Cabinet Meeting | ಒಳ ಮೀಸಲಾತಿ: ಮಹತ್ವದ ಸಂಪುಟ ತೀರ್ಮಾನ, ಆಯೋಗ ರಚನೆಗೆ ಅಸ್ತು
x

Cabinet Meeting | ಒಳ ಮೀಸಲಾತಿ: ಮಹತ್ವದ ಸಂಪುಟ ತೀರ್ಮಾನ, ಆಯೋಗ ರಚನೆಗೆ ಅಸ್ತು


ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಸೋಮವಾರ(ಅ.28) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಶಿಷ್ಟ ಜಾತಿ(ಎಸ್ಸಿ) ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ, ದತ್ತಾಂಶ ಸ್ವೀಕರಿಸಿ ಮುಂದಿನ ನಿರ್ಣಯ ಕೈಗೊಳ್ಳಲು ನಿರ್ಣಯಿಸಲಾಗಿದೆ.

ಅಲ್ಲದೇ ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ಆಯೋಗಕ್ಕೆ ಕಾಲಮಿತಿ ನಿಗದಿ ಮಾಡಲು ಕೂಡ ಸಂಪುಟ ತೀರ್ಮಾನಿಸಿದೆ.

ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಒಳ ಮೀಸಲಾತಿ ಕಲ್ಪಿಸಲು ಕ್ಯಾಬಿನೆಟ್ ನಿರ್ಣಯ ಮಾಡಿದೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸ್ವೀಕರಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಂಪುಟ ಸರ್ವಾನುಮತದ ನಿರ್ಧಾರ ಕೈಗೊಂಡಿದೆ.

ಅಲ್ಲದೇ ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರದಿಂದ, ಆಯೋಗಕ್ಕೆ ಸೂಚನೆ ನೀಡಲು ಕೂಡ ನಿರ್ಧರಿಸಲಾಗಿದ್ದು, ಹೀಗಾಗಿ ಮುಂದಿನ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದ್ದು, ಸೋಮವಾರದಿಂದ ಯಾವುದೇ ನೇಮಕಾತಿ ನೋಟಿಫಿಕೇಶನ್ ಹೊರಡಿಸಿದ್ದಲ್ಲಿ ಆಯೋಗದರ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲು ಕೂಡ ಚರ್ಚಿಸಲಾಗಿದೆ.

ತೀರ್ಪು ನೀಡಿದ್ದ ಸುಪ್ರೀಂಕೋರ್ಟ್

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯ ಒಳಗೆ ಅತಿ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡಲು ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಒಳ ಮೀಸಲಾತಿ ಕಾನೂನು ಬದ್ಧ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾ. ಬಿ ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಆದರೆ, ಸರ್ಕಾರಿ ಉದ್ಯೋಗಗಳಲ್ಲಿ ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ರಾಜ್ಯಗಳ ವಿವೇಚನೆಗೆ ಕೋರ್ಟ್ ಬಿಟ್ಟಿತ್ತು.

ಮೂರು ದಶಕಗಳ ಹೋರಾಟ

ಪರಿಶಿಷ್ಟ ಜಾತಿ ಒಳಮೀಸಲಾತಿ ನೀಡುವ ಮೂಲಕ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳ ನಡುವೆ ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ಆಗಿರುವ ತಾರತಮ್ಯ ಮತ್ತು ಅನ್ಯಾಯವನ್ನು ಸರಿಪಡಿಸಬೇಕು. ಪರಿಶಿಷ್ಟ ಜಾತಿಯಲ್ಲೂ ಇರುವ ಅತಿ ಹಿಂದುಳಿದ, ಶೋಷಿತ ಸಮುದಾಯಗಳ ಅವಕಾಶಗಳನ್ನು ಕಬಳಿಸುತ್ತಿರುವ ಸ್ಪೃಶ್ಯ ಜಾತಿಗಳ ಶೋಷಣೆಗೆ ಕಡಿವಾಣ ಹಾಕಬೇಕು ಎಂಬ ಕೂಗು ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಿಂದ ಕೇಳಿಬಂದಿತ್ತು.

ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಒಳಮೀಸಲಾತಿ ಹೋರಾಟ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಆಯೋಗ ರಚಿಸುವ ಪ್ರಸ್ತಾವ ಸರ್ಕಾರದ ಮುಂದೆ ಇತ್ತು. ಆದರೆ ಆ ಬಳಿಕ ಅಧಿಕಾರಕ್ಕೆ ಬಂದ ಎನ್ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, 2005ರಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ನೇತೃತ್ವದ ಆಯೋಗ ರಚಿಸಿ ಪರಿಶಿಷ್ಟ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ.15ರ ಮೀಸಲಾತಿಯನ್ನು ಎಡಗೈಗೆ ಶೇ.6, ಬಲಗೈಗೆ ಶೇ.5.5, ಅಸ್ಪೃಶ್ಯ ಉಪಜಾತಿಗಳಿಗೆ ಶೇ. 3 ಹಾಗೂ ಈ ಮೂರು ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ. 1ರಷ್ಟು ಮೀಸಲಾತಿ ನೀಡಬಹುದು ಎಂದು ನ್ಯಾ. ಸದಾಶಿವ ಆಯೋಗವು 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಿತ್ತು.

ಆ ಬಳಿಕ ಪ್ರತಿ ಚುನಾವಣೆಯಲ್ಲಿಯೂ ಒಳ ಮೀಸಲಾತಿ ವಿಷಯ ರಾಜಕೀಯ ಪಕ್ಷಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

Read More
Next Story