ಜಾತಿ ನಿಂದನೆ ಆರೋಪ ಪ್ರಕರಣ | ವಕೀಲ ಕೆ.ಎನ್. ಜಗದೀಶ್ ಬಂಧನ
ಜಾತಿ ನಿಂದನೆ ಆರೋಪದ ಪ್ರಕರಣವೊಂದರಲ್ಲಿ ಬಂಧನ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ವಕೀಲ ಕೆ.ಎನ್. ಜಗದೀಶ್ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜಗದೀಶ್ ವಿರುದ್ಧ 2022ರಲ್ಲಿ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಜಗದೀಶ್ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಸಾಕಷ್ಟು ಬಾರಿ ನೋಟಿಸ್ ಜಾರಿಗೊಳಿಸಿದರೂ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಜಗದೀಶ್ ಗೋವಾದಲ್ಲಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಸದ್ಯ ಅವರನ್ನು ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕೀಲ ಜಗದೀಶ್ ಅವರು ಇತ್ತೀಚೆಗೆ ಬಿಜೆಪಿಯ ಮಾಜಿ ಸಿಎಂ ಒಬ್ಬರ ಲೈಂಗಿಕ ಹಗರಣದ ಕುರಿತು ಮಾತನಾಡಿ ಸುದ್ದಿಯಾಗಿದ್ದರು. ಆ ಬಳಿ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆ/ಸುದ್ದಿ ಪ್ರಕಟಿಸದಂತೆ ವಕೀಲ ಕೆ ಎನ್ ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರತಿಬಂಧಕಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಪ್ರತಿಬಂಧಕಾಜ್ಞೆಗೆ ಆದೇಶಿಸಿತ್ತು.
ಆ ಬಳಿಕ ಪ್ರಮುಖ ಮಠಾಧೀಶರೊಬ್ಬರ ಲೈಂಗಿಕ ಹಗರಣದ ಕುರಿತೂ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದರು.