
Car Sunroof: ಸನ್‌ರೂಫ್ ಸಂಭ್ರಮದ ಮರೆಯಲ್ಲಿದೆ ಅಪಾಯದ ಸುಳಿ: ಕಬ್ಬಿಣದ ತಡೆಗೋಡೆ ಬಡಿದು ಮಗು ಗಂಭೀರ
ಚಲಿಸುವ ವಾಹನದಿಂದ ದೇಹದ ಯಾವುದೇ ಭಾಗವನ್ನು ಹೊರಹಾಕುವುದು, ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಇದನ್ನು ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಚಲಿಸುತ್ತಿದ್ದ ಕಾರಿನ ಸನ್‌ರೂಫ್‌ನಿಂದ ಹೊರಗೆ ಇಣುಕುತ್ತಿದ್ದ ಮಗುವೊಂದು, ಎತ್ತರ ನಿರ್ಬಂಧದ ತಡೆಗೋಡೆಗೆ ತಲೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯು, ಸನ್‌ರೂಫ್ ಬಳಕೆಯ ಅಪಾಯಕಾರಿ ಪ್ರವೃತ್ತಿ ಮತ್ತು ಪೋಷಕರ ಬೇಜವಾಬ್ದಾರಿತನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಪೋಷಕರಿಂದ ಹಿಡಿದು, ಕಾನೂನು ಜಾರಿ ಸಂಸ್ಥೆಗಳು ಮತ್ತು ಕಾರು ತಯಾರಕ ಕಂಪನಿಗಳವರೆಗೆ - ತಮ್ಮ ಜವಾಬ್ದಾರಿಯನ್ನು ಅರಿಯಲು ಬಡಿದ ಎಚ್ಚರಿಕೆಯ ಗಂಟೆ.
ಸೆಪ್ಟೆಂಬರ್ 6ರಂದು, ಆರು ವರ್ಷದ ಬಾಲಕನೊಬ್ಬ ತನ್ನ ಕುಟುಂಬದೊಂದಿಗೆ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸನ್‌ರೂಫ್‌ನಿಂದ ಹೊರಗೆ ನಿಂತಿದ್ದ. ಜಿಕೆವಿಕೆ ರಸ್ತೆಯಲ್ಲಿದ್ದ ರೈಲ್ವೆ ತಡೆಗೋಡೆಗೆ ಬಾಲಕನ ತಲೆ ಬಲವಾಗಿ ಬಡಿದು, ಗಂಭೀರ ಗಾಯಗಳಾಗಿವೆ. ಹಿಂಬದಿಯಿಂದ ಬರುತ್ತಿದ್ದ ವಾಹನದ ಡ್ಯಾಶ್ ಕ್ಯಾಮ್ನಲ್ಲಿ ಸೆರೆಯಾದ ಈ ದೃಶ್ಯವು ಆಘಾತಕಾರಿಯಾಗಿದೆ. ಅಲ್ಲದೆ, ಸನ್‌ರೂಫ್‌ಗಳನ್ನು ಮನರಂಜನೆಯ ಸಾಧನವಾಗಿ ನೋಡುವ ಮನಸ್ಥಿತಿಗಳಿಗೆ ಎಚ್ಚರಿಕೆ ನೀಡಿದೆ.
ಸನ್‌ರೂಫ್‌ನ ನಿಜವಾದ ಉಪಯೋಗವೇನು?
ಸನ್‌ರೂಫ್‌ಗಳು ಕಾರಿನೊಳಗೆ ಹೆಚ್ಚಿನ ಬೆಳಕು ಮತ್ತು ಗಾಳಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಒಂದು ವಿನ್ಯಾಸ ವೈಶಿಷ್ಟ್ಯವಾಗಿದೆ. ಇದು ಕಾರಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ದೀರ್ಘ ಪ್ರಯಾಣದ ಸಮಯದಲ್ಲಿ ಉಲ್ಲಾಸದಾಯಕ ವಾತಾವರಣವನ್ನು ಸೃಷ್ಟಿಸುತ್ತದೆ. ಬಿಸಿಲಿನ ದಿನಗಳಲ್ಲಿ ಕಾರನ್ನು ತಂಪಾಗಿಸಲು, ನಿಂತಿರುವ ವಾಹನದಿಂದ ಬಿಸಿ ಗಾಳಿಯನ್ನು ಹೊರಹಾಕಲು ಸಹ ಇದು ಉಪಯುಕ್ತ. ಆದರೆ, ಇದು ದೇಹವನ್ನು ಹೊರಹಾಕಿ ನಿಲ್ಲುವ ವೇದಿಕೆಯಲ್ಲ. ಸದಾ ಶೀತ ಹಾಗೂ ಹಚ್ಚ ಹಸಿರಾಗಿರುವ ವಿದೇಶಗಳಲ್ಲಿ ಸನ್‌ರೂಫ್ ಹೆಚ್ಚು ಜನಪ್ರಿಯ. ಭಾರತಕ್ಕೆ ಕಾಲಿಟ್ಟ ಬಳಿಕ ಇಲ್ಲಿನ ಜನರೂ ತಮ್ಮ ಕಾರಲ್ಲೂ ಇರಲಿ ಎಂದು ಬಯಸುತ್ತಾರೆ. ಕಾರು ತಯಾರಕರೂ ಈ ಫೀಚರ್ ಕೊಟ್ಟು ಹೆಚ್ಚುವರಿ ದುಡ್ಡು ಗಳಿಸುತ್ತಾರೆ.
ಸನ್‌ರೂಫ್ ಬಳಕೆಯ ತಪ್ಪುಗಳು ಮತ್ತು ಕಾನೂನು ಏನು ಹೇಳುತ್ತದೆ?
ಚಲಿಸುವ ವಾಹನದಿಂದ ದೇಹದ ಯಾವುದೇ ಭಾಗವನ್ನು ಹೊರಹಾಕುವುದು, ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಇದನ್ನು ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಕೃತ್ಯಗಳಿಗೆ ಚಾಲಕನ ಮೇಲೆ ಪ್ರಕರಣ ದಾಖಲಿಸಲು ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬೆಂಗಳೂರಿನ ಘಟನೆಯಲ್ಲಿ, ಚಾಲಕನ ವಿರುದ್ಧ ಸೆಕ್ಷನ್ 281 (ಅಜಾಗರೂಕ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೋಷಕರ ಪಾತ್ರ ಮತ್ತು ಜವಾಬ್ದಾರಿಯೇನು?
ಮಕ್ಕಳ ಸುರಕ್ಷತೆಯು ಪೋಷಕರ ಪ್ರಥಮ ಆದ್ಯತೆಯಾಗಿರಬೇಕು. ಸನ್‌ರೂಫ್‌ನಿಂದ ಹೊರಗೆ ನಿಲ್ಲುವುದು ಒಂದು ಸಾಹಸ ಅಥವಾ ಸಂಭ್ರಮದ ಕ್ಷಣವೆಂದು ಬಿಂಬಿಸುವ ಬದಲು, ಅದರ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಮತ್ತು ಶೇರ್‌ಗಳಿಗಾಗಿ ಮಕ್ಕಳ ಜೀವವನ್ನು ಪಣಕ್ಕಿಡುವ ಪ್ರವೃತ್ತಿಯನ್ನು ಪೋಷಕರು ಕೈಬಿಡಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಮಕ್ಕಳು ಸೀಟ್ ಬೆಲ್ಟ್ ಧರಿಸುವುದನ್ನು ಮತ್ತು ಚೈಲ್ಡ್ ಲಾಕ್ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ಪೊಲೀಸರ ಜವಾಬ್ದಾರಿಯೇನು?
ಸನ್‌ರೂಫ್ ದುರ್ಬಳಕೆಯಂತಹ ಪ್ರಕರಣಗಳು ಕಂಡುಬಂದಾಗ, ಕೇವಲ ದಂಡ ವಿಧಿಸಿ ಕೈತೊಳೆದುಕೊಳ್ಳದೆ, ಚಾಲಕರನ್ನು ಮತ್ತು ಪೋಷಕರನ್ನು ಕರೆದು ಕೌನ್ಸೆಲಿಂಗ್ ಮಾಡಬೇಕಾದ ಅವಶ್ಯಕತೆಯಿದೆ. ಇಂತಹ ಘಟನೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ, ಇಂತಹ ಅಪಾಯಕಾರಿ ಪ್ರವೃತ್ತಿಗಳಿಗೆ ಕಡಿವಾಣ ಹಾಕಬಹುದು.
ಕಾರು ತಯಾರಕ ಕಂಪನಿಗಳ ಹೊಣೆಗಾರಿಕೆ
ಕಾರು ಮಾರಾಟ ಮಾಡುವಾಗ, ಕಂಪನಿಗಳು ಸನ್‌ರೂಫ್‌ನ ಸರಿಯಾದ ಬಳಕೆ ಮತ್ತು ಅದರ ದುರ್ಬಳಕೆಯಿಂದಾಗುವ ಅಪಾಯಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಕಾರಿನ ಕೈಪಿಡಿಯಲ್ಲಿ (user manual) ಸುರಕ್ಷತಾ ಎಚ್ಚರಿಕೆಗಳನ್ನು ಪ್ರಮುಖವಾಗಿ ನಮೂದಿಸಬೇಕು. ಸಾಧ್ಯವಾದರೆ, ಚಲಿಸುತ್ತಿರುವಾಗ ಸನ್‌ರೂಫ್‌ನಿಂದ ವ್ಯಕ್ತಿಗಳು ಹೊರಬರುವುದನ್ನು ತಡೆಯುವಂತಹ ಸುರಕ್ಷತಾ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಬೇಕು.