ಇಂಡೋನೇಷ್ಯಾ ಅಡಿಕೆಗೆ ಕ್ಯಾನ್ಸರ್ ಕಾರಕ ರಾಸಾಯನಿಕ ಕಲಬೆರಕೆ; ಮಹಾರಾಷ್ಟ್ರ ಅಧಿಕಾರಿಗಳಿಂದ ಮಂಗಳೂರಿನಲ್ಲಿ ತನಿಖೆ!
x

ಇಂಡೋನೇಷ್ಯಾ ಅಡಿಕೆಗೆ ಕ್ಯಾನ್ಸರ್ ಕಾರಕ ರಾಸಾಯನಿಕ ಕಲಬೆರಕೆ; ಮಹಾರಾಷ್ಟ್ರ ಅಧಿಕಾರಿಗಳಿಂದ ಮಂಗಳೂರಿನಲ್ಲಿ ತನಿಖೆ!

ಇಂಡೋನೇಷ್ಯಾದಲ್ಲಿ ಕಳಪೆ ಮತ್ತು ಕೆಳ ದರ್ಜೆಯದ್ದು ಎಂದು ತಿರಸ್ಕರಿಸಿದ ಅಡಿಕೆಯನ್ನು ಅಕ್ರಮವಾಗಿ ಹಡಗುಗಳ ಮೂಲಕ ಕರ್ನಾಟಕ ಹಾಗೂ ಇತರೆ ರಾಜ್ಯಗಳಿಗೆ ತರಲಾಗುತ್ತದೆ.


Click the Play button to hear this message in audio format

ಇಂಡೋನೇಷ್ಯಾದಿಂದ ಅಕ್ರಮವಾಗಿ ಆಮದು ಮಾಡಿಕೊಂಡ ಕೆಳದರ್ಜೆಯ ಅಡಿಕೆಗೆ ಕ್ಯಾನ್ಸರ್ ಕಾರಕ ರಾಸಾಯನಿಕ ಕಲಬೆರಕೆ ಮಾಡುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಇಂಡೋನೇಷ್ಯಾದಿಂದ ಕಳಪೆ ದರ್ಜೆಯ ಅಡಿಕೆಗೆ ರಾಸಾಯನಿಕ ಕಲಬೆರಕೆ ಮಾಡುತ್ತಿರುವ ಜಾಲದ ಸುಳಿವು ಬೆನ್ನತ್ತಿದ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಕರ್ನಾಟಕದ ಮಂಗಳೂರಿನಲ್ಲಿರುವ ಅಡಿಕೆ ಗೋದಾಮುಗಳಲ್ಲಿ ತಲಾಶ್‌ ನಡೆಸಿದ್ದಾರೆ.

ಮಂಗಳೂರಿನ ಬಂದರು ಮತ್ತು ಬೈಕಂಪಾಡಿಯಲ್ಲಿರುವ ಅಡಿಕೆ ಗೋದಾಮುಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರಿಂದ ಮಾಹಿತಿ ಸಂಗ್ರಹಿಸಿದೆ. ಗೋಣಿಗಳಿಗೆ ಬರೆಯುವ ಇಂಕ್ ಸೇರಿ ಸಂಶಯಾಸ್ಪದ ಬಾಟಲಿ ಮತ್ತು ಕ್ಯಾನ್‌ಗಳ ಫೋಟೋ ಮತ್ತು ವಿಡಿಯೊ ತೆಗೆದುಕೊಂಡು ಹೋಗಿದೆ. ಇದಲ್ಲದೇ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೂ ಭೇಟಿ ನೀಡಿರುವ ಮಹಾರಾಷ್ಟ್ರ ಅಧಿಕಾರಿಗಳ ತಂಡವು, ಗೋದಾಮುಗಳ ವಿವರ ಸಂಗ್ರಹಿಸಿ ನಿಯಮಿತ ತಪಾಸಣೆ ನಡೆಸುತ್ತಿರುವ ಕುರಿತು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದೆ.

ಅಡಿಕೆಗೆ ರಾಸಾಯನಿಕ ಕಲಬೆರಕೆ

ಇಂಡೋನೇಷ್ಯಾದಲ್ಲಿ ಕಳಪೆ ಮತ್ತು ಕೆಳ ದರ್ಜೆಯದ್ದು ಎಂದು ತಿರಸ್ಕರಿಸಿದ ಅಡಿಕೆಯನ್ನು ಅಕ್ರಮವಾಗಿ ಹಡಗುಗಳ ಮೂಲಕ ಕರ್ನಾಟಕ ಹಾಗೂ ಇತರೆ ರಾಜ್ಯಗಳಿಗೆ ತರಲಾಗುತ್ತದೆ. ಈ ರೀತಿ ತಂದ ಅಡಿಕೆಯನ್ನು ಮಂಗಳೂರು ಮತ್ತು ಕೇರಳದಲ್ಲಿ ಗ್ರೇಡಿಂಗ್ ಮಾಡಿ ರಾಸಾಯನಿಕ ಬೆರೆಸಲಾಗುತ್ತದೆ. ಬಳಿಕ ಮಂಗಳೂರಿನ ಸುರತ್ಕಲ್‌ನಿಂದ ರೋಲ್‌ ಆನ್‌ -ರೋಲ್‌ ಆಫ್‌ (Roll on-Roll off - ಲಾರಿಗಳನ್ನೇ ಸಾಗಿಸುವ ಕೊಂಕಣ ರೈಲ್ವೆ ವ್ಯವಸ್ಥೆ) ಮೂಲಕ ಮಹಾರಾಷ್ಟ್ರದ ಕೊಲಾಡ್‌ಗೆ ತಲುಪಿಸಿ, ರಾಯಘಡ್‌ನಲ್ಲಿರುವ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಬಳಿಕ ಆ ದಾಸ್ತಾನನ್ನು ನಾಗಪುರದ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಡಿಕೆಯ ರಸದ ಬಣ್ಣವನ್ನೇ ಹೋಲುವ ರಾಸಾಯನಿಕಗಳನ್ನು ಇಲ್ಲಿ ಬಳಸಲಾಗುತ್ತದೆ. ಇವನ್ನು ಕಾರ್ಸಿನೋಜೆನಿಕ್ ಎಂದು ಪಟ್ಟಿ ಮಾಡಲಾಗಿದೆ. ಕಲಬೆರಕೆ ಜಾಲದಲ್ಲಿ ಇರುವವರು ಸುಮಾರು ಹತ್ತು ತರಹದ ರಾಸಾಯನಿಕಗಳನ್ನು ಬಳಸುತ್ತಾರೆ ಎಂದು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಸುಬ್ರಮಣ್ಯ ಭಟ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಅಡಿಕೆಗೆ ರಾಸಾಯನಿಕ ಕಲಬೆರಕೆ ಬಗ್ಗೆ ಈ ಹಿಂದಿನಿಂದಲೂ ಸಂದೇಹವಿತ್ತು. ಈಗ ಅದು ನಿಜವಾಗಿದೆ. ಭಾರತದಲ್ಲಿ ಗುಟ್ಕಾ ತಯಾರಿಕೆಗಾಗಿ ಅಡಿಕೆ ಹೆಚ್ಚು ಬಳಸಲಾಗುತ್ತಿದೆ. ಗುಟ್ಕಾ ಕಂಪನಿಗಳು ಇಲ್ಲಿನ ಅಡಿಕೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಅಡಿಕೆ ಬೆಳೆಯುತ್ತಿದ್ದು, ಬೆಲೆ ಹೆಚ್ಚಳಕ್ಕಾಗಿ ಕಾಯುತ್ತಿರುತ್ತಾರೆ. ಆದರೆ, ಈಗ ಕಲಬೆರಕೆ ಜಾಲದ ವಿಸ್ತರಿಸಿರುವುದರಿಂದ ಸ್ಥಳೀಯ ಅಡಿಕೆ ಬೆಳೆಗಾರರಿಗೆ ನಷ್ಟವಾಗುತ್ತಿದೆ ಎಂದು ಹೇಳಿದರು.

ಕಲಬೆರಕೆಯಿಂದಲೇ ಅಡಿಕೆಗೆ ಅಪವಾದ

ಅಡಿಕೆಗೆ ಕ್ಯಾನ್ಸರ್ ಕಾರಕ ಎಂಬ ಅಪವಾದ ಬರಲು ಇಂತಹ ಕಲಬೆರಕೆ ಅಡಿಕೆಯನ್ನು ಪರೀಕ್ಷೆಗೆ ಒಳಪಡಿಸಿರುವುದೇ ಕಾರಣ. ಇಂತಹ ಜಾಲವನ್ನು ತಡೆಯದೇ ಇದ್ದಲ್ಲಿ ರೈತರು ಬೆಳೆದ ಅಡಿಕೆಗೆ ಬೆಲೆ ಕಡಿಮೆಯಾಗಿ ಜೀವನ ಕಷ್ಟ ಆಗಬಹುದು ಎಂದು ಪ್ರಗತಿ ಪರ ಕೃಷಿಕ ಈಶ್ವರ ಭಟ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಹಿರಿಯ ಅಧಿಕಾರಿಗಳು ತನಿಖೆ ಬಗ್ಗೆ ವಿವರ ನೀಡಲು ನಿರಾಕರಿಸಿದ್ದು, ಒಂದು ತಂಡ ಮಂಗಳೂರು ಮತ್ತು ಕೇರಳದಲ್ಲಿ ಬೀಡು ಬಿಟ್ಟು ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರಕು ಮತ್ತು ಸೇವಾ(CGST) ಇಲಾಖೆ ನೀಡಿದ ಸುಳಿವು ಆಧರಿಸಿ ಮಹಾರಾಷ್ಟ್ರದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, CGST ಯಿಂದ ತೆರಿಗೆ ವಂಚನೆಗೆ ಸಂಬಂಧಪಟ್ಟ ಅಡಿಕೆ ಸಾಗಾಟದಾರರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.

ಮಂಗಳೂರು CGST ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತಮ್ಮ ಇಲಾಖೆಯು ತೆರಿಗೆ ವಂಚನೆ ಬಗ್ಗೆ ಕಾರ್ಯ ನಿರ್ವಹಿಸುತ್ತದೆ. ಅಂತಹ ಸಂದರ್ಭದಲ್ಲಿ ಪತ್ತೆಯಾಗುವ ಕ್ರಿಮಿನಲ್ ಅಪರಾಧಗಳನ್ನು ಸಂಬಂಧಪಟ್ಟ ಇಲಾಖೆಗಳು ನಡೆಸುತ್ತವೆ ಎಂದಿದ್ದಾರೆ.

ಕ್ಯಾಂಪ್ಕೋ ನೂತನ ಅಧ್ಯಕ್ಷ ಎಸ್. ಆರ್. ಸತೀಶ್‌ಚಂದ್ರ ಅವರು 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ತಾವು ಕ್ಯಾಂಪ್ಕೋ ನಿರ್ದೇಶಕರಾಗಿದ್ದಾಗಲೇ ಅಡಿಕೆ ಅಕ್ರಮ ಆಮದು ಬಗ್ಗೆ ಮಾತನಾಡಿದ್ದೆ. ಇಂತಹ ಅಕ್ರಮ ವಹಿವಾಟು ಮತ್ತು ಕಲಬೆರಕೆ ತಡೆಗಟ್ಟಲು ಸರ್ಕಾರದ ವಿವಿಧ ಇಲಾಖೆಗಳು ಪ್ರಯತ್ನಿಸಬೇಕು. ಆ ಮೂಲಕ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ರೋ-ರೋ ಸುಲಭ ಮಾರ್ಗ?

