Cash Distribution Allegations: Complaint to Governor Seeking Permission to File Case Against CM and DCM
x

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ಹಣ ಹಂಚಿಕೆ ಆರೋಪ: ಸಿಎಂ ಮತ್ತು ಡಿಸಿಎಂ ವಿರುದ್ಧ ಮೊಕದ್ದಮೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಮತದಾರರಿಗೆ ತಲಾ 500 ರೂಪಾಯಿ ಹಂಚಿಕೆ ಮಾಡುವಂತೆ ತೀರ್ಮಾನಿಸಿ, ಅದರಂತೆ ಹಣ ಹಂಚಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವು ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.

ಹೊಳೆನರಸೀಪುರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮತ್ತು ವಕೀಲರಾದ ಜಿ. ದೇವರಾಜೇಗೌಡ ಅವರು ಈ ದೂರು ಸಲ್ಲಿಸಿದ್ದಾರೆ. ಅವರ ದೂರಿನ ಪ್ರಕಾರ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ, ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಮತದಾರರಿಗೆ ತಲಾ 500 ರೂಪಾಯಿ ಹಂಚಿಕೆ ಮಾಡುವಂತೆ ತೀರ್ಮಾನಿಸಿ, ಅದರಂತೆ ಹಣ ಹಂಚಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ನಾಯಕರು ಹಣ ಹಂಚಿಕೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾದ ಆಡಿಯೊ ಸಂಭಾಷಣೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ದೂರಿನಲ್ಲಿ ಪ್ರಮುಖ ಸಾಕ್ಷ್ಯವಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 123 ಮತ್ತು 99 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕೆಂದು ದೇವರಾಜೇಗೌಡರು ರಾಜ್ಯಪಾಲರನ್ನು ಕೋರಿದ್ದಾರೆ.

ಈ ಪ್ರಕರಣದ ತನಿಖೆಯನ್ನು ನಿರ್ದಿಷ್ಟ ತನಿಖಾ ತಂಡಕ್ಕೆ (SIT) ವಹಿಸಬೇಕೆಂದೂ ದೇವರಾಜೇಗೌಡ ಆಗ್ರಹಿಸಿದ್ದಾರೆ. "ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಸಿಐಡಿ ಎಸ್‌ಐಟಿ ತಂಡ ರಚಿಸಿತ್ತು. ಅದೇ ರೀತಿ, ಈ ಪ್ರಾಮಾಣಿಕ ಅಧಿಕಾರಿಗಳ ತಂಡದಿಂದಲೇ ಹಣ ಹಂಚಿಕೆ ಸಂಬಂಧಿತ ಧ್ವನಿಸುರುಳಿ ಹಾಗೂ ಈ ಹಿಂದೆ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಡಿ.ಕೆ. ಶಿವಕುಮಾರ್ ಅವರು ನನ್ನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಂಭಾಷಣೆಯ ಬಗ್ಗೆಯೂ ತನಿಖೆ ನಡೆಸಬೇಕು," ಎಂದು ಅವರು ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

Read More
Next Story