Cabinet Meeting | ರಾಜ್ಯಪಾಲರ ಅಧಿಕಾರ ಮೊಟಕು: ವಿವಿ ಕುಲಾಧಿಪತಿ ಹುದ್ದೆ ಸಿಎಂ
ವಿಶ್ವವಿದ್ಯಾಲಯವು ಹೆಚ್ಚು ಕ್ರಿಯಾಶೀಲವಾಗಬೇಕು. ನಿರ್ಣಯಗಳು ಶೀಘ್ರವಾಗಿ ಆಗಬೇಕು ಎನ್ನುವ ಕಾರಣಕ್ಕೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಿದ್ದು, ಕುಲಾಧಿಪತಿ ಸ್ಥಾನವನ್ನು ಸಿಎಂ ಅವರಿಗೆ ವಹಿಸಲಾಗಿದೆ ಎಂದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನವನ್ನು ರಾಜ್ಯಪಾಲರಿಂದ ಹಿಂಪಡೆದು ಮುಖ್ಯಮಂತ್ರಿಗೆ ನೀಡುವ ವಿಧೇಯಕ ಸೇರಿದಂತೆ 9 ವಿಧೇಯಕಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸರ್ಕಾರ ನಿರ್ಧರಿಸಿದೆ.
ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲರ ಅಧಿಕಾರವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಯಲ್ಲಿ ಮೊಟಕುಗೊಳಿಸಲಾಗಿದೆ. ಆ ಮೂಲಕ ವಿವಿಯ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಮುಖ್ಯಮಂತ್ರಿಗೆ ವಹಿಸಲಾಗಿದೆ. ವಿಶ್ವವಿದ್ಯಾಲಯವು ಹೆಚ್ಚು ಕ್ರಿಯಾಶೀಲವಾಗಬೇಕು. ನಿರ್ಣಯಗಳು ಶೀಘ್ರವಾಗಿ ಆಗಬೇಕು ಎನ್ನುವ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ
ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ಕುಲಾಧಿಪತಿ ಸ್ಥಾನವನ್ನು ಈಚೆಗೆ ತಮಿಳುನಾಡು ಸರ್ಕಾರ ಹಿಂಪಡೆದು, ಸಿಎಂ ಅವರಿಗೆ ನೀಡಿತ್ತು. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆ ಅಧಿಕಾರವನ್ನು ರಾಜ್ಯಪಾಲರಿಂದ ಹಿಂಪಡೆದು, ತಜ್ಞರ ಸಮಿತಿಗೆ ನೀಡಲಾಗಿದೆ.
ಸಂಪುಟದ ಇತರೆ ನಿರ್ಣಯಗಳು
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ (ಕರ್ನಾಟಕ) (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ
ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ. ವಿಫಲವಾದ ಕೊಳವೆಬಾವಿಗಳನ್ನು ಮುಚ್ಚದೇ ಬಿಡುವ ಮಾಲೀಕರಿಗೆ ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2024, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024, ʼKarnataka State Allied and Healthcare Professions Council ನಿಯಮಗಳು, 2024.
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ವಿಧೇಯಕ, 2024.
2024-25ನೇ ಸಾಲಿನ ಕಾರ್ಯಕ್ರಮಗಳಡಿ 15 ವಿವಿಧ ಹಣಕಾಸು ಆಯೋಗದ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಮೂಲ ಸೌಕರ್ಯ ಹಾಗೂ ಉಪಕರಣ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
PM- ABHIM ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರದ CIMS, ಇಲ್ಲಿಗೆ ಅನುಮೋದನೆಯಾಗಿರುವ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಸ್ಥಳಾಂತರಿಸಿ 16.63 ಕೋಟಿ ವೆಚ್ಚದಲಿ ನಿರ್ಮಿಸುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
PM- ABHIM ಯೋಜನೆಯಡಿಯಲ್ಲಿ 108.36 ಕೋಟಿ ರೂ ವೆಚ್ಚದಲ್ಲಿ ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ – ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ರಾಯಚೂರು ತಾಲ್ಲೂಕಿನ ಯರಮರಸ್ ಗ್ರಾಮದಲ್ಲಿ 14 ಗುಂಟೆ ಗೋಮಾಳ ಜಮೀನನ್ನು ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಲು ಅನುಮೋದನೆ.
ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇಬ್ರಿಡ್ಜ್ ಗಳನ್ನು ಸ್ಥಾಪಿಸಲು ಮೊದಲ ಹಂತದಲ್ಲಿ ರಾಜ್ಯದ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಗುರುತಿಸಿದ 15 ಸ್ಥಳಗಳಲ್ಲಿ 11.01 ಕೋಟಿ ರೂ.ಗಳಲ್ಲಿ ಸ್ಥಾಪಿಸಲು ಅನುಮೋದನೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವನ್ನು 25 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
ಏಷ್ಯಾ ಅಭಿವೃದ್ಧಿ ಬ್ಯಾಂಕಿನ 2500 ಕೋಟಿ ರೂ.ಗಳ ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025 ರಿಂದ ಜೂನ್ 2029 ರವರೆಗೆ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲು ಅನುಮೋದನೆ.
ಕೇಂದ್ರ ಪ್ರವಾಸೋದ್ಯಮದ ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಮೈಸೂರಿನಲ್ಲಿ ʼEcological Experience Zoneʼ ನ್ನು 18.47 ಕೋಟಿ ಮೊತ್ತದಲ್ಲಿ ಹಾಗೂ ಹಂಪಿಯಲ್ಲಿ ʼTravellers nookʼ ನ್ನು 25.63 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಟೆಂಡರ್ ಕರೆಯಲು ಅನುಮೋದನೆ.
ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ , ನಿರ್ವಹಣೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಟೆಂಡರ್ ಮೂಲಕ ಹೋಟೆಲ್ ಆಪರೇಟರ್ ಆಯ್ಕೆ ಮಾಡಲು ಅನುಮೋದನೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿಗಳನ್ನು 4300 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ (ರೈಲ್ವೆ ಮಂತ್ರಾಲಯ) ಅನುದಾನದಿಂದ (Equity ಮಾದರಿ 50:50 ಅನುಪಾತದಲ್ಲಿ) ಖರೀದಿಸಲು ಅನುಮೋದನೆ ನೀಡಲು ಸಂಪುಟ ಸಭೆ ನಿರ್ಣಯಿಸಿದೆ.