
ದರ ಏರಿಕೆ ವಿರುದ್ಧ ಅಭಿಯಾನ; ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ ಎಂದ ನಿಖಿಲ್
ರಾಜ್ಯ ಕಾಂಗ್ರೆಸ್ ಸರ್ಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಪ್ರತ್ಯೇಕವಾಗಿ ಅಭಿಯಾನ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಈಗಾಗಲೇ ರಾಜ್ಯ ಬಿಜೆಪಿ ವತಿಯಿಂದ ಜನಾಕ್ರೋಶ ಆರಂಭವಾಗಿದ್ದು, ಜೆಡಿಎಸ್ ಇದರಲ್ಲಿ ಭಾಗವಹಿಸಿಲ್ಲ. ಬದಲಾಗಿ ಪ್ರತ್ಯೇಕವಾಗಿಯೇ ಸರ್ಕಾರದ ವಿರುದ್ಧ ʼಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರʼ ಎಂಬ ಅಭಿಯಾನ ಆರಂಭಿಸಿದೆ.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದೆ. ಈ ಬಗ್ಗೆ ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, https://www.saakappasaaku.com ಎಂಬ ನೂತನ ವೆಬ್‌ಸೈಟ್ ಮೂಲಕ ಜೆಡಿಎಸ್ ಕಾರ್ಯಕರ್ತರಲ್ಲದೇ ಯಾರೇ ಆದರೂ ನೋಂದಣಿ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಎಂದು ಆರೋಪ ಮಾಡಿದರು.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ಅಭಿಯಾನದ ಅಂಗವಾಗಿ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಅಭಿಯಾನ ನಿರಂತರವಾಗಿ ಇರಲಿದೆ ಎಂದು ನಿಖಿಲ್ ತಿಳಿಸಿದರು.
ಇಂದು ಬೆಳಗ್ಗೆಯಿಂದ ಕಾರ್ಯಕರ್ತರು ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಏಳೂವರೆ ಕೋಟಿ ಜನರ ಭಾವನೆ ಸಾಕಪ್ಪ ಸಾಕು ಅಂತಲೇ ಇದೆ ಎಂದು ತಿಳಿಸಿದರು.
ರಾಯರೆಡ್ಡಿಗೆ ಧನ್ಯವಾದ ಹೇಳಿದ ನಿಖಿಲ್
ಈ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸಿಎಂ ಅವರ ಆರ್ಥಿಕ ಸಲಹೆಗಾರರೇ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಅಂತ ಹೇಳಿಕೆ ಕೊಟ್ಟಿದ್ದಾರೆ. ರಾಯರೆಡ್ಡಿ ಅವರಿಗೆ ಧನ್ಯವಾದ ಹೇಳ್ತೀನಿ. ಇಷ್ಟು ಮುಕ್ತವಾಗಿ ಆಡಳಿತ ಪಕ್ಷದ ಶಾಸಕರು, ಆರ್ಥಿಕ ಸಲಹೆಗಾರರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಈ ಹಿಂದೆಯೂ ಕೂಡಾ ರಾಯರೆಡ್ಡಿ ಅವರು ಗ್ಯಾರಂಟಿ ಹೇಗೆ ಅಭಿವೃದ್ಧಿ ಮೇಲೆ ಪರಿಣಾಮ ಬಿದ್ದಿದೆ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಹೇಗೆ ಆಡಳಿತ ಮಾಡುತ್ತಿದೆ ಅನ್ನುವುದಕ್ಕೆ ಅನೇಕ ವೈಫಲ್ಯಗಳು ನಮ್ಮ ಮುಂದಿವೆ ಎಂದು ಹೇಳಿದರು.
