CAFE BLAST CASE | ಆನ್‌ಲೈನ್‌ನಲ್ಲೇ ಸ್ಫೋಟಕ ಸಾಮಗ್ರಿ ಖರೀದಿ
x

CAFE BLAST CASE | ಆನ್‌ಲೈನ್‌ನಲ್ಲೇ ಸ್ಫೋಟಕ ಸಾಮಗ್ರಿ ಖರೀದಿ

ಸ್ಫೋಟಕ್ಕೆ ಬಳಸಿದ ಸುಧಾರಿತ ಸ್ಫೋಟಕ ಸಾಧನವನ್ನು (IED) ಬೆಂಗಳೂರಿನ ಹೊರವಲಯದಲ್ಲಿ ಸಿದ್ಧಪಡಿಸಿರುವ ಮಾಹಿತಿ ದೊರೆತಿದೆ.


ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ಆನ್‌ ಲೈನ್‌ ನಲ್ಲೇ ಉಗ್ರರು ಖರೀದಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಶಂಕಿತ ಮುಜಾಮಿಲ್‌ ಶರೀಫ್‌ ನನ್ನು ಎನ್‌ಐಎ ಏಳು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದೆ.

ಬಾಂಬ್‌ ಸ್ಫೋಟಕ್ಕೆ ಬೇಕಾದ ಐಇಡಿ (Improvised explosive device)ಯನ್ನು ಬೆಂಗಳೂರಿನ ಹೊರ ವಲಯದಲ್ಲಿ ತಯಾರಿಸಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಸ್ಫೋಟಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳಿಗೆ 4-5 ಸಾವಿರ ರೂ.ಗಳನ್ನು ಖರ್ಚು ಮಾಡಲಾಗಿದೆ. ಬಾಂಬ್‌ ತಯಾರಿಕೆಗೆ ಎರಡು-ಮೂರು ತಿಂಗಳು ಸಮಯ ಹಿಡಿದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | CAFE BLAST CASE | ಶಂಕಿತರ ಸುಳಿವು ಕೇಳಿದ ಎನ್‌ಐಎ

ಬಾಂಬ್‌ ತಯಾರಿಕೆಗೆ ಬೇಕಾದ ಡಿಟೋನೇಟರ್‌, ಟೈಮರ್‌, ಬ್ಯಾಟರಿ, ರಂಜಕವನ್ನು ಆನ್‌ ಲೈನಿನಲ್ಲಿ ಖರೀದಿಸಲಾಗಿದ್ದು, ನಟ್‌, ಬೋಲ್ಟ್‌, ವೈಯರ್‌ ಗಳನ್ನು ಅಂಗಡಿಗಳಿಂದ ಖರೀದಿಸಿದ್ದರು. ಖರೀದಿಸಿದ ಕಚ್ಚಾ ವಸ್ತುಗಳನ್ನು ಮುಜಾಮಿಲ್‌ ಶರೀಫ್‌, ಬಾಂಬ್‌ ತಯಾರಿಸುತ್ತಿದ್ದ ಅಬ್ದುಲ್‌ ಮತೀನ್‌ ತಾಹ ಮತ್ತು ಮುಸಾವಿರ್‌ ಹುಸೇನ್‌ ಗೆ ತಲುಪಿಸುತ್ತಿದ್ದ ಎಂದು ಮೂಲಗಳು ಹೇಳಿವೆ.

ಮಾರ್ಚ್ 1ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ತಲೆಗೆ ಟೋಪಿ, ಕನ್ನಡಕ ಧರಿಸಿಕೊಂಡು ರಾಮೇಶ್ವರಂ ಕೆಫೆಗೆ ಆಗಮಿಸಿದ್ದ ಶಂಕಿತ, ಬಳಿಕ ಐಇಡಿ ಬಾಂಬ್‌ ಇದ್ದ ಬ್ಯಾಗ್‌ ಇಟ್ಟು ಪರಾರಿಯಾಗಿದ್ದ. ಸುಮಾರು ಒಂದು ಗಂಟೆ ಬಳಿಕ ಬಾಂಬ್‌ ಸ್ಫೋಟಗೊಂಡಿದ್ದು, ಸ್ಪೋಟದಲ್ಲಿ ಗ್ರಾಹಕರು ಸೇರಿ 10 ಮಂದಿ ಗಾಯಗೊಂಡಿದ್ದರು.

Read More
Next Story