ಸಿಬಿಐ ನಿವೃತ್ತ ಎಸ್‌ಪಿಗೆ ಯಾಮಾರಿಸಿ 97 ಲಕ್ಷ ರೂ. ಗಳೊಂದಿಗೆ ಕಾರು ಚಾಲಕ ಪರಾರಿ ; ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ ಪೊಲೀಸರು
x

ಸಿಬಿಐ ನಿವೃತ್ತ ಎಸ್‌ಪಿಗೆ ಯಾಮಾರಿಸಿ 97 ಲಕ್ಷ ರೂ. ಗಳೊಂದಿಗೆ ಕಾರು ಚಾಲಕ ಪರಾರಿ ; ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ ಪೊಲೀಸರು

ಸಿಬಿಐ ನಿವೃತ್ತ ಎಸ್ಪಿ ಗುರುಪ್ರಸಾದ್ ಅವರು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್, ಪಿಎಸ್‌ಐ ಈರೇಶ್ ನೇತೃತ್ವದ ತಂಡ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದೆ.


ಚಿತ್ರದುರ್ಗದ ಚಳ್ಳಕೆರೆ ಪಟ್ಟಣದಲ್ಲಿ ಸಿಬಿಐ (CBI) ನಿವೃತ್ತ ಎಸ್‌ಪಿ ಗುರುಪ್ರಸಾದ್ ಅವರನ್ನು ಯಾಮಾರಿಸಿ, 97 ಲಕ್ಷ ರೂ. ಸಮೇತ ಕಾರು ಚಾಲಕ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಆದರೆ ಕೆಲವೇ ಗಂಟೆಗಳಲ್ಲಿ ಚಳ್ಳಕೆರೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಆರೋಪಿ ಚಾಲಕನನ್ನು ಬೆನ್ನಟ್ಟಿ ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಗುರುಪ್ರಸಾದ್ ಅವರು ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಬಳ್ಳಾರಿಗೆ ತೆರಳಿ, ಅಲ್ಲಿ ಜಮೀನು ಮಾರಾಟ ಮಾಡಿ 97 ಲಕ್ಷ ರೂ. ಪಡೆದಿದ್ದರು. ನಂತರ ಕಾರಿನಲ್ಲಿ ವಾಪಸ್ ಬೆಂಗಳೂರಿಗೆ ಹೊರಟಿದ್ದರು. ಮಧ್ಯಾಹ್ನದ ವೇಳೆಗೆ ಚಳ್ಳಕೆರೆ ಪಟ್ಟಣದ ಹೋಟೆಲ್ ಬಳಿ ಊಟಕ್ಕಾಗಿ ನಿಂತಾಗ, ಕಾರು ಚಾಲಕ ರಮೇಶ್ ಎಂಬಾತ ಗುರುಪ್ರಸಾದ್ ಅವರನ್ನು ಯಾಮಾರಿಸಿ, ಹಣದೊಂದಿಗೆ ಪರಾರಿಯಾಗಿದ್ದ.

ತಕ್ಷಣ ಗುರುಪ್ರಸಾದ್ ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್, ಪಿಎಸ್‌ಐ ಈರೇಶ್ ನೇತೃತ್ವದ ತಂಡ ಆರೋಪಿಯನ್ನು ಬೆನ್ನಟ್ಟಿತು.

ಆರೋಪಿಯು ಪಾವಗಡದ ಕಡೆಗೆ ವೇಗವಾಗಿ ಹೋಗುತ್ತಿದ್ದಾಗ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಆಗ ಬೆನ್ನಟ್ಟಿ ಬರುತ್ತಿದ್ದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 97 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಚಳ್ಳಕೆರೆ ಪೊಲೀಸರ ಚುರುಕು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

Read More
Next Story