![Namma Metro Fare Hike | ಪ್ರಯಾಣಿಕರ ಧಾವಂತವೇ ಬಿಎಂಆರ್‌ಸಿಎಲ್ ಬಂಡವಾಳ Namma Metro Fare Hike | ಪ್ರಯಾಣಿಕರ ಧಾವಂತವೇ ಬಿಎಂಆರ್‌ಸಿಎಲ್ ಬಂಡವಾಳ](https://karnataka.thefederal.com/h-upload/2025/02/11/512085-metrotrai.webp)
Namma Metro Fare Hike | ಪ್ರಯಾಣಿಕರ ಧಾವಂತವೇ ಬಿಎಂಆರ್‌ಸಿಎಲ್ ಬಂಡವಾಳ
ಟ್ರಾಫಿಕ್ ಜಾಮ್‌ನಿಂದ ಪಾರಾಗಲು ʼಮೆಟ್ರೋʼ ಎಡೆಗಿನ ಬಡವರು ಹಾಗೂ ಮಧ್ಯಮ ವರ್ಗದವರ ಅವಲಂಬನೆಯನ್ನೇ ಬಂಡವಾಳ ಮಾಡಿಕೊಂಡು ಸುಲಿಗೆಗೆ ಇಳಿದಿರುವ ಬಿಎಂಆರ್‌ಸಿಎಲ್ ವಿರುದ್ಧ ಅಸಹನೆ ಮಡುಗಟ್ಟುತ್ತಿದೆ.
ಸದಾ ಗಿಜಿಗುಡುವ ವಾಹನ ದಟ್ಟಣೆ, ವಿಪರೀತ ಮಾಲಿನ್ಯದಿಂದ ಬಸವಳಿದಿದ್ದ ಬೆಂಗಳೂರಿಗೆ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯಾಗಿ ಬಂದ ʼನಮ್ಮ ಮೆಟ್ರೋʼ ಇದೀಗ ಶ್ರೀಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ.
ಟ್ರಾಫಿಕ್ ಜಾಮ್‌ನಿಂದ ಪಾರಾಗಲು ʼಮೆಟ್ರೋʼ ಎಡೆಗಿನ ಬಡವರು ಹಾಗೂ ಮಧ್ಯಮ ವರ್ಗದವರ ಅವಲಂಬನೆಯನ್ನೇ ಬಂಡವಾಳ ಮಾಡಿಕೊಂಡು ಸುಲಿಗೆಗೆ ಇಳಿದಿರುವ ಬಿಎಂಆರ್‌ಸಿಎಲ್ ವಿರುದ್ಧ ಅಸಹನೆ ಸ್ಫೋಟಗೊಂಡಿದೆ. ಪ್ರಯಾಣಿಕರ ಅನಿವಾರ್ಯತೆಯನ್ನು ಮೆಟ್ರೋ ಸಾರಿಗೆ ನಿಗಮ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜನರ ಧಾವಂತವೇ ʼಮೆಟ್ರೋʼ ಬಂಡವಾಳ
ಸಂಚಾರ ದಟ್ಟಣೆಯು ಬೆಂಗಳೂರಿಗೆ ಕುಖ್ಯಾತಿ ತಂದುಕೊಟ್ಟಿದೆ. ಸಂಚಾರ ದಟ್ಟಣೆಯ ಸಮಯದಲ್ಲಿ(ಪೀಕ್ ಅವರ್) ಒಂದು ಕಿ.ಮೀ. ದೂರ ತೆವಳಲು ಕನಿಷ್ಠ 10 ನಿಮಿಷ ಹಿಡಿಯುತ್ತದೆ. ಕೆಲವೊಮ್ಮೆ ಇದು ಹೆಚ್ಚಾಗಲೂಬಹುದು. ಆದರೆ, ಕಚೇರಿ, ಐಟಿ-ಬಿಟಿ ಹಾಗೂ ಇತ್ಯಾದಿ ಕೆಲಸಗಳಿಗೆ ತೆರಳುವವರು ವಾಹನ ದಟ್ಟಣೆಯ ಭೀತಿಯಿಂದ ಮೆಟ್ರೋದತ್ತ ಮುಖ ಮಾಡುತ್ತಾರೆ. ಮೆಟ್ರೋದಲ್ಲಿ ಪ್ರತಿನಿತ್ಯ 8-9 ಲಕ್ಷ ಮಂದಿ ಪ್ರಯಾಣಿಸುತ್ತಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಹೀಗಿರುವಾಗ ಏಕಾಏಕಿ ಪ್ರಯಾಣ ದರ ಏರಿಸಿರುವುದರಿಂದ ಪರಿಸರ ಸ್ನೇಹಿ ಮೆಟ್ರೋ ಸಾರಿಗೆ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ.
