
ಜೈನರ ಧಾರ್ಮಿಕ ಭಾವನೆಗೆ ಧಕ್ಕೆ: ಗಿರೀಶ ಮಟ್ಟೆಣ್ಣವರ್, ಯೂಟ್ಯೂಬರ್ ವಿರುದ್ಧ ಪ್ರಕರಣ
ಉಜಿರೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಗಿರೀಶ ಮಟ್ಟೆಣ್ಣವರ್ ಅವರು, "ಜೈನರು ಕ್ರೂರಿಗಳು, ದಬ್ಬಾಳಿಕೆ ಮಾಡುವವರು ಮತ್ತು ಮತಾಂಧರು," ಎಂದು ನಿಂದಿಸುವ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಧರ್ಮಸ್ಥಳ ಕ್ಷೇತ್ರದ ಕುರಿತು ಮಾತನಾಡುತ್ತಾ ಜೈನ ಸಮುದಾಯದವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ ಆರೋಪದ ಮೇಲೆ ಗಿರೀಶ ಮಟ್ಟೆಣ್ಣವರ್ ಮತ್ತು 'ಕುಡ್ಲಾ ರಾಂಪೇಜ್' ಎಂಬ ಯೂಟ್ಯೂಬ್ ಚಾನೆಲ್ ನಡೆಸುವವರ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಛಬ್ಬಿ ಗ್ರಾಮದ ನಿವಾಸಿ ಅಜಿತ್ ಬಸಾಪುರ ಎಂಬುವವರು ನೀಡಿದ ದೂರಿನ ಅನ್ವಯ ಪೊಲೀಸರು ಜೀರೋ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಗಿರೀಶ ಮಟ್ಟೆಣ್ಣವರ್ ಅವರು, "ಜೈನರು ಕ್ರೂರಿಗಳು, ದಬ್ಬಾಳಿಕೆ ಮಾಡುವವರು ಮತ್ತು ಮತಾಂಧರು," ಎಂದು ನಿಂದಿಸುವ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಅವಹೇಳನಕಾರಿ ಹೇಳಿಕೆಯನ್ನು ಯೂಟ್ಯೂಬರ್ ಯಾವುದೇ ಬದಲಾವಣೆ ಇಲ್ಲದೆ ಪ್ರಸಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಕ್ತರಿಂದ ರಾಜ್ಯಾದ್ಯಂತ ಪ್ರತಿಭಟನೆ
ಈ ಮಧ್ಯೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಕ್ಷೇತ್ರದ ಭಕ್ತರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ, ಭಕ್ತರು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಕುರಿತು ನಡೆಯುತ್ತಿರುವ ಈ ಷಡ್ಯಂತ್ರದ ಬಗ್ಗೆ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸಬೇಕು ಮತ್ತು ಅಪಪ್ರಚಾರದ ಹಿಂದಿರುವ ವ್ಯಕ್ತಿಗಳು ಹಾಗೂ ಅವರಿಗೆ ದೊರೆಯುತ್ತಿರುವ ಹಣಕಾಸಿನ ನೆರವಿನ ಬಗ್ಗೆ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಧರ್ಮ ಸಂರಕ್ಷಣಾ ಸಮಾವೇಶಕ್ಕೆ ಚಿಂತನೆ
ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು, ಆಗಸ್ಟ್ 24 ರಂದು ಧರ್ಮಸ್ಥಳದಲ್ಲಿ 'ಧರ್ಮ ಸಂರಕ್ಷಣಾ ಸಮಾವೇಶ' ನಡೆಸಲು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಚಿಂತನೆ ನಡೆಸಿದೆ. ರಾಜ್ಯದ ಪ್ರಮುಖ ಹಿಂದೂ ನಾಯಕರು ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಲು ಯೋಜಿಸಲಾಗಿದೆ.