
NICE Road Project | ನೈಸ್ ರಸ್ತೆ ಯೋಜನೆ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ; ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ
ಸಂಪುಟ ಉಪಸಮಿತಿಯು ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (BMIC) ಅನುಷ್ಠಾನದ ಕುರಿತು ಇದುವರೆಗೆ ನಡೆದಿರುವ ಪ್ರಗತಿ ಪರಿಶೀಲನೆಗೆ ಪರಾಮರ್ಶಿಸಿ ಸೂಕ್ತ ಶಿಫಾರಸು ಮಾಡಲು ರಾಜ್ಯ ಸರ್ಕಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಏಳು ಜನರ ಸಂಪುಟ ಉಪ ಸಮಿತಿ ರಚಿಸಿದೆ.
ಕಾನೂನು ಸಚಿವ ಎಚ್.ಕೆ ಪಾಟೀಲ್, ಆಹಾರ ಸಚಿವ ಕೆ.ಎಹೆಚ್ ಮುನಿಯಪ್ಪ, ಬಹೃತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸಮಿತಿಯಲ್ಲಿದ್ದಾರೆ.
ನೈಸ್ ರಸ್ತೆ ಯೋಜನೆಯ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಉಪ ಸಮಿತಿ ರಚನೆಗೆ ನಿರ್ಣಯಿಸಲಾಗಿತ್ತು. ಸಮಿತಿ ಸದಸ್ಯರ ನೇಮಕ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿತ್ತು.
ಸಂಪುಟ ಉಪಸಮಿತಿಯು ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಏನಿದು ನೈಸ್ ಕಾರಿಡಾರ್ ಯೋಜನೆ?
ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ. ಎಕ್ಸ್‌ಪ್ರೆಸ್ ವೇ ನಿರ್ಮಾಣ ಕಾಮಗಾರಿಯನ್ನು ನೈಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿದೆ. ಆದರೂ, ಯೋಜನೆ ಪೂರ್ಣಗೊಂಡಿಲ್ಲ. ಅಲ್ಲದೇ ಯೋಜನೆಗೆ ಸಂಬಂಧಿಸಿ 374 ಭೂವ್ಯಾಜ್ಯ ಪ್ರಕರಣಗಳು ವಿವಿಧ ಕೋರ್ಟ್ಗಳಲ್ಲಿವೆ. ಕೆಲವು ಪ್ರಕರಣಗಳಲ್ಲಿ ಭೂಸ್ವಾಧೀನವನ್ನು ನ್ಯಾಯಾಲಯಗಳು ರದ್ದುಪಡಿಸಿವೆ.
ಈ ಮಧ್ಯೆ ಯೋಜನೆಗೆ ನೈಸ್ ಸಂಸ್ಥೆ ಇನ್ನಷ್ಟು ಭೂಮಿ ಕೇಳುತ್ತಿದೆ. ಸರ್ಕಾರವೇ ಮೈಸೂರು -ಬೆಂಗಳೂರು ಎಕ್ಸ್‌ಪ್ರೆಸ್ ವೇ ನಿರ್ಮಿಸಿರುವುದರಿಂದ ಬಿಎಂಐಸಿ ಯೋಜನೆ ರದ್ದುಪಡಿಸಿ, ನೈಸ್ ಕಂಪನಿಯಿಂದ ಹೆಚ್ಚುವರಿ ಭೂಮಿ ವಾಪಸ್ ಪಡೆಯಬೇಕು ಎಂದು ಈ ಹಿಂದೆ ಟಿ.ಬಿ. ಜಯಚಂದ್ರ ನೇತೃತ್ವದ ಜಂಟಿ ಸದನ ಸಮಿತಿ ವರದಿ ನೀಡಿತ್ತು. ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿ ಎಲ್ಲ ಸಮಿತಿಗಳ ವರದಿ ಹಾಗೂ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಲು ಉಪಸಮಿತಿ ರಚಿಸಲಾಗಿತ್ತು.