
ಯಲಹಂಕದಲ್ಲಿ ಹೈಟೆಕ್ ಟೌನ್‌ಶಿಪ್, ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ರಸ್ತೆಗೆ ಸಂಪುಟ ಅಸ್ತು
ಯಲಹಂಕ ತಾಲೂಕಿನ ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಂಡಿರುವ 43 ಎಕರೆ ಜಮೀನಿನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ (50:50 ಅನುಪಾತದಲ್ಲಿ) ಈ ಹೈಟೆಕ್ ಟೌನ್‌ಶಿಪ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಉತ್ತರ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಯಲಹಂಕ ತಾಲೂಕಿನಲ್ಲಿ 2930 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಹೈಟೆಕ್ ಟೌನ್‌ಶಿಪ್ ನಿರ್ಮಾಣ ಹಾಗೂ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ದೊರೆತಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಯಲಹಂಕ ತಾಲೂಕಿನ ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ಸ್ವಾಧೀನಪಡಿಸಿಕೊಂಡಿರುವ 43 ಎಕರೆ ಜಮೀನಿನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ (50:50 ಅನುಪಾತದಲ್ಲಿ) ಈ ಹೈಟೆಕ್ ಟೌನ್‌ಶಿಪ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ, ನಮ್ಮ ಮೆಟ್ರೋ ಹಂತ-3ರ ಎರಡು ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗಿನ ಒಟ್ಟು 37.12 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೆಟ್ರೋ ಮಾರ್ಗದ ಜೊತೆಗೆ ಎಲಿವೇಟೆಡ್ ರಸ್ತೆಯನ್ನೂ ನಿರ್ಮಿಸಲಾಗುವುದು. ಈ ಯೋಜನೆಗೆ 9,700 ಕೋಟಿ ರೂ. ಅಂದಾಜು ವೆಚ್ಚವಾಗಲಿದ್ದು, ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಒದಗಿಸಿದ ಅನುದಾನದ ಮೂಲಕ ವೆಚ್ಚವನ್ನು ಭರಿಸಲಿದೆ.
ಇದಲ್ಲದೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಗರದಲ್ಲಿ ಹೊಸದಾಗಿ ಆರು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮತ್ತು ಅವುಗಳ ಏಳು ವರ್ಷಗಳ ನಿರ್ವಹಣೆಗೆ 956.67 ಕೋಟಿ ರೂ. ಮೊತ್ತದ ಯೋಜನೆಗೂ ಅನುಮೋದನೆ ನೀಡಲಾಗಿದೆ. ಹಾಗೆಯೇ, ಕೆಂಗೇರಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು 28.88 ಕೋಟಿ ರೂ,ಗಳ ಯೋಜನೆಗೂ ಒಪ್ಪಿಗೆ ಸೂಚಿಸಲಾಗಿದೆ. ಈ ಯೋಜನೆಗಳು ಬೆಂಗಳೂರಿನ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.