
ಬೆಳ್ಳಂದೂರು ಕೆರೆಗೆ ಕಲುಷಿತ ನೀರು ಹರಿಯುತ್ತಿರುವುದು.
Cabinet Meeting | ಬೆಂಗಳೂರು ಬೆಳ್ಳಂದೂರು ಕೆರೆಗೆ ಕಾಯಕಲ್ಪ; ಸಚಿವ ಸಂಪುಟ ಒಪ್ಪಿಗೆ
ಬೆಳ್ಳಂದೂರು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ 79.67 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ದಿನ ಕಳೆದಂತೆ ಕೆರೆಗಳು ಮಾಯವಾಗುತ್ತಿವೆ. ನಗರ ನಿರ್ಮಾತೃ ಕೆಂಪೇಗೌಡರ ಕಾಲದಲ್ಲಿ 1500ಕ್ಕೂ ಹೆಚ್ಚು ಕೆರೆಗಳಿದ್ದವು. ಆದರೆ ಅವುಗಳ ಸಂಖ್ಯೆ ಈಗ 206ಕ್ಕೆ ಕುಸಿದಿದೆ. ಪ್ರಸ್ತುತ, ಬೆಂಗಳೂರಿನಲ್ಲಿರುವ ಹಲವು ಕೆರೆಗಳು ತ್ಯಾಜ್ಯ, ಹೂಳು ಹಾಗೂ ಕಲುಷಿತ ನೀರಿನಿಂದ ಹಾಳಾಗಿವೆ. ಅವುಗಳಲ್ಲಿ ಬೆಳ್ಳಂದೂರು ಕೆರೆಯೂ ಒಂದು.
ಕಲುಷಿತ ಹಾಗೂ ರಾಸಯನಿಕಯುಕ್ತ ನೀರಿನ ನೊರೆಯಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಬೆಳ್ಳಂದೂರು ಕೆರೆಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನದಂತೆ ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿ ಮಾಡಿ, ಸುಸ್ಥಿತಿಯಲ್ಲಿಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚುವರಿಯಾಗಿ ಅಗತ್ಯವಾದ 79.67ಕೋಟಿ ರೂ. ಪೈಕಿ ಶೇ.25 ರಷ್ಟು ಮೊತ್ತ ಒದಗಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೆರೆ ಪುನಶ್ಚೇತನ ಶುಲ್ಕ ಒಳಗೊಂಡಂತೆ ಇತರೆ ಸ್ವಂತ ಆರ್ಥಿಕ ಸಂಪನ್ಮೂಲಗಳಿಂದ ಭರಿಸಲು ಸೂಚಿಸಿ, ಶೇ.25 ರಷ್ಟು ಅನುದಾನವನ್ನು ಸರ್ಕಾರ ಮಂಜೂರು ಮಾಡಲು ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಬೆಳ್ಳಂದೂರು ಕೆರೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ ಹಣ ಅವಶ್ಯಕತೆಯಿದ್ದಲ್ಲಿ ಪ್ರತ್ಯೇಕವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಡಿಎಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ ಸೂಚಿಸಿತ್ತು. ಬೆಳ್ಳಂದೂರು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ 79.67 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸುವ ಅವಶ್ಯಕತೆಯಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬೆಳ್ಳಂದೂರು ಕೆರೆ ಇತಿಹಾಸ
ಬೆಳ್ಳಂದೂರು ಕೆರೆಯು ದಕ್ಷಿಣ ಪಿನಾಕಿನಿ ಜಾಲದಲ್ಲಿದ್ದು, 1980ರ ದಶಕದ ಆರಂಭದಿಂದ ನಗರೀಕರಣಕ್ಕೆ ಸಿಲುಕಿ ಹಾಳಾಗಿದೆ. ಕೆರೆಯು 3.6 ಕಿ.ಮೀ. ಉದ್ದ ಹಾಗೂ 1.6 ಕಿ.ಮೀ. ಅಗಲ ಹೊಂದಿದ್ದು 900ಎಕರೆ ವಿಸ್ತೀರ್ಣ ಒಳಗೊಂಡಿದೆ.
ಕೆರೆಯ ಸುತ್ತಮುತ್ತಲಿನ ಬಡಾವಣೆಗಳ ಚರಂಡಿ ನೀರು, ತ್ಯಾಜ್ಯ ಹಾಗೂ ಕೈಗಾರಿಕೆಗಳ ರಾಸಯನಿಕಯುಕ್ತ ನೀರಿನಿಂದಾಗಿ ಕೆರೆಯಲ್ಲಿ ಹೆಚ್ಚು ನೊರೆ ಉತ್ಪಾದನೆಯಾಗಲು ಪ್ರಾರಂಭವಾಯಿತು. ಕೊಳಚೆ ನೀರನ್ನು ಕೆರೆಗೆ ಬಿಡದಂತೆ ಹೈಕೋರ್ಟ್ 1999ರಲ್ಲಿ ಸೂಚನೆ ನೀಡಿದ್ದರೂ ಪಾಲನೆ ಆಗಿರಲಿಲ್ಲ.
ಕೆರೆಯಲ್ಲಿ ಹೂಳು ಹಾಗೂ ಕಲುಷಿತ ನೀರು ಹೆಚ್ಚಾದ ಕಾರಣ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಪ್ರವೇಶಿಸಿ ಚರಂಡಿಯ ಕಲುಷಿತ ನೀರು ಕೆರೆಗೆ ಬಿಡದಂತೆ ಪ್ರತ್ಯೇಕ ಕಾಲುವೆ ನಿರ್ಮಾಣ ಮಾಡಬೇಕು. ಹೂಳೆತ್ತಬೇಕು ಹಾಗೂ ಬಫರ್ ವಲಯ ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಕೆರೆಯ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನೂ ರಚಿಸಲಾಗಿತ್ತು.