CAFE BLAST | ನಾಲ್ಕು ರಾಜ್ಯ ವ್ಯಾಪಿ ಜೈಲುಗಳಲ್ಲಿ ಎನ್‌ ಐಎ ಡ್ರಿಲ್
x

CAFE BLAST | ನಾಲ್ಕು ರಾಜ್ಯ ವ್ಯಾಪಿ ಜೈಲುಗಳಲ್ಲಿ ಎನ್‌ ಐಎ ಡ್ರಿಲ್


ಬೆಂಗಳೂರು: ಬೆಂಗಳೂರು ಪೊಲೀಸರಿಂದ ಹಸ್ತಾಂತರವಾಗಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ತೀವ್ರಗೊಳಿಸಿದೆ.

ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ವಿವಿಧ ಸ್ಪೋಟ ಪ್ರಕರಣಗಳ ಆರೋಪಿಗಳ ಮೇಲೆ ತನಿಖೆ ಕೇಂದ್ರೀಕೃತವಾಗಿದೆ. 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಟಿ ನಾಸೀರ್‌ನಂತಹ ವ್ಯಕ್ತಿಗಳು ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಇತರ ಕೈದಿಗಳನ್ನು ಧರ್ಮಾಂಧತೆಯ ಭಾವನೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹಾಗೆ ಪ್ರಭಾವಿತರಾಗುವ ಆರೋಪಿಗಳು ಜಾಮೀನು ಪಡೆದ ನಂತರ ತಮ್ಮ ಚಟುವಟಿಕೆಗಳನ್ನು ಮುಂದುವರಿಸಲು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

ಎನ್ಐಎ ಅಧಿಕಾರಿಗಳು, ಈ ಆಯಾಮದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಮತ್ತು ಬೆಂಗಳೂರು ಪೊಲೀಸರೊಂದಿಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಆರೋಪಿಗಳಲ್ಲಿ ಕೆಲವರು ಅಪರಾಧಿಗಳಾಗಿದ್ದರೆ, ಇನ್ನು ಕೆಲವರು ಹಳೆಯ ಭಯೋತ್ಪಾದನೆ ಪ್ರಕರಣಗಳಲ್ಲಿ ವಿಚಾರಣಾಧೀನರಾಗಿದ್ದಾರೆ. ಈ ವ್ಯಕ್ತಿಗಳನ್ನು ವಿಚಾರಣೆ ಮಾಡಲು ಎನ್‌ಐಎ, ನ್ಯಾಯಾಲಯಗಳ ಅನುಮತಿ ಪಡೆಯುತ್ತಿದೆ ಮತ್ತು ಅಗತ್ಯವಿದ್ದರೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯಬಹುದು.

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಳಸಲಾದ ಬಾಂಬ್, 2022ರ ಅಕ್ಟೋಬರ್‌ನ ಕೊಯಮತ್ತೂರು ಕಾರು ಸ್ಫೋಟ ಮತ್ತು 2022ರ ನವೆಂಬರ್‌ನ ಮಂಗಳೂರು ಕುಕ್ಕರ್‌ ಸ್ಫೋಟದಲ್ಲಿ ಬಳಸಲಾದ ಬಾಂಬ್‌ ಗಳಿಗೆ ಹೋಲಿಕೆಯಾಗುತ್ತದೆಯೇ ಎಂದು ಎನ್‌ಐಎ ಮತ್ತು ಎಫ್‌ಎಸ್‌ಎಲ್ ತಜ್ಞರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದಿನ ಪ್ರಕರಣದ ಆರೋಪಿಗಳ ಜೊತೆಗೆ, ಈಗಿನ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳಿಗೆ ಏನಾದರೂ ಸಂಪರ್ಕವಿದೆಯೇ ಎಂದು ಕಂಡುಹಿಡಿಯಲು ಬಂಧಿತ ಶಂಕಿತರನ್ನು ಎನ್‌ಐಎ ವಿಚಾರಣೆ ನಡೆಸುತ್ತಿದೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಜೈಲುಗಳಲ್ಲಿ ಇರುವವರನ್ನು ಪ್ರಶ್ನಿಸುವ ಮೂಲಕ ಸಿಸಿಟಿವಿ ದೃಶ್ಯಗಳಲ್ಲಿ ಇರುವ ವ್ಯಕ್ತಿ ಯಾರೆಂದು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ʼದ ಫೆಡರಲ್‌- ಕರ್ನಾಟಕʼದೊಂದಿಗೆ ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ಹಂಚಿಕೊಂಡಿದ್ದು, ಅಲ್ ಉಮ್ಮಾ ಸಂಸ್ಥಾಪಕ ಎಸ್.ಎ.ಬಾಷಾಗೆ ಸಂಬಂಧಿಸಿರುವ ಮೊಹಮ್ಮದ್ ಟಾಲ್ಕಾ ಸೇರಿದಂತೆ ತಮಿಳುನಾಡು ಪ್ರಕರಣದ ಆರೋಪಿಗಳನ್ನು ಪ್ರಶ್ನಿಸಲು ಯೋಜಿಸಿದ್ದಾರೆ. 58 ಜನರ ಸಾವಿಗೆ ಕಾರಣವಾದ 1998ರ ಕೊಯಮತ್ತೂರು ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಎಸ್.ಎ.ಬಾಷಾ ಎಂಬುದು ಗಮನಾರ್ಹ. ಬೆಂಗಳೂರು ಸ್ಫೋಟ ಪ್ರಕರಣದ ಸುಳಿವು ಪಡೆಯಲು ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಸೈಯದ್ ಯಾಸಿನ್ ಅವರನ್ನೂ ಎನ್‌ಐಎ ವಿಚಾರಣೆ ನಡೆಸಲಿದೆ.

ದಾಳಿಗಳು

ಈ ಹಿಂದೆ ಎನ್‌ಐಎ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳು ಜೈಲಿನಲ್ಲಿ ಇತರೆ ಭಯೋತ್ಪಾದನಾ ಕೃತ್ಯಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳ ಸಂಪರ್ಕಕ್ಕೆ ಬಂದು ಅವರಿಂದ ಪ್ರಭಾವಿತರಾಗಿ ಮತ್ತು ತರಬೇತಿ ಪಡೆದ ನಂತರ ವಿವಿಧ ಅಪರಾಧ ಕೃತ್ಯಗಳನ್ನು ಮಾಡಿರುವ ನಿದರ್ಶನಗಳಿವೆ.

ಆ ಹಿನ್ನೆಲೆಯಲ್ಲಿಯೇ ಎನ್‌ಐಎ ಆರು ರಾಜ್ಯಗಳಲ್ಲಿ ಶೋಧ ನಡೆಸುತ್ತಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ಸುಳಿವು ಪತ್ತೆ ಹಚ್ಚುವುದು ಇದರ ಉದ್ದೇಶವಾಗಿದೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ತಂಡಗಳು ದಾಳಿ ನಡೆಸಿ ಡಿಜಿಟಲ್ ಸಾಧನಗಳು, ದಾಖಲೆಗಳು ಮತ್ತು ನಗದು ವಶಪಡಿಸಿಕೊಂಡಿವೆ. ಶಂಕಿತರ ಮನೆಗಳಲ್ಲಿ ನಡೆಸಿದ ಶೋಧದ ವೇಳೆ ಎಲೆಕ್ಟ್ರಾನಿಕ್ ಉಪಕರಣಗಳು, ದಾಖಲೆಗಳು ಮತ್ತು ಹಣವನ್ನು ಪತ್ತೆಹಚ್ಚಿವೆ.

ಅಕ್ಟೋಬರ್ 25, 2023ರಂದು ಪ್ರಾರಂಭವಾದ ತನಿಖೆಯು ಆ ವರ್ಷದ ಜ.12 ರಂದು ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಆರೋಪಗಳನ್ನು ದಾಖಲಿಸಲಾಯಿತು. ಆರೋಪಗಳಲ್ಲಿ IPC, ಕಾನೂನುಬಾಹಿರ (ತಡೆಗಟ್ಟುವಿಕೆ) ಕಾಯಿದೆ, ಶಸ್ತ್ರಾಸ್ತ್ರ ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯಂತಹ ವಿಭಿನ್ನ ಕಾನೂನುಗಳು ಸೇರಿವೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಲ್‌ಇಟಿ ಸಂಘಟನೆಯ ಭಯೋತ್ಪಾದಕರು, ಕೈದಿಗಳನ್ನು ಧರ್ಮಾಂಧತೆಯ ಮೇಲೆ ಪ್ರಭಾವಿಸಲು ಹೆಚ್ಚು ಗಮನ ಹರಿಸುತ್ತಾರೆ.

ಬೆಂಗಳೂರು ನಗರ ಪೊಲೀಸರ ಪ್ರಕರಣದ ಆರಂಭಿಕ ತನಿಖೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.

ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಮಿಳುನಾಡಿನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಚೆನ್ನೈ ಮತ್ತು ಕಡಲೂರಿನಲ್ಲಿ ದಾಳಿ ನಡೆಸಲಾಗಿದೆ.

ಪ್ರಕರಣದ ಸುಳಿವು?

ಘಟನೆಯ ಕುರಿತು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ಪೊಲೀಸರು, ಸಿಸಿಬಿ ಮತ್ತು ಎನ್‌ಐಎ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

'ಘಟನೆಗೆ ಸಂಬಂಧಿಸಿದಂತೆ ಕೆಲವು ಸುಳಿವುಗಳು ಸಿಕ್ಕಿವೆ. ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Read More
Next Story