Karnataka By-Election | ಉಪಚುನಾವಣೆಗೆ ರಂಗೇರಿದ ಕಣ-; ಅಭ್ಯರ್ಥಿ ಆಯ್ಕೆ ಸೃಷ್ಟಿಸುತ್ತಿದೆ ಬಿಕ್ಕಟ್ಟು
ತೆರವಾದ ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಕಗ್ಗಂಟಾದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷ ಮೂರೂ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಲು ತವಕಿಸುತ್ತಿದೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.13 ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಮತ್ತೆ ತಮ್ಮದೇ ಪಾರುಪತ್ಯ ಸ್ಥಾಪಿಸಲು ಮೂರೂ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ.
ತೆರವಾದ ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಕಗ್ಗಂಟಾದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷ ಮೂರೂ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಲು ತವಕಿಸುತ್ತಿದೆ.
ಪ್ರತಿಷ್ಠೆಯ ಕಣ ಚನ್ನಪಟ್ಟಣ
ಕಳೆದ 16 ವರ್ಷಗಳಲ್ಲಿ ಮೂರು ಉಪ ಚುನಾವಣೆ ಕಂಡಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಜೆಡಿಎಸ್-ಬಿಜೆಪಿ ಮಧ್ಯೆ ಕಂದಕ ಸೃಷ್ಟಿಸುವಂತಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಮೈತ್ರಿ ಧರ್ಮ ಪಾಲಿಸಬೇಕು ಎಂದು ಹೇಳಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದೆಹಲಿ ವರಿಷ್ಠರ ಮಟ್ಟದಲ್ಲಿ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಆದರೆ, ಬಂಡಾಯದ ಭೀತಿಯಲ್ಲಿರುವ ಬಿಜೆಪಿ ಮಾತ್ರ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ರವಾನಿಸಿದೆ.
ಹಾವೇರಿಯ ಶಿಗ್ಗಾವಿ ಹಾಗೂ ಬಳ್ಳಾರಿಯ ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೇ ಮೈತ್ರಿ ಟಿಕೆಟ್ ನೀಡಿದರೆ ನಮ್ಮ ತಕರಾರು ಇಲ್ಲ. ಮೂರು ಸ್ಥಾನಗಳಲ್ಲಿ ಮೂರೂ ಬಿಜೆಪಿ ಅಭ್ಯರ್ಥಿಗಳನ್ನೇ ಹಾಕಿದರೆ ಮೈತ್ರಿ ಧರ್ಮ ಪಾಲಿಸದಂತಾಗದು. ಹಾಗಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೈತ್ರಿ ಟಿಕೆಟ್ ನೀಡಬೇಕು ಎಂಬ ವಾದವನ್ನು ಕುಮಾರಸ್ವಾಮಿ ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ಈ ಹಿಂದೆ ಎರಡು ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದೆ. ಇದರಿಂದ ಸುಲಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಯಾವುದೇ ಸಮಸ್ಯೆ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಮತಗಳು ನಮ್ಮ ಗೆಲುವನ್ನು ಸುಲಭಗೊಳಿಸಲಿವೆ ಎಂಬ ಚರ್ಚೆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಬಿಜೆಪಿಗೆ ಬಂಡಾಯದ ಬಿಸಿ
ಬಿಜೆಪಿ ಟಿಕೆಟ್ಗೆ ಪಟ್ಟು ಹಿಡಿದಿರುವ ಸೈನಿಕ ಸಿ.ಪಿ.ಯೋಗೇಶ್ವರ್ ಕೊನೆ ಕ್ಷಣದಲ್ಲಿ ಬಂಡಾಯ ಸಾರುವ ಸಾಧ್ಯತೆ ಇದೆ ಎಂದರಿತಿರುವ ಬಿಜೆಪಿ ನಾಯಕರು, ಯೋಗೀಶ್ವರ್ ಪರ ಬ್ಯಾಟ್ ಬೀಸುತ್ತಿದ್ದಾರೆ.
ಈಗಾಗಲೇ ಯೋಗೇಶ್ವರ್ ಅವರ ಅ.24 ರಂದು ತನ್ನ ಮುಂದಿನ ರಾಜಕೀಯ ನಡೆ ಪ್ರಕಟಿಸುವುದಾಗಿ ಘೋಷಿಸಿದ್ದು, ಟಿಕೆಟ್ ಸಿಗದಿದ್ದರೆ ಬಂಡಾಯ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಆ ರೀತಿ ನಡೆದರೆ, ಮೈತ್ರಿ ಪಕ್ಷಗಳಿಗೆ ಹಿನ್ನಡೆಯಾಗಲಿದೆ ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಯೋಗೇಶ್ವರ್ ಅವರನ್ನು ಯಾವ ರೀತಿ ಸಮಾಧಾನಪಡಿಸಲಿದ್ದಾರೆ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಸ್ವಪಕ್ಷಿಯರಿಂದಲೇ ಟಿಕೆಟ್ ಫೈಟ್
ಶಿಗ್ಗಾವಿ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವ ವಿಚಾರವಾಗಿ ಗುರುವಾರವಷ್ಟೇ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಇನ್ನೊಂದೆಡೆ ಮಾಜಿ ಸಚಿವ ಮುರುಗೇಶ ನಿರಾಣಿ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ದೆಹಲಿ ನಾಯಕರ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.