ರೈಲ್ವೆಯ ರೋ-ರೋ ಸೇವೆ ಮಂಗಳೂರಿನ ಸುರತ್ಕಲ್ ನಿಂದ ಮಹಾರಾಷ್ಟ್ರದ ಕೊಲಾಡ್ ವರೆಗಿದೆ. ಈ ಸೇವೆಯಲ್ಲಿ ಹೆಚ್ಚಾಗಿ ಯಾವುದೇ ತಪಾಸಣೆ ಇರುವುದಿಲ್ಲ. ರೋ-ರೋ ಕೇಂದ್ರಗಳಲ್ಲಿ ಲಾರಿಗಳಿಗೆ ಈ ಕಲಬೆರಕೆ ಅಡಿಕೆ ತುಂಬಲಾಗಿದೆ ಎಂದು ಹೇಳಿ ಸರ್ವಿಸ್ ಚಾರ್ಜ್ ಕೊಡುತ್ತಾರೆ. ಇಲ್ಲಿ CGST ಅಧಿಕಾರಿಗಳು ಇದ್ದರೂ ಅಕ್ರಮವಾಗಿ ಆಮದಾದ ಅಡಿಕೆ, ಕೇರಳ ಮತ್ತು ಮಂಗಳೂರು ಗೋದಾಮುಗಳ ಬಿಲ್ ಮತ್ತು ಇತರ ದಾಖಲೆ ತೋರಿಸಿ ಸಾಗಾಟ ನಡೆಯುತ್ತದೆ.

ಮೂಲಗಳ ಪ್ರಕಾರ ಇಂತಹ ಸಾಗಾಟಗಾರರು ಗೋದಾಮು ಮತ್ತು ಗ್ರೇಡಿಂಗ್ ಫ್ಯಾಕ್ಟರಿಗಳ ನಕಲಿ ದಾಖಲೆ ಹೊಂದಿರುತ್ತಾರೆ. 2024 ರಲ್ಲಿ 200 ಕೋಟಿ ಮೌಲ್ಯದ ಅಡಿಕೆ ಸಾಗಾಟದ ಅಡಿಕೆಯನ್ನು ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದು, ಅದು ಎನ್.ಡಿ. ಟ್ರೇಡರ್ಸ್, ಬಂದರು, ಮಂಗಳೂರು, ಎಂಬುದಾಗಿ ಗುಜರಾತ್ ಮೂಲದ ವ್ಯಕ್ತಿಯ ಹೆಸರಲ್ಲಿ ದಾಖಲೆ ತೋರಿಸಲಾಗಿತ್ತು. ಅಸಲಿಗೆ ಅಂತಹ ಅಂಗಡಿಯೇ ಇಲ್ಲವಾಗಿತ್ತು.

ಕಲಬೆರಕೆ ಜಾಲದ ಬಗ್ಗೆ ರೈತರಲ್ಲಿ ಆತಂಕ!

ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಈ ಜಿಲ್ಲೆಗಳ ಅಡಿಕೆ ವ್ಯಾಪಾರವು ಬಂದರು ನಗರಿ ಮಂಗಳೂರು ಕೇಂದ್ರಿತವಾಗಿದೆ. ಹಾಗಾಗಿ ಕಲಬೆರಕೆ ಜಾಲಕ್ಕೆ ಬಂದರು ನಗರಿಯ ಅಭಯ ಇರುವುದು ಹೆಚ್ಚಿನ ಬೆಳೆಗಾಗಿ ಕಾಯುತ್ತಿರುವ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹೆಚ್ಚಿನ ರೈತರು ಇದೇ ತೆರನಾದ ಜಾಲದ ಬಗ್ಗೆ ಈ ಹಿಂದೆಯೇ ಅನುಮಾನ ವ್ಯಕ್ತ ಪಡಿಸಿದ್ದರು. ಇಂತಹ ಜಾಲವೇ ಬೆಲೆ ಏರಿಕೆ-ಇಳಿಕೆಯಲ್ಲಿ ಆಟವಾಡುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ.

ಪ್ರಗತಿಪರ ಕೃಷಿಕ ಪದ್ಮನಾಭ ರೈ ಪ್ರಕಾರ, "ಅಡಿಕೆಯ ಬೆಲೆ ಯಾವತ್ತೂ ಹೆಚ್ಚು ಕಡಿಮೆ ಆಗುವಂತಿಲ್ಲ. ಒಂದು ವೇಳೆ ಆದರೂ ₹10- ₹20 ರ ಒಳಗೆ ಇರಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಪರೀತ ಏರು-ಪೇರು ಆಗುತ್ತಿದೆ. ಇದಕ್ಕೆ ಇಂತಹ ಕಲಬೆರಕೆ ಜಾಲವೇ ಕಾರಣ ಇರಬಹುದು. ಇಂತಹ ಜಾಲಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಅಡಿಕೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಬಹುದು. ಸೆಕೆಂಡ್ ಕ್ವಾಲಿಟಿ ಅಡಿಕೆಗೆ ಹೆಚ್ಚಿನ ದರ ಸಿಕ್ಕರೆ ಅಡಿಕೆ ತನ್ನ ನಿಜ ಮಾರ್ಕೆಟ್ ಕಳೆದುಕೊಳ್ಳಲಿದೆ" ಎನ್ನುತ್ತಾರೆ.

ಕೃಷಿಕ ಎಲ್ಯಣ್ಣ ಪೂಜಾರಿ ಅವರು ಹೇಳುವ ಪ್ರಕಾರ, ಅಡಿಕೆಯ ನಿಜ ಮಾರುಕಟ್ಟೆ ಕಳೆದುಕೊಂಡರೆ, ಬೆಳೆಗಾರರು ದಿಕ್ಕಾಪಾಲು ಆಗಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಪಾಲು ಅಡಿಕೆಯನ್ನು ನಂಬಿಯೇ ಜೀವನ ನಡೆಯುತ್ತಿದೆ. ಏಕೆಂದರೆ,ಬಹುಪಾಲು ಹೊಲ-ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಪರಿವರ್ತಿಸಲಾಗಿದೆ. "ಕಲಬೆರಕೆ ಅಡಿಕೆ ಹೊರರಾಜ್ಯಗಳಲ್ಲಿ ಪ್ರಾಮುಖ್ಯತೆ ಪಡೆದರೆ, ಜಿಲ್ಲೆಯ ಅಡಿಕೆಯ ಮೌಲ್ಯ ಕೂಡಾ ಕುಸಿಯುತ್ತದೆ. ರೈತರು ಕಂಗೆಟ್ಟು ಹೋಗಬಹುದು " ಎನ್ನುವುದು ಅವರ ಅಭಿಪ್ರಾಯವಾಗಿದೆ.

ಕಲಬೆರಕೆ ಕ್ರಮ ಹೇಗೆ?

ಕಲಬೆರಕೆಗೆ ಬಳಸುವ ಕೆಳ ಗುಣಮಟ್ಟದ ಅಡಿಕೆಯನ್ನು ಮೊದಲಿಗೆ ಸಣ್ಣ, ಮಧ್ಯಮ ಮತ್ತು ದೊಡ್ಡದು ಎಂಬ ಗಾತ್ರಗಳಿಗೆ ವಿಂಗಡಿಸಲಾಗುತ್ತದೆ. ಇದನ್ನು ಗರ್ಬೋಲ್ ಎಂದೂ ಗ್ರೇಡಿಂಗ್ ಎಂದೂ ಕರೆಯಲಾಗುತ್ತದೆ. ಹೀಗೆ ಸೈಜ್ ಮಾಡಲಾದ ಅಡಿಕೆಯನ್ನು ಮೊದಲಿಗೆ ಹುಡಿ ರೂಪದ ರಾಸಾಯನಿಕ ಒಂದನ್ನು ಬೆರಸಿಡಲಾಗುತ್ತದೆ. ಮಾರನೇ ದಿನ ಇದಕ್ಕೆ ದ್ರವ ರೂಪದ ರಾಸಾಯನಿಕಗಳ ಮಿಶ್ರಣ ಸ್ಪ್ರೇ ಮಾಡಿ ಕೂಡಲೇ ಬೃಹತ್ ಫ್ಯಾನ್ ಗಳ ಗಾಳಿಗೆ ಒಡ್ಡಿ, ತೇವಾಂಶ ಆರುವಂತೆ ಮಾಡಿ ಬಳಿಕ ಇನ್ನೊಂದು ಅಧಿಕ ಉಷ್ಣತೆ ಇರುವ ಇನ್ನೊಂದು ಕೋಣೆಗೆ ವರ್ಗಾಯಿಸಿ ಅಲ್ಲಿ ಸಂಪೂರ್ಣ ಒಣಗುವಂತೆ ಮಾಡಲಾಗುತ್ತದೆ. ಈ ಕೆಲಸಕ್ಕೆ ಪುರುಷ ಕಾರ್ಮಿಕರನ್ನು ಬಳಸಲಾಗುತ್ತದೆ. ಹಾಗೆಯೇ ರಾತ್ರಿ ಪಾಳಿಯಲ್ಲಿ ಕಾರ್ಮಿಕರು ದುಡಿಯುತ್ತಾರೆ.

ಅಡಿಕೆ ಆಮದು ಏಕೆ?

ಭಾರತವು ದೊಡ್ಡ ಪ್ರಮಾಣದಲ್ಲಿ ಅಡಿಕೆ ಉತ್ಪಾದಿಸಿದರೂ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದೇಕೆ ಎಂಬ ಪ್ರಶ್ನೆ ಮೂಡುತ್ತಿದೆ. ಆದರೆ ಆಮದು ಮಾಡಿಕೊಳ್ಳುವುದಕ್ಕೂ ಕೆಲ ಕಾರಣಗಳಿವೆ.

ಭಾರತದಲ್ಲಿ ಅಡಿಕೆ ಸಾಂಪ್ರದಾಯಿಕ ಕೃಷಿ ಬೆಳೆಯಾಗಿದ್ದರೆ, ಇಂಡೋನೇಷ್ಯಾ, ಮ್ಯಾನ್ಮಾರ್, ಮಲೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಅಡಿಕೆಯು ಅರಣ್ಯ ಉತ್ಪನ್ನವಾಗಿ ಪರಿಗಣಿಸಲಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ಮಾತ್ರ ಅಲ್ಲಿನ ದೇಶಗಳಲ್ಲಿ ಅಡಿಕೆಯನ್ನು ಕೃಷಿ ಬೆಳೆ ರೂಪದಲ್ಲಿ ಬೆಳೆಯಲು ಆರಂಭಿಸಲಾಗಿದೆ.

ವಿದೇಶಿ ಅಡಿಕೆಯು, ದೇಶೀಯ ಅಡಿಕೆ ಬೆಲೆಯ ಶೇ.50ಕ್ಕಿಂತಲೂ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಕಡಿಮೆ ದರದೊಂದಿಗೆ ಗುಣಮಟ್ಟವೂ ಕಡಿಮೆ ಇರುವ ಈ ಅಡಿಕೆಯನ್ನು ಆಮದು ಮಾಡಿಕೊಂಡು, ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪದ್ಧತಿ ಹಿಂದಿನಿಂದಲೂ ನಡೆಯುತ್ತಿದೆ. ಹಾಗಾಗಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಸರ್ಕಾರದ ಆಮದು ಕ್ರಮದಿಂದ ಸ್ಥಳೀಯ ಅಡಿಕೆ ಬೆಳೆಗಾರರು ಉತ್ತಮ ಬೆಲೆ ಸಿಗದೇ ಕಂಗಾಲಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

2022–23ನೇ ಸಾಲಿನಲ್ಲಿ ಭಾರತಕ್ಕೆ 258.19 ಡಾಲರ್ ಮೌಲ್ಯದ 73,983 ಟನ್ ಅಡಿಕೆ ಆಮದಾಗಿತ್ತು.

2023–24ನೇ ಸಾಲಿನಲ್ಲಿ ಏಪ್ರಿಲ್‌ನಿಂದ ನವೆಂಬರ್ ವರೆಗೆ 118.45 ಡಾಲರ್ ಮೌಲ್ಯದ 30,271 ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗಿತ್ತು. ಹಾಗೆಯೇ 2024–25ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಆಗಸ್ಟ್ ವರೆಗೆ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 30 ಸಾವಿರ ಟನ್‌ಗೂ ಅಧಿಕ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ.

Read More
Next Story