ಹನಿಟ್ರ್ಯಾಪ್, ಮನಿಟ್ರ್ಯಾಪ್, ಕನ್ನಡಿಗರ ಮೇಲೆ ತೆರಿಗೆ ಟ್ರ್ಯಾಪ್
ಹೊಸದಾಗಿ ಆರಂಭಿಸಿರುವ ವೆಬ್ ಸೈಟ್ ನಲ್ಲಿ ಸರ್ಕಾರ ಶಾಸಕರು, ಮಂತ್ರಿಗಳು ಹಿಂದೆ ಏನೇನು ಮಾತಾಡಿದ್ದರು ಎಂಬುದನ್ನು ಹಾಕಲಾಗಿದೆ. ಇದು ಒಂದು ದಿನದ ಅಭಿಯಾನ ಅಲ್ಲ.ಈ ಸರ್ಕಾರದಲ್ಲಿ ಸಚಿವರ ಹನಿಟ್ರ್ಯಾಪ್ ಮಾಡಿದ್ದಾರೆ, ಹೈಕಮಾಂಡ್ ಗೆ ಮನಿಟ್ರ್ಯಾಪ್ ಮಾಡಿದ್ದಾರೆ, ಕನ್ನಡಿಗರ ಮೇಲೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ ಅಂತ ವೆಬ್ ಸೈಟ್ ನಲ್ಲಿ ಹೇಳಿದ್ದೇವೆ ಎಂದು ಅವರು ತಿಳಿಸಿದರು.
ಉಪ ಚುನಾವಣೆ ವೇಳೆ 48 ಗಂಟೆ ಒಳಗೆ ಮೂರು ಕ್ಷೇತ್ರಗಳಿಗೆ ಮಾತ್ರ ಗ್ಯಾರೆಂಟಿ ಹಣ ಹಾಕಿದ್ದರು. ಶಾಸಕರೊಬ್ಬರು ಕಾಂಗ್ರೆಸ್ ಗೆ ಮತ ಹಾಕದೇ ಹೋದರೆ ಗ್ಯಾರಂಟಿ ರದ್ದು ಮಾಡ್ತೀವಿ ಎಂದು ಧಮ್ಕಿ ಹಾಕಿದ್ದರು. ಹಾಗಾಗಿ ಕಾಂಗ್ರೆಸ್ ವಿರುದ್ಧ ನಿರಂತರ ಅಭಿಯಾನ ಮಾಡಲು ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ
ಗ್ಯಾಸ್ ಬೆಲೆ ಏರಿಕೆ ವಿಚಾರಕ್ಕೆ ಮಾತನಾಡಿದ ಅವರು, 2004 ರಿಂದ 2014ರವರೆಗೆ ಯುಪಿಎ ಸರ್ಕಾರ ಇತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತೆ. ಯುಪಿಎ ಸರ್ಕಾರ ಇದ್ದಾಗ ಗ್ಯಾಸ್ ಬೆಲೆ 1241 ಗ್ಯಾಸ್ ಬೆಲೆ ಇತ್ತು. ಈಗ 854 ರೂಪಾಯಿ ಇದೆ. 50 ರೂಪಾಯಿ ಜಾಸ್ತಿ ಆದರು 850 ರೂ ಮಾತ್ರ ಇರೋದು ಎಂದು ತಿರುಗೇಟು ನೀಡಿದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಶ್ನೆ ಇಲ್ಲ
ರೈತರಿಗೆ ದೇವೇಗೌಡರ ಕೊಡುಗೆ ಅಪಾರ. ಎಲ್ಲಾ ಭಾಗಕ್ಕೂ ಅವರ ಕೊಡುಗೆ ಇದೆ. ಪ್ರತಿ ಚುನಾವಣೆಯಲ್ಲಿ ನಮ್ಮ ವೋಟ್ ಶೇರಿಂಗ್ ಹೆಚ್ಚಾಗುತ್ತಿದೆ. ಪ್ರತಿ ಭಾಗದಲ್ಲೂ ನಮ್ಮ ಪಕ್ಷದ ಹೆಚ್ಚು ಶೇರಿಂಗ್ ಇದೆ. ಪ್ರಾದೇಶಿಕ ಪಕ್ಷ ಉಳಿಸಲು ನಮ್ಮ ಕಾರ್ಯಕರ್ತರು ಎಂತಹದ್ದೇ ಸಮಯ ಇದ್ದರೂ ಕೆಲಸ ಮಾಡುತ್ತಾರೆ. ಶಾಸಕರ ಸಂಖ್ಯೆ 19 ಸ್ಥಾನಕ್ಕೆ ಇಳಿಯೋಕೆ ಬೇರೆ ಬೇರೆ ಕಾರಣ ಇದೆ. ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುವ ಪ್ರಶ್ನೆ ಇಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ಸಾವಿರಾರು ಕಾರ್ಯಕರ್ತರು ಇದ್ದಾರೆ. ನಾವು ರಾಜ್ಯದ, ದೇಶದ ಹಿತಕ್ಕಾಗಿ ಮೈತ್ರಿ ಆಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಸಮಾಧಾನವೂ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.