ಬಸವರಾಜು ಬೊಮ್ಮಾಯಿ ವಿರುದ್ಧಇತ್ತೀಚೆಗೆ ಕೇಳಿಬಂದ ಹನಿಟ್ರ್ಯಾಪ್ ಆರೋಪವು ಪಕ್ಷಕ್ಕೆ ಮುಜುಗರ ತರಿಸಿದೆ. ಮತ್ತೆ ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಬೇರೆ ಸಂದೇಶ ಹೋಗಲಿದೆ ಎಂಬ ಚಿಂತೆಯೂ ವರಿಷ್ಠರನ್ನು ಕಾಡುತ್ತಿದೆ. ಹಾಗಾಗಿ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವ ಕುರಿತಂತೆ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.
ಈ ಮಧ್ಯೆ, ಮೀಸಲಾತಿ ಹೋರಾಟಕ್ಕೆ ಸ್ಪಂದಿಸದ ಆರೋಪ ಹೊತ್ತು ಪಂಚಮಸಾಲಿ ಸಮುದಾಯದ ಅಸಹನೆಗೆ ಗುರಿಯಾಗಿರುವ ಬಿಜೆಪಿ, ಮುರುಗೇಶ್ ನಿರಾಣಿಗೆ ಟಿಕೆಟ್ ಕೊಟ್ಟು ಸಮುದಾಯದ ಓಲೈಕೆ ಮಾಡುವ ಯೋಚನೆಯೂ ಬಿಜೆಪಿ ನಾಯಕರಲ್ಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅಜ್ಜಂಪುರ ಖಾದ್ರಿ, ಯಾಸೀರ್ ಖಾನ್ ಪಠಾಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ್ಕುಮಾರ್ ಹೀರಲಗಿ, ರಾಜು ಕುನ್ನೂರು ಸೇರಿ ಹಲವರು ಪ್ರಬಲ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಆದರೆ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಸಾಧನೆ ಅಷ್ಟೇನೂ ತೃಪ್ತಿಕರವಾಗಿಲ್ಲ ಎಂಬುದು ಗಮನಿಸಬಹುದಾದ ಅಂಶವಾಗಿದೆ.
ಕ್ಷೇತ್ರದಲ್ಲಿ ಒಟ್ಟು 2 ಲಕ್ಷ ಮತದಾರರಿದ್ದು, ಮುಸ್ಗಲಿಮರು 60 ಸಾವಿರ, ಲಿಂಗಾಯತರು 80 ಸಾವಿರ, ಕುರುಬ ಸಮುದಾಯದ 30 ಸಾವಿರ ಮತಗಳಿವೆ. ಉಳಿದಂತೆ ಪರಿಶಿಷ್ಟ ಜಾತಿ , ಪಂಗಡ ಹಾಗೂ ಸಣ್ಣ ಪುಟ್ಟ ಸಮುದಾಯದ ಮತಗಳಿವೆ.
ಗಣಿ ನಾಡು ಸಂಡೂರಿನಲ್ಲಿ ರಂಗೇರಿದ ಕಣ
ಸಂಡೂರು ಕ್ಷೇತ್ರದಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಲೋಕಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ಇವರ ಸಾಲಿನಲ್ಲಿ ದೇವೇಂದ್ರಪ್ಪ, ಬಂಗಾರು ಹನುಮಂತು ಕೂಡ ಟಿಕೆಟ್ ಪೈಪೋಟಿಯಲ್ಲಿದ್ದಾರೆ. ಕ್ಷೇತ್ರದಲ್ಲಿ ಶ್ರೀರಾಮುಲು ಸೇರಿ ಒಟ್ಟು 19 ಮಂದಿ ಟಿಕೆಟ್ ಆಕಾಂಕ್ಷಿಗಳಿರುವುದು ಚುನಾವಣಾ ಕಣವನ್ನು ರಂಗೇರುವಂತೆ ಮಾಡಿದೆ. ಚುನಾವಣಾ ಉಸ್ತುವಾರಿಯನ್ನು ಜನಾರ್ಧನರೆಡ್ಡಿ ಅವರಿಗೆ ವಹಿಸಲು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿಇ.ತುಕಾರಂ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಅಷ್ಟೇನೂ ಟಿಕೆಟ್ ಆಕಾಂಕ್ಷಿಗಳಿಲ್ಲ. ತುಕಾರಂ ಅವರ ಪತ್ನಿ ಅಥವಾ ಪುತ್ರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳು ಬರುತ್ತಿದೆ.