
ಪಿಲಿಕುಳ ಜೈವಿಕ ಉದ್ಯಾನವನ
ಟೆಂಡರ್ ಸಿಗದಿದ್ದಕ್ಕೆ ಪಿಲಿಕುಳ ವನ್ಯಜೀವಿಗಳಿಗೆ ವಿಷವಿಕ್ಕಲು ಸಂಚು; ಪ್ರಕರಣ ದಾಖಲು
ಹೊಸ ಗುತ್ತಿಗೆದಾರರು ಪೂರೈಸುವ ಮಾಂಸವು ತಿರಸ್ಕೃತವಾಗಬೇಕು ಎಂದು ಹಿಂದಿನ ಟೆಂಡರ್‌ದಾರನ ನೌಕರ ಸಿಬ್ಬಂದಿಗೆ ಕರೆ ಮಾಡಿ, ಮಾಂಸದಲ್ಲಿ ವಿಷ ಬೆರೆಸುವಂತೆ ಸೂಚಿಸಿದ್ದ.
ಚಾಮರಾಜನಗರದಲ್ಲಿ ಇತ್ತೀಚೆಗೆ ಐದು ಹುಲಿಗಳಿಗೆ ವಿಷಪ್ರಾಶನ ಮಾಡಿದ ಘಟನೆ ಮಾಸುವ ಮುನ್ನವೇ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದ ವನ್ಯಜೀವಿಗಳಿಗೂ ವಿಷಪ್ರಾಶನ ಮಾಡಲು ಸಂಚು ರೂಪಿಸಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಜೈವಿಕ ಉದ್ಯಾನವೆಂದೇ ಪ್ರಸಿದ್ದಿ ಪಡೆದಿರುವ ಪಿಲಿಕುಳ ಜೈವಿಕ ಉದ್ಯಾನದ ಮಾಂಸದ ಟೆಂಡರ್ ಸಿಗಲಿಲ್ಲ ಎಂಬ ಕಾರಣಕ್ಕೆ ಪ್ರಾಣಿಗಳಿಗೆ ನೀಡುವ ಮಾಂಸದಲ್ಲಿ ವಿಷ ಬೆರೆಸಲು ಹಿಂದಿನ ಗುತ್ತಿಗೆದಾರ ಸಂಚು ರೂಪಿಸಿದ್ದ ಸಂಗತಿ ಬಯಲಾಗಿದೆ. ಈ ಕುರಿತು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ. ಪ್ರಶಾಂತ್ ಪೈ ಅವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ಉದ್ಯಾನದ ಪ್ರಾಣಿಗಳಿಗೆ ಮಾಂಸ ನೀಡುವ ಟೆಂಡರ್ ಕರೆಯಲಾಗಿತ್ತು. ಹೊಸಬರು ಗುತ್ತಿಗೆ ಪಡೆದಿದ್ದರು. ಹೊಸ ಗುತ್ತಿಗೆದಾರರು ಪೂರೈಸುವ ಮಾಂಸವು ತಿರಸ್ಕೃತವಾಗಬೇಕು ಎಂದು ಸಂಚು ನಡೆಸಿದ ಹಿಂದಿನ ಗುತ್ತಿಗೆದಾರ, ಸಿಬ್ಬಂದಿಗೆ ಕರೆ ಮಾಡಿ ಮಾಂಸದಲ್ಲಿ ವಿಷ ಬೆರೆಸುವಂತೆ ಸೂಚಿಸಿದ್ದ. ಸಂಭಾಷಣೆಯ ಆಡಿಯೋ ಬೆಳಕಿಗೆ ಬರುತ್ತಿದ್ದಂತೆ ಅರಣ್ಯಾಧಿಕಾರಿ ದೂರು ನೀಡಿದ್ದರು. ಆ.8 ರಂದು ಪಿಲಿಕುಳ ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ. ದಿವ್ಯಾ ಗಣೇಶ್ ಪ್ರಾಧಿಕಾರದ ನಿರ್ದೇಶಕರಿಗೆ ದೂರು ನೀಡಿದ್ದರು.
ಈ ಹಿಂದೆ ಮಾಂಸ ಪೂರೈಕೆಗೆ ಟೆಂಡರ್ ಪಡೆದಿದ್ದ ಖಾದರ್ ನಿರ್ದೇಶನದ ಮೇರೆಗೆ ಅಬ್ಬಾಸ್ ಹಾಗೂ ಹನೀಫ್ ಎಂಬವರು ಪಿಲಿಕುಳ ಜೈವಿಕ ಉದ್ಯಾನದ ವನ್ಯಜೀವಿಗಳಿಗೆ ಮಾಂಸ ವಿತರಿಸುತ್ತಿದ್ದರು. ಈ ಬಾರಿ ಬೇರೆಯವರು ಬಿಡ್ ಹಾಕಿದ್ದರಿಂದ ಟೆಂಡರ್ ಬೇರೆಯವರಿಗೆ ಹೋಗಿತ್ತು.