Cabinet Meeting | ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ನೀತಿಗೆ ಅನುಮೋದನೆ
x

Cabinet Meeting | ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ನೀತಿಗೆ ಅನುಮೋದನೆ


ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಉದ್ಯಮವಾಗಿ ಉತ್ತೇಜಿಸಲು ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ಸೋಮವಾರ(ಅ.28) ನಡೆದ ಸಂಪುಟ ಸಭೆ ಅನುಮೋದನೆ ನೀಡಿತು.

ಸಾಹಸ ,ಕೃಷಿ, ಕರಾವಳಿ, ಬೀಚ್ ಪ್ರವಸೋದ್ಯಮ, ಪಾರಂಪರಿಕ, ಪರಿಸರ, ಶೈಕ್ಷಣಿಕ ಪ್ರವಾಸೋದ್ಯಮ, ಒಳನಾಡು, ಸಾಹಿತ್ಯ, ಕಡಲು, ವೈದ್ಯಕೀಯ ಪ್ರವಾಸೋದ್ಯಮ, ಗಣಿಗಾರಿಕೆ, ರಾಜಕೀಯ, ಆಧ್ಯಾತ್ಮ, ಧಾರ್ಮಿಕ ಪ್ರವಾಸೋದ್ಯಮ, ಬುಡಕಟ್ಟು, ವಿವಾಹ ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಪ್ರಾಕೃತಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ರಾಜಕೀಯ ವಲಯಗಳಲ್ಲಿ ಪ್ರವಾಸೋದ್ಯಮ ಅವಕಾಶಗಳನ್ನು ಸೃಷ್ಟಿಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ನೀಡಿತು.

ಬೆಳಗಾವಿ ಚಳಿಗಾಲದ ಅಧಿವೇಶನ

ಬೆಳಗಾವಿಯಲ್ಲಿ ಈ ಬಾರಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸುವ ಕುರಿತು ಚರ್ಚೆ ನಡೆಸಿದ ಸಂಪುಟ, ಡಿಸೆಂಬರ್‌ ಮೂರು ಮತ್ತು ನಾಲ್ಕನೇ ವಾರದಲ್ಲಿ ಕಾಂಗ್ರೆಸ್‌ ಎಐಸಿಸಿ ಅಧಿವೇಶನಕ್ಕೆ ಹೊಂದಿಕೆಯಾಗುವಂತೆ ದಿನಾಂಕ ನಿರ್ಣಯ ಮಾಡುವ ಅಧಿಕಾರವನ್ನು ಸಿಎಂ ವ್ಯಾಪ್ತಿಗೆ ಬಿಡಲು ನಿರ್ಧರಿಸಿತು.

ಸಚಿವ ಸಂಪುಟದ ಇತರೆ ನಿರ್ಧಾರಗಳು

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML)ನಲ್ಲಿ ರಾಜ್ಯ ಸರ್ಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು 49% ರಿಂದ 90%ಕ್ಕೆ ಹೆಚ್ಚಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದ್ದು, 27.44 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ.

ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್-ಮಾಲೂರು ಗಡಿವರೆಗೆ ಹೈಬ್ರಿಡ್ ಮಾದರಿಯಲ್ಲಿ 110 ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ 3,190 ಕೋಟಿ ರೂ. ಅನುದಾನಕ್ಕೆ ಅನುಮೋದನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದ 19 ಸ್ವಾಧೀನದಾರರ ಪುನರ್ ವಸತಿಗಾಗಿ ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದಲ್ಲಿ 33-24 ಎಕರೆ ಜಮೀನನ್ನು ಮಂಜೂರು ಮಾಡಲು(ಪ್ರತಿ ಕುಟುಂಬಕ್ಕೆ 2 ಎಕರೆ ಸಾಗುವಳಿಗಾಗಿ ಹಾಗೂ 4 ಗುಂಟೆ ವಸತಿಗಾಗಿ) ಒಪ್ಪಿಗೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲು ಒಟ್ಟು ರೂ. 14.24 ಕೋಟಿ ರೂ. ಅಂದಾಜು ಮೊತ್ತದ ‘ಓದು ಕರ್ನಾಟಕ’ ಚಟುವಟಿಕೆಗೆ ಅನುಮೋದನೆ.

ಸಮಾಜ ಕಲ್ಯಾಣ ಇಲಾಖೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಹಾಗೂ ಸದರಿ ಠಾಣೆಗಳ ನಿರ್ವಹಣೆಗೆ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಲಬಾಳ ಹಳ್ಳಿ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆಗೆ 177.10 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

Read More
Next Story