
ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
Cabinet Meeting | ಅಂಗವಿಕಲ ನೌಕರರಿಗೆ ಮುಂಬಡ್ತಿ; ಶೇ. 4 ಮೀಸಲು ನೀಡಲು ಸಂಪುಟ ನಿರ್ಧಾರ
ಗ್ರೂಪ್-ಡಿ ಮತ್ತು ಗ್ರೂಪ್-ಸಿ ವೃಂದದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಮಾತ್ರ ಶೇ 4ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೂ ಮೀಸಲಾತಿ ವಿಸ್ತರಿಸಿದೆ.
ರಾಜ್ಯ ಸರ್ಕಾರಿ ಗ್ರೂಪ್ ʼಎʼ ಹಾಗೂ ಗ್ರೂಪ್ ʼಬಿʼ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಶೇ 4ರಷ್ಟು ಮೀಸಲಾತಿ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರಲ್ಲಿ ಪರಿಭಾಷಿಸಲಾಗಿರುವ ʼಎದ್ದುಕಾಣುವ ಅಂಗವೈಕಲ್ಯʼ ಹೊಂದಿರುವ ಅಧಿಕಾರಿಗಳಿಗೆ ಗ್ರೂಪ್ ʼಎʼ ಮತ್ತು ಗ್ರೂಪ್ ʼಬಿʼ ಹುದ್ದೆಗಳ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವ ಮೂಲಕ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
2023 ಮಾ.28 ರಂದು ರಾಜ್ಯ ಸರ್ಕಾರ ಸಿವಿಲ್ ಸೇವೆಗಳಲ್ಲಿ ಗ್ರೂಪ್-ಡಿ ಮತ್ತು ಗ್ರೂಪ್-ಸಿ ವೃಂದದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಮಾತ್ರ ಶೇ 4ರಷ್ಟು ಮೀಸಲಾತಿ ನೀಡಿ ಆದೇಶ ಹೊರಡಿಸಿತ್ತು. ಈಗ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೂ ಮೀಸಲಾತಿ ವಿಸ್ತರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ನೀಡಬೇಕೆಂದು ಅಂಗವಿಕಲ ನೌಕರರ ಸಂಘದ ಗೌರವ ಅಧ್ಯಕ್ಷ ರೇಣುಕಾರಾಧ್ಯ, ರಾಜ್ಯ ಘಟಕದ ಅಧ್ಯಕ್ಷ ಆರ್.ಇಂದ್ರೇಶ್, ಕಾರ್ಯದರ್ಶಿಗಳಾದ ಸದಾನಂದ ಆಚಾರ್ಯ ಹಾಗೂ ರಾಮಣ್ಣ ನೇತೃತ್ವದ ಆಯೋಗವು ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮೀಸಲಾತಿ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದರು.
ಗ್ರೂಪ್ ʼಎʼ ಹಾಗೂ ಗ್ರೂಪ್ ʼಬಿʼ ವೃಂದದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವಾಗ ಅಂಗವಿಕಲ ನೌಕರರಿಗೂ ಮೀಸಲು ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗವಿಕಲರ ನೌಕರರ ಸಂಘಕ್ಕೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭರವಸೆ ನೀಡಿದ್ದರು.
ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಶೇ 4 ಮೀಸಲಾತಿ, ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆ, ಇಎಸ್‌ಐ ವೃಂದ ನೇಮಕಾತಿಗಳಿಗೆ ಅನುಮೋದನೆ, ಕಾರವಾರ ಮೆಡಿಕಲ್ ಕಾಲೇಜಿಗೆ ಪೀಠೋಪಕರಣಗಳ ಖರೀದಿಗೆ ಒಪ್ಪಿಗೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಸೂಚನೆಯಂತೆ ಬೆಳ್ಳಂದೂರು ಕೆರೆ ಸಮಗ್ರ ಅಭಿವೃದ್ಧಿ, ಗ್ರೇಟರ್ ಬೆಂಗಳೂರು ಅಧಿಸೂಚನೆ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಭವನಕ್ಕೆ ಜಮೀನು, ಅರ್ಕಾವತಿಯಿಂದ 46 ಕೆರೆಗಳ ಭರ್ತಿ ಸೇರಿದಂತೆ ಹಲವು ನಿರ್ಣಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.