
Crime News : ಕಾರು ಗುದ್ದಿಸಿ ನೆರೆ ಮನೆಯ ವ್ಯಕ್ತಿಯನ್ನುಕೊಲ್ಲಲು ಯತ್ನಿಸಿದ ಬಿಎಸ್ಎನ್ಎಲ್ ಮಾಜಿ ಉದ್ಯೋಗಿ, ಕಾಂಪೌಂಡ್‌ನಲ್ಲಿ ನೇತಾಡಿದ ಮಹಿಳೆ!
ಕೊಲೆ ಯತ್ನ ನಡೆಸಿದವನನ್ನು 69 ವರ್ಷದ ಸತೀಶ ಎಂದು ಗುರುತಿಸಲಾಗಿದೆ. ಅವರು ತಮ್ಮ ನೆರೆ ಮನೆಯ ಮುರಳಿ ಪ್ರಸಾದ್ ಎಂಬುವರನ್ನು ಕೊಲ್ಲುವುದಕ್ಕೆ ಯತ್ನಿಸಿದ್ದಾರೆ. ತನ್ನ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಮುರಳಿ ಅವರ ಬೈಕ್ಗೆ ಗುದ್ದಿಸಿದ್ದ.
ನೆರೆಹೊರೆಯ ಇಬ್ಬರು ಪುರುಷರ ನಡುವಿನ ಗಲಾಟೆಯೊಂದು ಕೊಲೆ ಯತ್ನಕ್ಕೆ ತಿರುಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ನಡೆದಿದೆ. ಅಚ್ಚರಿಯೆಂದರೆ ಅವರಿಬ್ಬರ ದ್ವೇಷಕ್ಕೆ ಅಮಾಯಕ ಮಹಿಳೆಯೊಬ್ಬರು ಕಾಂಪೌಂಡ್‌ನಲ್ಲಿ ನೇತಾಡುವಂತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಲೆಗೆ ಯತ್ನಿಸಿದವ ಬಿಎಸ್ಎನ್ಎನ್ ಮಾಜಿ ಉದ್ಯೋಗಿಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಯತ್ನ ನಡೆಸಿದವನನ್ನು ಸತೀಶ ಎಂದು ಗುರುತಿಸಲಾಗಿದೆ. ಆತ ತಮ್ಮ ನೆರೆ ಮನೆಯ ಮುರಳಿ ಪ್ರಸಾದ್ ಎಂಬುವರನ್ನು ಕೊಲ್ಲುವುದಕ್ಕೆ ಯತ್ನಿಸಿದ್ದ. ತಮ್ಮ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಮುರಳಿ ಪ್ರಯಾಣಿಸುತ್ತಿದ್ದ ಬೈಕ್ಗೆ ಗುದ್ದಿಸಿದ್ದ. ಕಾರು ಬೈಕ್ಗೆ ಗುದ್ದುವ ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೂ ಡಿಕ್ಕಿ ಹೊಡೆದಿದೆ. ಎತ್ತರಕ್ಕೆ ಎಗರಿದ ಮಹಿಳೆ ರಸ್ತೆ ಸಮೀಪದ ಕಾಂಪೌಂಡ್ಗೆ ಹಾಕಲಾಗಿದ್ದ ಕಬ್ಬಿಣದ ಸರಪಳಿಯಲ್ಲಿ ಸಿಲುಕಿಕೊಂಡು ತಲೆ ಕೆಳಗಾಗಿ ನೇತಾಡಿದ್ದಾರೆ. ಈ ವಿಡಿಯೊ ಭಯಾನಕವಾಗಿದೆ.
ಹಳೆಯ ದ್ವೇಷ
ಕೊಲೆ ಮಾಡಲು ಯತ್ನಿಸಿದ್ದ 69 ವರ್ಷದ ಸತೀಶ ಹಾಗೂ ಮುರಳಿ ಮಂಗಳೂರಿನ ಬಿಜೈನ ಕಾಪಿಕಾಡ್ ನಿವಾಸಿಗಳು. ನೆರೆಹೊರೆಯವರಾಗಿದ್ದ ಅವರ ನಡುವೆ ಹಳೆಯ ಮನಸ್ತಾಪವಿತ್ತು. ಹೀಗಾಗಿ ಮುರಳಿ ಪ್ರಸಾದ್ ಅವರನ್ನು ಕೊಲ್ಲಲು ಸತೀಶ್ ಕುಮಾರ್ ಯೋಜನೆ ಹಾಕಿದ್ದ. ಅದರಂತೆ, ಗುರುವಾರ ಮುರಳಿ ಪ್ರಸಾದ್ ಬೈಕ್‌ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ ತಮ್ಮ ಕಾರಿನಲ್ಲಿ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಾರು ಅತಿ ವೇಗದಲ್ಲಿ ಸಾಗಿ ವಿರುದ್ಧ ದಿಕ್ಕಿನಿಂದ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ವೇಗಕ್ಕೆ ಮಹಿಳೆ ಮನೆಯೊಂದರ ಕಾಂಪೌಂಡ್ ಮೇಲೆ ನೇತಾಡಿದ್ದಾರೆ.
ಸ್ಥಳೀಯರು ಓಡಿಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಮಾಲೀಕ ಸತೀಶ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನದ ಪ್ರಕರಣ ದಾಖಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣವೂ ದಾಖಲಾಗಿದೆ.
ಆರೋಪಿ ಸತೀಶ್ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.