Waqf Asset Dispute |   ʼವಕ್ಫ್‌ʼ ವಿವಾದ ಮತ್ತೆ ಮುನ್ನೆಲೆಗೆ; ಜ.20ಕ್ಕೆ ಶ್ರೀರಂಗಪಟ್ಟಣ ಬಂದ್‌
x
ವಕ್ಫ್‌ ಮಂಡಳಿ ವಿರುದ್ಧ ಶ್ರೀರಂಗ ಪಟ್ಟಣದಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿದರು

Waqf Asset Dispute | ʼವಕ್ಫ್‌ʼ ವಿವಾದ ಮತ್ತೆ ಮುನ್ನೆಲೆಗೆ; ಜ.20ಕ್ಕೆ ಶ್ರೀರಂಗಪಟ್ಟಣ ಬಂದ್‌

ವಕ್ಫ್‌ ವಿವಾದ ಬಗೆಹರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರೂ ಈವರೆಗೆ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಹೆಸರು ತೆಗೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ವಕ್ಫ್ ಆಸ್ತಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ರೈತರ ಪಹಣಿಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ವಕ್ಫ್‌ ವಿವಾದವನ್ನು ತ್ವರಿತವಾಗಿ ಬಗೆಹರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರೂ ಈವರೆಗೆ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಹೆಸರು ತೆಗೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಂಟಪಗಳು, ಸ್ಮಾರಕಗಳು, ಪುರಾತತ್ವ ಇಲಾಖೆ ಆಸ್ತಿ ಹಾಗೂ ರೈತರ ಜಮೀನು ಒಳಗೊಂಡು 70ಕ್ಕೂ ಹೆಚ್ಚು ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದಾಗಿದೆ. ವಕ್ಫ್‌ ಹೆಸರು ತೆಗೆಯದ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರೈತರು ಮತ್ತೆ ಬೀದಿಗೆ ಇಳಿದಿದ್ದಾರೆ.

ರೈತರ ಭೂದಾಖಲೆಗಳಲ್ಲಿ ವಕ್ಫ್‌ ಹೆಸರು

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರ, ಕೆ.ಶೆಟ್ಟಹಳ್ಳಿ, ಬಾಬಾರಾಯನಕೊಪ್ಪಲು, ದರಸಕುಪ್ಪೆ ಗ್ರಾಮಗಳ 50ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿದೆ. ಪಹಣಿಯಲ್ಲಿರುವ ವಕ್ಫ್ ಆಸ್ತಿ ಕುರಿತು ತಿದ್ದುಪಡಿ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಪಹಣಿಯ ಸ್ವಾಧೀನದಾರರ ಕಾಲಂನಲ್ಲಿ ರೈತರ ಹೆಸರಿದೆ. ಆದರೆ, ಕಲಂ 11 ರಲ್ಲಿ (ಋಣ ಕಲಂ) ವಕ್ಫ್ ಮಂಡಳಿ ಹೆಸರು ಬರುತ್ತಿದೆ. ಇದರಿಂದ ಜಮೀನಿನ ಮೇಲೆ ಸಾಲ ತೆಗೆದುಕೊಳ್ಳಲು ಆಗುತ್ತಿಲ್ಲ. ಸಾಮಾನ್ಯವಾಗಿ ಕ್ರಯ ಮಾಡಿಸಿದಾಗ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ನಮೂದಾಗುತ್ತದೆ. ಈಗ ವಕ್ಫ್ ಮಂಡಳಿ ಹೆಸರು ನಮೂದಾಗಿರುವುದು ಆತಂಕ ಮೂಡಿಸಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ರೈತರಿಂದ ಅರೆಬೆತ್ತಲೆ ಮೆರವಣಿಗೆ

ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಮಂಡಳಿ ಎಂದು ಉಲ್ಲೇಖವಾಗಿರುವುದನ್ನು ಖಂಡಿಸಿ ಶ್ರೀರಂಗಪಟ್ಟಣ ತಾಲೂಕಿನ ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರ ಶಾಲೆಯ ಸರ್ವೆ ನಂ 215ರಲ್ಲಿರುವ 30 ಗುಂಟೆ ಜಮೀನಿನ ಪಹಣಿಯಲ್ಲಿ ʼವಕ್ಫ್ ಆಸ್ತಿʼ ಎಂದು 2015 ರಲ್ಲಿ ನಮೂದಾಗಿದೆ. ಅಲ್ಲದೇ ರೈತರ ಜಮೀನಿನ ದಾಖಲೆಗಳಲ್ಲೂ ಕರ್ನಾಟಕ ವಕ್ಫ್ ಮಂಡಳಿ ಎಂದು ಉಲ್ಲೇಖವಾಗಿದ್ದು, ವಕ್ಫ್‌ ಮಂಡಳಿ ರೈತರ ಭೂಮಿ ಕಬಳಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜ.20 ರಂದು ಶ್ರೀರಂಗಪಟ್ಟಣ ಬಂದ್

ರೈತರು, ಸರ್ಕಾರಿ ಶಾಲೆ ಹಾಗೂ ಸ್ಮಾರಕಗಳ ಭೂಮಿಯ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ಜ. 20 ರಂದು ಶ್ರೀರಂಗಪಟ್ಟಣ ಬಂದ್ಗೆ ಕರೆ ನೀಡಲಾಗಿದೆ.

ವಿಶ್ವ ಹಿಂದೂ ಪರಿಷತ್, ಬಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ಅಂದು ರೈತರು ಜಾನುವಾರುಗಳ ಜೊತೆ ರಸ್ತೆಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ರಾಜ್ಯದ ಮಾಹಿತಿ ಜೆಪಿಸಿ ಅತೃಪ್ತಿ

ಈ ಮಧ್ಯೆ, ರಾಜ್ಯದಲ್ಲಿ ವಕ್ಸ್ ಮಂಡಳಿ ಹಕ್ಕು ಸಾಧಿಸಿರುವ ಆಸ್ತಿಗಳು, ಸರ್ಕಾರಿ ಸಂಸ್ಥೆಗಳ ಅಧೀನದಲ್ಲಿರುವ ವಕ್ಸ್ ಆಸ್ತಿಗಳ ಕುರಿತು ಕರ್ನಾಟಕದ ಅಧಿಕಾರಿಗಳು ಸಲ್ಲಿಸಿರುವ ಮಾಹಿತಿಗೆ ವಕ್ಫ್‌ ತಿದ್ದು ಮಸೂದೆಯ ಜಂಟಿ ಸದಸ ಸಮಿತಿ ಅತೃಪ್ತಿ ವ್ಯಕ್ತಪಡಿಸಿದೆ.

ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನೇತೃತ್ವದ ಸಮಿತಿಯು ವಕ್ಫ್‌ ಆಸ್ತಿ ವಿವಾದ ಕುರಿತಂತೆ ರಾಜ್ಯಗಳಿಂದ ವರದಿ ಕೇಳಿತ್ತು. ಅದರಂತೆ ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡ ವಿವರ ಒದಗಿಸಿತ್ತು. ಆದರೆ, ಕರ್ನಾಟಕ ನೀಡಿರುವ ವರದಿ ತೃಪ್ತಿಕರವಾಗಿಲ್ಲ. 15 ದಿನಗಳೊಳಗೆ ವಿವರವಾದ ವರದಿ ನೀಡುವಂತೆ 2024 ಡಿ.27 ರಂದು ಸೂಚಿಸಿತ್ತು. ಈಗ ಅವಧಿ ಮುಗಿದರೂ ವಿವರ ಸಲ್ಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹೋರಾಟ ನಡೆಸಿದ್ದ ಬಿಜೆಪಿ

ವಕ್ಫ್ ಆಸ್ತಿ ಕಬಳಿಕೆ ವಿರೋಧಿಸಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಣ ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಹೋರಾಟ ನಡೆಸಿದ್ದರು. ಇದಕ್ಕೂ ಮೊದಲು ಬಿಜೆಪಿ ಶಾಸಕ ಬಸನಗೌಡ ಯತ್ನಾಳ ನೇತೃತ್ವದ ಬಣ ವಕ್ಫ್‌ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಹೋರಾಟ ನಡೆಸಿತ್ತು. ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ರೈತರಿಂದ ಕಂಡು ಕೇಳಿದ ಸಮಸ್ಯೆಗಳ ವರದಿಯನ್ನು ಬಿಜೆಪಿ ಅಧ್ಯಕ್ಷರು ಹಾಗೂ ಜೆಪಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದರು.

Read More
Next Story