ಬೇರೆ ಮಾಹಿತಿ ಸೇರಿಸಬೇಕು ಎನಿಸಿದರೆ ಯೂನಿಕ್ ಕೋಡ್ ಬಳಸಿಕೊಂಡು ಓಪನ್ ಮಾಡಿ ಆನ್ ಲೈನ್ ನಲ್ಲಿ ಹೆಚ್ಚುವರಿ ಮಾಹಿತಿ ನಮೂದು ಮಾಡಬಹುದು. ಈ ರೀತಿ ಯೂನಿಕ್ ಕೊಡ್ ಬಳಸಿ ನಮೂದು ಮಾಡಲು ಪ್ರತ್ಯೇಕ ಕಾಲಂ ನೀಡಲಾಗಿರುತ್ತದೆ. ಯಾರು ಯೂನಿಕ್ ಕೋಡ್ ಬಳಸಿಕೊಂಡು ಮಾಹಿತಿ ನೀಡಿದ್ದಾರೆ ಎನ್ನುವುದು ಆಯೋಗಕ್ಕೆ ಗೊತ್ತಾಗಲಿದೆ ಎಂದು ವಿವರಿಸಿದರು.

ಎಐ ಸೇರಿ ಇತರ ತಂತ್ರಜ್ಞಾನ ಬಳಕೆ

ಸಮೀಕ್ಷೆಯಲ್ಲಿ ಆರ್ಟಿಪಿಷಿಯಲ್ ಇಂಟಲಿಜೆನ್ಸ್( ಕೃತಕ ಬುದ್ದಿಮತ್ತೆ) ಬಳಕೆ ಬಗ್ಗೆಯೂ ಪ್ರಸ್ತಾಪ ಬಂದಿದೆ. ಆದರೆ, ಮೊದಲ ಹಂತದಲ್ಲಿ ಎಐ ಬಳಕೆ ಮಾಡದೇ ಸಮೀಕ್ಷೆ ಮುಗಿದ ಬಳಿಕ ಅಂಕಿ ಅಂಶ ಸಂಗ್ರಹಣೆ ವೇಳೆ ಬಳಕೆಗೆ ಚಿಂತನೆ ನಡೆದಿದೆ. ಇದರ ಜತೆಗೆ ಐಐಟಿ, ಐಐಎಮ್ ಪರಿಣತರ ಜತೆಯೂ ಸಮಾಲೋಚನೆ ನಡೆಸಲಾಗುವುದು ಎಂದು ಮಧುಸೂದನ್ ನಾಯ್ಕ್ ತಿಳಿಸಿದರು.

ಸಮೀಕ್ಷೆಗೆ ವಿಶ್ವಸಂಸ್ಥೆ ಪರಿಣತರ ನೆರವು

ಜಾತಿಗಣತಿಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲು‌ ನಿರ್ಧರಿಸಿರುವ ಆಯೋಗವು ವಿಶ್ವದ ಎಲ್ಲ ಕಡೆಯ ಪರಿಣತರ ನೆರವು ಪಡೆಯಲಿದೆ. ಐಐಟಿ, ಐಐಎಂ ಸೇರಿದಂತೆ ವಿಶ್ವ ಸಂಸ್ಥೆ ಸಮೀಕ್ಷೆ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಪರಿಣತರ ಮಾರ್ಗದರ್ಶನ ಪಡೆಯಲಾಗುವುದು.‌ಈ ಸಂಬಂಧ ಆಯೋಗದ ಕಾರ್ಯದರ್ಶಿ ಮಾತುಕತೆ ನಡೆಸಿದ್ದಾರೆ ಎಂದು ಮಧುಸೂದನ್ ನಾಯ್ಕ್ ತಿಳಿಸಿದರು.

15 ದಿವಸಗಳಲ್ಲಿ ಸಮೀಕ್ಷೆ ಪೂರ್ಣ; ನವೆಂಬರ್ ನಲ್ಲಿ ವರದಿ ಸಲ್ಲಿಕೆ

ನಿಗದಿತ ವೇಳೆಯಲ್ಲೇ ಸಮೀಕ್ಷಾ ಕಾರ್ಯ ಆರಂಭಿಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿ ಆರಂಭವಾಗಿದೆ. ಶೀಘ್ರದಲ್ಲೇ ಜಾತಿಗಳ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿ ಸಾರ್ವಜನಿಕರ ಅಭಿಪ್ರಾಯ ಕೋರಿ ಒಂದು ವಾರ ಕಾಲಾವಧಿ ನೀಡಲಾಗುವುದು. ನಂತರ ಪ್ರಶ್ನಾವಳಿ ತಯಾರು ಮಾಡಲಾಗುವುದು ಎಂದು ಮಧುಸೂದನ್ ನಾಯ್ಕ್ ತಿಳಿಸಿದರು.

ಎಚ್. ಕಾಂತರಾಜ್ , ಜಯಪ್ರಕಾಶ್ ಹೆಗಡೆ, ನ್ಯಾ. ನಾಗಮೋಹನ್ ದಾಸ್ ಅವರು ಸಿದ್ದಪಡಿಸಿದ್ದ ಪ್ರಶ್ನಾವಳಿಗಳಿಗಿಂತ ಹೆಚ್ಚಿನ ಪ್ರಶ್ನಾವಳಿಗಳನ್ನು ಮಾಡಲಾಗುವುದು. ಎಲ್ಲಾ ತಯಾರಿ ಆರಂಭವಾಗಿದ್ದು ಸೆಪ್ಟೆಂಬರ್ 22 ರಿಂದ ಸಮೀಕ್ಷೆ ಆರಂಭವಾಗಿ 15 ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಕೆಲಸ ಮಾಡಲಾಗುವುದು. ನಮ್ಮ ಯೋಜನೆ ಪ್ರಕಾರ ದತ್ತಾಂಶ ಎಲ್ಲಾ ಕಲೆ ಹಾಕಿ ಸಂಪೂರ್ಣ ವರದಿಯನ್ನು ನವೆಂಬರ್ ಕೊನೆ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೇಂದ್ರದ‌ ಸಮೀಕ್ಷೆಗೂ ರಾಜ್ಯದ ಸಮೀಕ್ಷೆಗೂ ವ್ಯತ್ಯಾಸ ಇದೆ

ಕೇಂದ್ರದ‌ ಸಮೀಕ್ಷೆಗೂ ರಾಜ್ಯದ ಸಮೀಕ್ಷೆಗೂ ವ್ಯತ್ಯಾಸ ಇದೆ.‌ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸುತ್ತಿರುವುದು ಜಾತಿ ಗಣತಿ ಮಾತ್ರ. ನಾವು ನಡೆಸುವ ಸಮೀಕ್ಷೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಅಂಶಗಳನ್ನು ಸಂಗ್ರಹಿಸಲಾಗುವುದು‌ ಎಂದರು.

ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಹೆಚ್ಚಿನ ಭತ್ಯೆ

ದಸರಾ ರಜೆ ವೇಳೆ ಪಾಲ್ಗೊಳ್ಳುವ ಶಿಕ್ಷಕರಿಗೆ ಹೆಚ್ಚು ಭತ್ಯೆ ನೀಡಲಾಗುವುದು. ‌ಇದರ ಜತೆಗೆ ದಸರಾ ರಜೆ ಇರುವ ಹಿನ್ನಲೆಯಲ್ಲಿ ರಜೆಯನ್ನು ಸರಿದೂಗಿಸಲು ಶಿಕ್ಷಕರಿಗೆ ಸಾಂದರ್ಭಿಕ ರಜೆ (CL) ಅಥವಾ ರಜೆ ನಗರೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.‌ ಈ ಶಿಫಾರಸನ್ನು ಆಯೋಗದಿಂದ ಮಾಡಲಾಗಿದೆ ಎಂದು ಹೇಳಿದರು.

ಸೋಮವಾರ ತೆಲಂಗಾಣಕ್ಕೆ ಆಯೋಗದ ಪ್ರತಿನಿಧಿಗಳ ಭೇಟಿ

ತೆಲಂಗಾಣ ಸರ್ಕಾರ ಸಮೀಕ್ಷೆ ಮಾಡಿರುವ ಹಿನ್ನಲೆಯಲ್ಲಿ ತೆಲಂಗಾಣ ರಾಜ್ಯಕ್ಕೆ ಹಿಂದುಳಿದ ವರ್ಗಗಳ ಆಯೋಗದ ನಿಯೋಗ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ತೆಲಂಗಾಣ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದಡಿ ಸಮೀಕ್ಷೆ ಮಾಡಿಲ್ಲ. ಅವರ ಸಮೀಕ್ಷೆಯ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು. ಕರ್ನಾಟಕದ ಸಮೀಕ್ಷೆ ಮಾದರಿಯಾಗುವ ರೀತಿ ನಾವು ಸಿದ್ದಪಡಿಸಲಾಗುವುದು ಎಂದು ಮಧುಸೂದನ್ ನಾಯ್ಕ್ ಹೇಳಿದರು.

ಸಮೀಕ್ಷೆಗೆ ಖರ್ಚಾಗುವ ಹಣ

ಸಮೀಕ್ಷೆಗೆ ಕಳೆದ ಬಾರಿಗಿಂತ ಹೆಚ್ಚು ಹಣ ಖರ್ಚಾಗಲಿದೆ. ಎಷ್ಟು ಹಣ ಖರ್ಚಾಗಲಿದೆ ಎನ್ನುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳಿಸಿಕೊಡಲಾಗಿದೆ ಎಂದು ಹೇಳಿದ ಅವರು, ಇಂತಿಷ್ಟೇ ಹಣ ಖರ್ಚಾಗುವ ಕುರಿತು ಮಾಹಿತಿ‌ ನೀಡಲು ನಿರಾಕರಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್‌.ನಾಯಕ್‌ ದ ಫೆಡರಲ್‌ ಕರ್ನಾಟಕಕ್ಕೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.


Read More
Next Story