ಜನರ ಅನಿವಾರ್ಯತೆಗಳನ್ನು ಗಮನಿಸಿಯೇ ಪ್ರಯಾಣ ದರ ಏರಿಕೆ ಮಾಡಿ, ಉಳ್ಳವರಿಗಷ್ಟೇ ಮೆಟ್ರೋ ಸಾರಿಗೆ ಎಂಬ ಸಂದೇಶ ರವಾನಿಸಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.
ಬಸ್ ಪ್ರಯಾಣ ದರ, ವಿದ್ಯುತ್ ಶುಲ್ಕ, ಹಾಲಿನ ದರ ಸೇರಿದಂತೆ ಒಂದರ ಹಿಂದೆ ಒಂದು ದರಗಳು ಏರಿಕೆಯಾಗುತ್ತಲೇ ಇವೆ. ಮೆಟ್ರೋ ಪ್ರಯಾಣ ದರ ಡಬಲ್ ಆಗಿದೆ. ಹೀಗಾದರೆ ಬೆಂಗಳೂರಿನಲ್ಲಿ ಜೀವನ ಮಾಡುವುದೇ ಕಷ್ಟವಾಗಲಿದೆ. ಯಾವ ಸರ್ಕಾರ ಕೂಡ ಜನ ಸಾಮಾನ್ಯರಿಗೆ ಅನುಕೂಲಕರವಾದ ಜೀವನ ಕಲ್ಪಿಸುತ್ತಿಲ್ಲ. ಹೀಗೆ ಮುಂದುವರಿದರೆ ಬಡವರು, ಮಧ್ಯಮ ವರ್ಗದವರು ಬೆಂಗಳೂರಿನಲ್ಲಿ ಬದುಕುವುದೇ ಕಷ್ಟವಾಗಲಿದೆ ಎಂದು ಬಸವನಗುಡಿ ನಿವಾಸಿಯಾದ, ನಿವೃತ್ತ ಲೆಕ್ಕ ಪರಿಶೋಧಕ ಬಿ.ಪಿ.ಬಾಲಕೃಷ್ಣ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಿಎಂಆರ್‌ಸಿಎಲ್ ಅತಾರ್ಕಿಕ ಸಮರ್ಥನೆಗೆ ಕಿಡಿ
ಆನ್ಲೈನ್ ಬುಕ್ಕಿಂಗ್ ಮೂಲಕ ಸಾರಿಗೆ ವ್ಯವಸ್ಥೆ ಒದಗಿಸುವ ಓಲಾ, ಉಬರ್, ರಾಪಿಡೊ ಪ್ರಯಾಣ ದರಕ್ಕಿಂತ ಮೆಟ್ರೋ ಪ್ರಯಾಣ ದರ ಕಡಿಮೆ ಎಂಬ ಬಿಎಂಆರ್ಸಿಎಲ್ ಅಧಿಕಾರಿಗಳ ಸಮರ್ಥನೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಪ್ರಯಾಣಿಕ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾದ ಮೆಟ್ರೋ ನಿಗಮವು ಖಾಸಗಿ ಆಪ್ ಆಧರಿತ ಸಾರಿಗೆಗೆ ಪೈಪೋಟಿ ನೀಡುವಂತೆ ದರ ಏರಿಕೆ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ತಲಾದಾಯ ಕಡಿಮೆ ಇರುವ ಲಕ್ಷಾಂತರ ಕುಟುಂಬಗಳು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿವೆ. ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಈ ಕುಟುಂಬಗಳ ದೈನಂದಿನ ವೆಚ್ಚದ ಸ್ವರೂಪವೇ ಬದಲಾಗಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನ ಸಾಮಾನ್ಯರು ಮೆಟ್ರೋ ಪ್ರಯಾಣದಿಂದ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗಲಿದ್ದಾರೆ ಎಂದು ಕೆಂಗೇರಿ ನಿವಾಸಿ ಮಧುಸೂಧನ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮೆಟ್ರೋಗೆ ಓಲಾ, ಉಬರ್ ಪರ್ಯಾಯವೇ?
ಮೆಟ್ರೋ ಪ್ರಯಾಣ ದರ ಏರಿಕೆಗೆ ಓಲಾ, ಉಬರ್ ಉದಾಹರಣೆ ನೀಡಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಮೆಟ್ರೋಗೆ ಪರ್ಯಾಯದಂತೆ ಭಾವಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ತ್ವರಿತ ಸಾರಿಗೆ ಸೇವೆ ಒದಗಿಸುವ ಸಲುವಾಗಿ ಮೆಟ್ರೋ ಯೋಜನೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಪ್ರಯಾಣ ಸೌಲಭ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ. ಜನರಿಂದ ಸುಲಿಗೆ ಮಾಡಿದ ಹಣವನ್ನು ವಿಸ್ತರಣಾ ಯೋಜನೆಗೆ ಬಳಸುವುದು ಎಂದರೆ ಏನರ್ಥ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಖಾಸಗಿ ಸಾರಿಗೆ ವೆಚ್ಚ ಹೇಗಿದೆ?
ಬೆಂಗಳೂರಿನಲ್ಲಿ ಆಟೊ ಕನಿಷ್ಠ ಪ್ರಯಾಣ ದರ 30 ರೂ. ಇದೆ. ಅದಾದ ಬಳಿಕ ಕಿ.ಮೀ.ಗೆ 10 ರೂ ಪಡೆಯಲಾಗುತ್ತದೆ. ಕ್ಯಾಬ್ ಆಧರಿತ ಓಲಾ ಹಾಗೂ ಉಬರ್ ಟ್ಯಾಕ್ಸಿ ಸೇವೆಗೆ ಸರ್ಕಾರದ ದರ ನಿಗದಿ ಮಾಡಿದೆ.
10 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ವಾಹನಗಳಿಗೆ ಆರಂಭಿಕ ನಾಲ್ಕು ಕಿಲೋಮೀಟರ್ಗಳಿಗೆ 100 ರೂ, ಹೆಚ್ಚುವರಿ ಕಿ.ಮೀ.ಗೆ 24 ರೂ. ನಿಗಪಡಿಸಲಾಗಿದೆ. 10 ರಿಂದ 15 ಲಕ್ಷ ರೂ ಬೆಲೆಯ ವಾಹನಗಳಲ್ಲಿ ಮೊದಲ ನಾಲ್ಕು ಕಿ.ಮೀ.ಗೆ 115 ರೂ., ನಂತರದ ಪ್ರತಿ ಕಿ.ಮೀ.ಗೆ 28 ರೂ. ನಿಗದಿ ಮಾಡಲಾಗಿದೆ. 15 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಲ್ಲಿ ಆರಂಭಿಕ ನಾಲ್ಕು ಕಿ.ಮೀ.ಗೆ 130 ರೂ., ನಂತರದ ಪ್ರತಿ ಕಿ.ಮೀ.ಗೆ 32 ರೂ. ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗಿದೆ.