Cabinet Meeting | ಕೆಪಿಎಸ್‌ಸಿಗೆ ಕಾಯಕಲ್ಪ; ತಿದ್ದುಪಡಿ ಮಸೂದೆ ಮಂಡನೆಗೆ ಸಂಪುಟ ನಿರ್ಣಯ
x
ಕರ್ನಾಟಕ ಲೋಕಸೇವಾ ಆಯೋಗ

Cabinet Meeting | ಕೆಪಿಎಸ್‌ಸಿಗೆ ಕಾಯಕಲ್ಪ; ತಿದ್ದುಪಡಿ ಮಸೂದೆ ಮಂಡನೆಗೆ ಸಂಪುಟ ನಿರ್ಣಯ

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕೆಪಿಎಸ್‌ಸಿ ಕಾಯ್ದೆ1959’ಕ್ಕೆ ತಿದ್ದುಪಡಿ ತರಲು ನಿರ್ಣಯಿಸಿದೆ. ಪ್ರಸಕ್ತ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆಗೂ ಸರ್ಕಾರ ತೀರ್ಮಾನಿಸಿದೆ.


ಅವ್ಯವಹಾರ, ಭ್ರಷ್ಟಾಚಾರ ಮತ್ತು ಪದೇಪದೆ ಎಡವಟ್ಟುಗಳಿಂದ ಪ್ರಾಮಾಣಿಕ ಅಭ್ಯರ್ಥಿಗಳ ಆಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸುಧಾರಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕೆಪಿಎಸ್‌ಸಿ ಕಾಯ್ದೆ1959’ಕ್ಕೆ ತಿದ್ದುಪಡಿ ತರಲು ನಿರ್ಣಯಿಸಿದೆ. ಪ್ರಸಕ್ತ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆಗೂ ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಖಂಡಿಸಿ ಅಭ್ಯರ್ಥಿಗಳು ಹೋರಾಟ ನಡೆಸಿದ್ದರು. ಅಭ್ಯರ್ಥಿಗಳ ಹೋರಾಟ ಬೆಂಬಲಿಸಿ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲಾಗಿತ್ತು.

ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ?

ಕರ್ನಾಟಕ ಲೋಕಸೇವಾ ಆಯೋಗ ತಿದ್ದುಪಡಿ ಮಸೂದೆಯಲ್ಲಿ ನೇಮಕಾತಿ ಸಂದರ್ಶನ ಮಂಡಳಿಗೆ ಆಯೋಗದಿಂದ ಒಬ್ಬರನ್ನು ನೇಮಿಸಲು ಮಾತ್ರ ಅವಕಾಶ ನೀಡಲಾಗಿದೆ. ಇಲ್ಲಿಯವರೆಗೆ ಸಂದರ್ಶನ ಮಂಡಳಿಯಲ್ಲಿ ಆಯೋಗದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದರು.

ಸಂದರ್ಶನದ ಫಲಿತಾಂಶವನ್ನು ಆಯೋಗದ ಮುಂದೆ ಮಂಡಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಇದು ಸ್ವಜನ ಪಕ್ಷಪಾತ, ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂದರ್ಶನವನ್ನು ರಾಜ್ಯ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮದಂತೆಯೇ ನಡೆಸಲು ಅನುವಾಗುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಲೋಕಸೇವಾ ಆಯೋಗದ ಸಭೆಗೆ ಅಧ್ಯಕ್ಷರನ್ನು ಒಳಗೊಂಡು ಒಟ್ಟು ಸದಸ್ಯರ ಪೈಕಿ ಶೇ 50ರಷ್ಟು ಕೋರಂ ಅಗತ್ಯವಾಗಿದೆ. ಈ ಹಿಂದೆ ಅಧ್ಯಕ್ಷರು ಇಲ್ಲದಿದ್ದರೂ ಶೇ 50ರಷ್ಟು ಕೋರಂ ಇರಲೇಬೇಕಿತ್ತು. ಆಯೋಗದ ಎಲ್ಲ ನಿರ್ಣಯಗಳು ಎಲ್ಲ ಸದಸ್ಯರಿಗೂ ಮುಕ್ತವಾಗಿರಬೇಕು. ಆಯೋಗದ ನಿರ್ಣಯಗಳ ಸಂಬಂಧ ಸದಸ್ಯರು ಭಿನ್ನಾಭಿಪ್ರಾಯ ಹೊಂದಿದ್ದರೆ, ಅದಕ್ಕೆ ಕಾರಣಗಳನ್ನು ದಾಖಲಿಸಬೇಕು ಎಂದು ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿವೆ.

ಟಿಡಿಆರ್‌ ಪ್ರಮಾಣ ಪತ್ರ ಸಲ್ಲಿಸಲು ನಿರ್ಧಾರ

ಬೆಂಗಳೂರು ಅರಮನೆ ಮೈದಾನ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಟಿಡಿಆರ್ ಪ್ರಮಾಣ ಪತ್ರವನ್ನು ಠೇವಣಿ ಇಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವಾರದಲ್ಲಿ ಟಿಡಿಆರ್‌ ಪ್ರಮಾಣ ಪತ್ರ ಠೇವಣಿ ಇಡುವಂತೆ ಮೂರು ದಿನಗಳ ಹಿಂದೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಅಭಿವೃದ್ಧಿ ಹಕ್ಕು ಪರಿಹಾರದ ಮೊತ್ತ ಅಧಿಕವಾಗಿರುವ ಕಾರಣ ರಾಜ್ಯ ಸರ್ಕಾರ ಟಿಡಿಆರ್‌ ನೀಡಲು ನಿರಾಕರಿಸಿತ್ತು. ಅರಮನೆ ಜಾಗವನ್ನು ರಸ್ತೆ ಕಾಮಗಾರಿಗೆ ಬಳಸದಿರಲು ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೈಸೂರು ರಾಜಮನೆತನದ ಉತ್ತರಾಧಿಕಾರಿಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಸಂಪುಟ ಸಭೆ ಪ್ರಮುಖ ನಿರ್ಣಯಗಳು

• ಪಶು ಆಹಾರ ನಿಯಂತ್ರಣಕ್ಕೆ ಕಾಯ್ದೆ ತಿದ್ದುಪಡಿಗೆ ಅಸ್ತು

• ಪರವಾನಗಿ ಇಲ್ಲದೆ ಪಶು ಆಹಾರ ಉತ್ಪಾದಿಸಿ, ಮಾರುವಂತಿಲ್ಲ

• ನಿಯಮ ಉಲ್ಲಂಘಿಸಿದರೆ ಮೂರು ವರ್ಷ ಜೈಲುಶಿಕ್ಷೆ ಮತ್ತು 5ಲಕ್ಷ ರೂ. ದಂಡ

• ಬೆಂಗಳೂರು ಅರಮನೆ ಮೈದಾನಕ್ಕೆ ಟಿಡಿಆರ್ ಪ್ರಮಾಣ ಪತ್ರ ಠೇವಣಿ ಇಡಲು ಒಪ್ಪಿಗೆ

• ವೃತ್ತಿಪರ ತೆರಿಗೆ 300 ರೂ.ಗೆ ಏರಿಕೆ ಮಾಡಲು ಒಪ್ಪಿಗೆ. ಪ್ರಸ್ತುತ ವೃತ್ತಿಪರ ತೆರಿಗೆ 200 ರೂ. ಇತ್ತು. ವೇತನದಲ್ಲಿ ಇನ್ನು ಮುಂದೆ 300 ರೂ. ಕಡಿತವಾಗಲಿದೆ

Read More
Next Story