
Cabinet Meeting | ದೇವದಾಸಿ ಪದ್ಧತಿ ನಿರ್ಮೂಲನೆಗೆ ದಿಟ್ಟ ಕ್ರಮ ; ಹೊಸ ವಿಧೇಯಕಕ್ಕೆ ಸಂಪುಟ ಅಸ್ತು, ಏನಿದು ವಿಧೇಯಕ?
ದೇವದಾಸಿ ಮಹಿಳೆಯರನ್ನು ಶೋಷಣೆ ಹಾಗೂ ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಹೊಸ ವಿಧೇಯಕ ಮಹತ್ತರವಾದ ಕ್ರಮವಾಗಿದೆ ಎಂದು ಹೇಳಲಾಗಿದೆ.
ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ಮಾಜಿ ದೇವದಾಸಿಯರಿಗೆ ಸಮಗ್ರ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇವದಾಸಿಯರಿಗೆ ಜನಿಸಿದ ಮಕ್ಕಳ ಪಿತೃತ್ವ ಗುರುತಿಸುವ ಹಕ್ಕು ಸೇರಿದಂತೆ ಪುನರ್ವಸತಿ ಕಲ್ಪಿಸುವ "ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ- 2025” ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ದೇವದಾಸಿ ಮಹಿಳೆಯರನ್ನು ಶೋಷಣೆ ಹಾಗೂ ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಹೊಸ ವಿಧೇಯಕ ಮಹತ್ತರವಾದ ಕ್ರಮವಾಗಿದೆ ಎಂದು ಹೇಳಲಾಗಿದೆ.
ಹೊಸ ಕಾಯ್ದೆ ಜಾರಿಯ ಬಳಿಕ ಈ ಹಿಂದಿನ ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಅಧಿನಿಯಮ -1982, ಕರ್ನಾಟಕ ದೇವದಾಸಿಯರ (ಸಮರ್ಪಣ ನಿಷೇಧ) (ತಿದ್ದುಪಡಿ) ಅಧಿನಿಯಮ- 2009 ರದ್ದಾಗಲಿವೆ. ಹೊಸ ವಿಧೇಯಕವನ್ನು ಆ. 11ರಿಂದ ಆರಂಭವಾಗುವ ವಿಧಾನ ಮಂಡಲದಲ್ಲಿ ಮಂಡನೆ ಮಾಡಲು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.
ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು ಸುಮಾರು ಎಂಟು ವರ್ಷಗಳ ಕಾಲ ಅಧ್ಯಯನ ನಡೆಸಿ ಕರಡು ಮಸೂದೆ ಸಿದ್ಧಪಡಿಸಿತ್ತು. ಹಲವು ಇಲಾಖೆಗಳ ಸಮನ್ವಯದಿಂದ ಕರಡು ಮಸೂದೆ ಪರಿಶೀಲನೆ ಮಾಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಸೂದೆಗೆ ಅಂತಿಮ ರೂಪ ನೀಡಿತ್ತು.
ದೇವದಾಸಿ ಪದ್ಧತಿ ಜೀವಂತ?
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಇಂದಿಗೂ ದೇವದಾಸಿಯರಿದ್ದಾರೆ. ದೇವದಾಸಿ ಪದ್ಧತಿಯನ್ನು ಕರ್ನಾಟಕ ಸರ್ಕಾರ 1982 ರಲ್ಲೇ ನಿಷೇಧಿಸಲಾಗಿತ್ತು. ಆದಾಗ್ಯೂ, ಹಲವೆಡೆ ಈ ಅನಿಷ್ಟ ಪದ್ಧತಿ ಜೀವಂತವಾಗಿದೆ. ಯುವತಿಯರನ್ನು ದೇವದಾಸಿಯೆಂದು ಪರಿಗಣಿಸಿ ದೇವಾಲಯಕ್ಕೆ ಸಮರ್ಪಿಸುವುದೇ ದೇವದಾಸಿ ಪದ್ಧತಿ. ದುರದೃಷ್ಟವೆಂದರೆ ದೇವದಾಸಿಯರನ್ನು ಲೈಂಗಿಕ ಗುಲಾಮಗಿರಿ ಬಳಸಿಕೊಳ್ಳುತ್ತಿರುವುದು ಹಲವೆಡೆ ಇನ್ನೂ ಜೀವಂತವಾಗಿದೆ.
1994ರಲ್ಲಿ ಅಧಿಕಾರಿಗಳು ದೇವದಾಸಿಯರ ಸಮೀಕ್ಷೆ ನಡೆಸಿದ್ದರು. ಆಗ 11 ಮಂದಿ ಮಾತ್ರ ದೇವದಾಸಿಯರಿದ್ದಾರೆ. ಅವರಲ್ಲಿ ಇಬ್ಬರು ಮೃತಪಟ್ಟಿದ್ದರು ಎಂದು ವರದಿ ನೀಡಿದ್ದರು. ಆದರೆ, ಇತ್ತೀಚೆಗೆ ಬೆಳವಾವಿಯಲ್ಲಿ ಸುಮಾರು 70 ಮಂದಿ ದೇವದಾಸಿಯರು ಇದ್ದಾರೆಂಬ ಸಂಗತಿ ಅಧಿಕಾರಿಗಳ ಸಮೀಕ್ಷೆಯನ್ನು ಸುಳ್ಳಾಗಿಸಿತ್ತು.
ಹೊಸ ವಿಧೇಯಕದಲ್ಲಿ ಏನಿದೆ?
ದೇವದಾಸಿ ಮಹಿಳೆಯರ ಶೋಷಣೆ, ಅವರ ಮಕ್ಕಳನ್ನು ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸಿ ಸಾಮಾಜಿಕವಾಗಿ ಸಬಲರನ್ನಾಗಿಸುವುದು ವಿಧೇಯಕದ ಉದ್ದೇಶವಾಗಿದೆ. ದೇವದಾಸಿಯರ ಮಕ್ಕಳ ಜೈವಿಕ ತಂದೆಯನ್ನು ವಿಶೇಷ ಕಾನೂನಿನಡಿ ಹೊಣೆಗಾರರನ್ನಾಗಿ ಮಾಡುವುದು ಹೊಸ ವಿಧೇಯಕದಲ್ಲಿದೆ. ದೇವದಾಸಿ ಕುಟುಂಬಕ್ಕೆ ಸಮಗ್ರ ಪುನರ್ವಸತಿ ಮತ್ತು ದೇವದಾಸಿ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.
ದೇವದಾಸಿಗೆ ಜನಿಸುವ ಮಗುವನ್ನು ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಪೋಷಕರ ಆಸ್ತಿಯ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರ ಹೊಂದುವ ಅರ್ಹತೆ ಮಗುವಿಗೂ ಇರಲಿದೆ. ದೇವದಾಸಿಯ ಮಕ್ಕಳಿಗೆ ತಂದೆ ಯಾರೆಂದು ತಿಳಿದಿರುವುದಿಲ್ಲ. ಮಕ್ಕಳು ಕಾನೂನುಬದ್ಧ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರು ಘೋಷಿಸುವುದು ಕಡ್ಡಾಯ. ಇಂತಹ ಸಂದರ್ಭಗಳಲ್ಲಿ ತಂದೆಯ ಹೆಸರಿನ ಘೋಷಣೆ ಕಡ್ಡಾಯವಲ್ಲ ಎಂದು ಖಚಿತಪಡಿಸಿಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದಿದೆ.
ಜೀವನಾಂಶ, ಪುನರ್ವಸತಿ ಹೇಗೆ?
ದೇವದಾಸಿ ಮಹಿಳೆಗೆ ಜನಿಸಿದ ಯಾವುದೇ ಮಗು, ತಂದೆಯ ಗುರುತು ಖಚಿತಪಡಿಸಿಕೊಳ್ಳುವ ಹಕ್ಕು ವಿಧೇಯಕದಲ್ಲಿದೆ. ಅಂತಹ ಮಗುವು ತಂದೆಯ ಬಂಧದ ಮಾನ್ಯತೆಗಾಗಿ ತಾಲ್ಲೂಕು ಸಮಿತಿಗೆ ಅರ್ಜಿ ಸಲ್ಲಿಸಬಹುದು.
ಜೈವಿಕ ತಂದೆ ಒಪ್ಪಿಕೊಂಡರೆ ಆ ಬಗ್ಗೆ ಲಿಖಿತವಾಗಿ ಜಿಲ್ಲಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಂದೆ ಮತ್ತೊಮ್ಮೆ ಬಹಿರಂಗವಾಗಿ ಮತ್ತು ಲಿಖಿತವಾಗಿ ಅಂತಹ ಸಂಬಂಧ ಒಪ್ಪಿಕೊಳ್ಳಬೇಕು. ತಂದೆಯು ಒಪ್ಪಿಕೊಳ್ಳಲು ನಿರಾಕರಿಸಿದರೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಡಿಎನ್‌ಎ ಪರೀಕ್ಷೆ ನಡೆಸಬಹುದು. ಅಂತಹ ಮಗುವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಚಿತ ಕಾನೂನು ನೆರವು ಒದಗಿಸಲಿದೆ.
ಐದು ವರ್ಷ ಶಿಕ್ಷೆ, ದಂಡ
ವಿಧೇಯಕವು ಕಾಯ್ದೆ ರೂಪ ಪಡೆದುಕೊಂಡ ಬಳಿಕ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಯಾವುದೇ ಸಮಾರಂಭ ಅಥವಾ ಕಾರ್ಯಗಳಿಗೆ ಅನುಮತಿ ಇಲ್ಲ. ಈ ಕೃತ್ಯದಲ್ಲಿ ಭಾಗವಹಿಸಿದವರಿಗೆ, ಪ್ರಚೋದಿಸುವವರಿಗೆ ಕನಿಷ್ಠ ಎರಡು ವರ್ಷದಿಂದ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ಗಳಿಗೂ ಕಡಿಮೆ ಇಲ್ಲದಂತೆ ದಂಡ ವಿಧಿಸಲು ಅವಕಾಶವಿದೆ.
ದೇವದಾಸಿ ಪದ್ಧತಿ ಉತ್ತೇಜಿಸಿದರೆ ಅಥವಾ ಪ್ರಚಾರ ಮಾಡಿದರೆ 1ವರ್ಷದಿಂದ 5ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂ.ಗಳಿಗೆ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಒಮ್ಮೆ ಶಿಕ್ಷೆಗೆ ಒಳಗಾಗಿರುವವರು ಅಪರಾಧ ಪುನರಾವರ್ತಿಸಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ವಿಧೇಯಕದಲ್ಲಿದೆ.