
ಬಾಹ್ಯಾಕಾಶ ತಂತ್ರಜ್ಞಾನ; ಮಾಹಿತಿ ತಂತ್ರಜ್ಞಾನ ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ
ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಗೆ ಕೊಂಡೊಯ್ಯಲು "ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030" ಕ್ಕೆ ಅನುಮೋದನೆ ನೀಡಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸುವ ಮಹತ್ವಾಕಾಂಕ್ಷೆಯೊಂದಿಗೆ, "ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030" ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ನಿರ್ಣಯ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಐತಿಹಾಸಿಕ ನೀತಿಯು ಮುಂದಿನ ಐದು ವರ್ಷಗಳ ಅವಧಿಗೆ 225 ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಒಳಗೊಂಡಿದ್ದು, ರಾಜ್ಯದಲ್ಲಿ ಬಾಹ್ಯಾಕಾಶ ಸಂಬಂಧಿತ ಹೂಡಿಕೆ, ಸಂಶೋಧನೆ, ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.50 ಪಾಲು ಹೊಂದುವ ಮೂಲಕ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಕರ್ನಾಟಕವನ್ನು ಮೊದಲ ಸ್ಥಾನವನ್ನಾಗಿ ಉಳಿಸಿಕೊಳ್ಳುವ ಉದ್ದೇಶ ಇದೆ. ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನ ಮಾರುಕಟ್ಟೆಯಲ್ಲಿಶೇ. 5 ರಷ್ಟು ಪಾಲು ಹೊಂದುವುದು. ಜಾಗತಿಕ ಮತ್ತು ದೇಶೀಯ ಕಂಪನಿಗಳಿಂದ 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವುದಾಗಿದೆ ಎಂದು ಹೇಳಿದರು.
50 ಸಾವಿರ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಸೃಷ್ಟಿಸುವುದು. 500 ಕರ್ನಾಟಕ ಮೂಲದ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಎಸ್‌ಎಂಇಗಳಿಗೆ ಅನುದಾನ ಮತ್ತು ಆರ್ಥಿಕ ಬೆಂಬಲ ನೀಡುವುದಾಗಿದೆ. ಆಡಳಿತ ಮತ್ತು ಇತರ ವಲಯಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಳವಡಿಕೆಯನ್ನು ಸುಧಾರಿಸುವುದು ನೀತಿಯ ಉದ್ದೇಶವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸಿ, ಅಗತ್ಯ ತರಬೇತಿ ನೀಡುವುದು. ಹೂಡಿಕೆದಾರರಿಗೆ ಆಕರ್ಷಕ ಪ್ರೋತ್ಸಾಹ ಧನ ಮತ್ತು ಸಬ್ಸಿಡಿಗಳನ್ನು ನೀಡುವುದು. ಬಾಹ್ಯಾಕಾಶ ಉತ್ಪಾದನಾ ಪಾರ್ಕ್ ಮತ್ತು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು. ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿ, ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ಅರಿವು ಮೂಡಿಸಿ, ಅದರ ಅಳವಡಿಕೆಯನ್ನು ಉತ್ತೇಜಿಸುವುದು ನೀತಿಯನ್ನು ಒಳಗೊಂಡಿದೆ ಎಂದು ತಿಳಿಸಿದರು.
11.5 ಲಕ್ಷ ಕೋಟಿ ರೂ. ಸಾಫ್ಟ್‌ವೇರ್ ರಫ್ತು ಗುರಿ
ರಾಜ್ಯವನ್ನು ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಮತ್ತಷ್ಟು ಬಲಪಡಿಸುವ ಮತ್ತು ರಾಜ್ಯದ ಆರ್ಥಿಕತೆಗೆ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಕೊಡುಗೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯೊಂದಿಗೆ "ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030" ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೊಸ ನೀತಿಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಸಾಫ್ಟ್‌ವೇರ್ ರಫ್ತನ್ನು 11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಈ ನೀತಿಯನ್ನು ಪ್ರಸ್ತಾಪಿಸಿದ್ದು, ಇದು ಬೆಂಗಳೂರಿನಾಚೆಗೂ ಐಟಿ ಉದ್ಯಮದ ಸಮತೋಲಿತ ಬೆಳವಣಿಗೆಗೆ ವಿಶೇಷ ಒತ್ತು ನೀಡಲಿದೆ ಎಂದು ಹೇಳಿದರು.
ಹೊಸ ಐಟಿ ನೀತಿಯಲ್ಲಿ ಸಾಫ್ಟ್‌ವೇರ್ ರಫ್ತನ್ನು ಪ್ರಸ್ತುತ 4.09 ಲಕ್ಷ ಕೋಟಿ ರೂ.ನಿಂದ 11.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದಾಗಿದೆ. ರಾಜ್ಯದ ಐಟಿ ವಲಯದ ಕೊಡುಗೆಯನ್ನು ಶೇ.26 ರಿಂದ ಶೇ.36ಕ್ಕೆ ಏರಿಸುವುದಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಇತರ ನೂತನ ತಂತ್ರಜ್ಞಾನಗಳ ಮೇಲೆ ಗಮನಹರಿಸಿ, ಐಟಿ ಹೂಡಿಕೆಯನ್ನು ಆಕರ್ಷಿಸುವುದು. ಈ ಮೂಲಕ ಸಮಗ್ರ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸಲಾಗುವುದು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 'ಟೆಕ್ನೋವರ್ಸ್' ಎಂಬ ಸಂಯೋಜಿತ ತಂತ್ರಜ್ಞಾನ ಆವರಣಗಳನ್ನು ಸ್ಥಾಪಿಸಲಾಗುವುದು. ಇವು ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಡಿಜಿಟಲ್ ಟೆಸ್ಟ್‌ಬೆಡ್‌ಗಳು ಮತ್ತು ವಲಯ-ಕೇಂದ್ರಿತ ನಾವೀನ್ಯತಾ ವಲಯಗಳನ್ನು ಒಳಗೊಂಡಿರುತ್ತವೆ ಎಂದು ಮಾಹಿತಿ ನೀಡಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ನಾಯಕತ್ವವನ್ನು ಪ್ರೋತ್ಸಾಹಿಸಲು "ಮಹಿಳಾ ಗ್ಲೋಬಲ್ ಟೆಕ್ ಮಿಷನ್ಸ್ ಫೆಲೋಶಿಪ್" ಕಾರ್ಯಕ್ರಮದಡಿ 1000 ಮಧ್ಯಮ-ವೃತ್ತಿಜೀವನದ ಮಹಿಳಾ ವೃತ್ತಿಪರರಿಗೆ ತರಬೇತಿ ನೀಡಲಾಗುವುದು. ಬೆಂಗಳೂರಿನಾಚೆ ಸ್ಥಾಪನೆಯಾಗುವ ಐಟಿ ಕಂಪನಿಗಳಿಗೆ ನೇಮಕಾತಿ ನೆರವು, ಇಂಟರ್ನ್‌ಶಿಪ್ ವೆಚ್ಚ ಮರುಪಾವತಿ, ಭವಿಷ್ಯ ನಿಧಿ ಮರುಪಾವತಿ, ಕೌಶಲ್ಯ ತರಬೇತಿ ವೆಚ್ಚ ಮರುಪಾವತಿ ಸೇರಿದಂತೆ 16 ವಿವಿಧ ಪ್ರೋತ್ಸಾಹಕಗಳನ್ನು ನೀಡಲಾಗುವುದು. ಬೆಂಗಳೂರಿನಲ್ಲಿರುವ ಘಟಕಗಳಿಗೂ ಸುಧಾರಿತ ನಾವೀನ್ಯತೆ ಮತ್ತು ಸಂಶೋಧನೆಗೆ ಪ್ರೋತ್ಸಾಹ, ಇಂಟರ್ನ್‌ಶಿಪ್ ವೆಚ್ಚ ಮರುಪಾವತಿ ಸೇರಿದಂತೆ ಆರು ಪ್ರಮುಖ ಪ್ರೋತ್ಸಾಹಗಳು ಲಭ್ಯವಾಗಲಿವೆ ಎಂದು ವಿವರಿಸಿದರು.

