
ಬಂತು 2026ರ ರಜೆ ಲಿಸ್ಟ್! ಯಾವೆಲ್ಲಾ ಹಬ್ಬಗಳಿಗೆ ಈ ಬಾರಿ ರಜೆ ಇಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಚಿವ ಸಂಪುಟ ಸಭೆಯಲ್ಲಿ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ. 20 ದಿನಗಳ ಸಾರ್ವತ್ರಿಕ ರಜೆ ಹಾಗೂ 21 ಪರಿಮಿತ ರಜಾ ಪಟ್ಟಿಗೆ ಮಂಜೂರಾತಿ ನೀಡಲಾಗಿದೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 20 ದಿನಗಳ ಸಾರ್ವತ್ರಿಕ ರಜೆ ಹಾಗೂ 21 ಪರಿಮಿತ ರಜಾ ಪಟ್ಟಿಗೆ ಮಂಜೂರಾತಿ ನೀಡಲಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ನಮೂದಿಸಿಲ್ಲ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬಾರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು. 03.09.2026 (ಗುರುವಾರ) ಕ್ರೈಲ್ ಮೂಹೂರ್ತ, 8.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ 26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
21 ಪರಿಮಿತ ರಜಾದಿನ:
2026 ಸಾಲಿನಲ್ಲಿ 21 ಪರಿಮಿತ ರಜಾ ಪಟ್ಟಿಗೆ ಸಂಪುಟ ಸಭೆ ಮಂಜೂರಾತಿ ನೀಡಿದೆ. ಈ ರಜಾ ಪಟ್ಟಿಯಲ್ಲಿ ತುಲಾ ಸಂಕ್ರಮಣ (18.10.2026) ಭಾನುವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ. 14.04.2026ರ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯಂದು ಬರುವ ಸೌರಮಾನ ಯುಗಾದಿ. ದಿನಾಂಕ:01.05.2026ರ ಶುಕ್ರವಾರ ಕಾರ್ಮಿಕ ದಿನಾಚರಣೆಯ ಸಾರ್ವತ್ರಿಕ ರಜೆಯಂದು ಬರುವ ಬುದ್ಧ ಪೂರ್ಣಿಮ. 26.08.2026ರ ಬುಧವಾರ ಈದ್-ಮಿಲಾದ್ ಸಾರ್ವತ್ರಿಕ ರಜೆಯಂದು ಬರುವ ತಿರುಓಣಂ. 14.09.2026ರ ಸೋಮವಾರ ವರಸಿದ್ಧಿ ವಿನಾಯಕ ವ್ರತ ಸಾರ್ವತ್ರಿಕ ರಜೆಯಂದು ಬರುವ ಸ್ವರ್ಣಗೌರಿ ವ್ರತ ಪರಿಮಿತ ರಜಾ ಪಟ್ಟಿಯಲ್ಲಿ ನಮೂದಾಗಿಲ್ಲ.

