C T Ravi Case | ಸಚಿವೆಗೆ ನಿಂದನೆ ಪ್ರಕರಣ: ರಾಜಭವನದ ಕದ ತಟ್ಟಿದ ಬಿಜೆಪಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಪರ ದೃಢವಾಗಿ ನಿಂತಿರುವ ರಾಜ್ಯ ಬಿಜೆಪಿ, ಪ್ರಕರಣವನ್ನು ಇದೀಗ ರಾಜಭವನಕ್ಕೆ ಕೊಂಡೊಯ್ದಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಪರ ದೃಢವಾಗಿ ನಿಂತಿರುವ ರಾಜ್ಯ ಬಿಜೆಪಿ, ಪ್ರಕರಣವನ್ನು ಇದೀಗ ರಾಜಭವನಕ್ಕೆ ಕೊಂಡೊಯ್ದಿದೆ.
ಪ್ರಕರಣದಲ್ಲಿ ಸಿ ಟಿ ರವಿ ಅವರನ್ನು ಬಂಧಿಸಿದ ಮತ್ತು ಬಂಧನದ ಬಳಿಕ ಅವರನ್ನು ನಡೆಸಿಕೊಂಡ ರೀತಿಯನ್ನು ಪ್ರಶ್ನಿಸಿ ಬಿಜೆಪಿ ರಾಜ್ಯ ಘಟಕ ಮಂಗಳವಾರ ರಾಜಪಾಲರಿಗೆ ದೂರು ನೀಡಿದೆ.
ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸರ್ಕಾರದ ವಿರುದ್ಧ ದೂರು ನೀಡಿದೆ.
ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸುವ ಮೂಲಕ ಒಂದು ಕಡೆ ಪ್ರಕರಣವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ನೀಡುತ್ತಿದ್ದಂತೆ ಅತ್ತ ಬಿಜೆಪಿ ಕೂಡ ಪಟ್ಟು ಬಿಗಿಗೊಳಿಸಿದ್ದು, ಮಂಗಳವಾರ ಬೆಳಿಗ್ಗೆ ಸ್ವತಃ ಸಿ ಟಿ ರವಿ ಅವರು ವಿಧಾನ ಪರಿಷತ್ ಸಭಾಪತಿ, ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರು. ಅದಾದ ಬೆನ್ನಲ್ಲೇ ಪಕ್ಷದ ವತಿಯಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಪ್ರಕರಣದಲ್ಲಿ ಸಾಂವಿಧಾನಿಕ ಮತ್ತು ಕಾನೂನು ನಿಯಮಗಳ ಉಲ್ಲಂಘನೆಯಾಗಿದೆ. ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ದಬ್ಭಾಳಿಕೆ ಮಾಡಿದೆ. ರವಿ ಅವರ ಬಂಧನದ ವಿಷಯದಲ್ಲಿ ಸರ್ಕಾರದ ನಡೆ ಖಂಡನೀಯ. ಅಧಿಕಾರ ದುರುಪಯೋಗಪಡಿಸಿಕೊಂಡು ಕಾನೂನು ಮೀರಿ ನಡೆಸಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಪ್ರಕರಣದಲ್ಲಿ ರವಿ ಅವರ ಬಂಧನದ ಕುರಿತು ಸತ್ಯಶೋಧನೆ ನಡೆಸಬೇಕು ಎಂದು ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ಕೋರಲಾಗಿದೆ.
ಆರ್ ಅಶೋಕ್ ಅವರೊಂದಿಗೆ ನಿಯೋಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯರಾದ ಕೇಶವ ಪ್ರಸಾದ್, ರವಿಕುಮಾರ್, ಶಾಸಕರಾದ ಸಿ ಕೆ ರಾಮಮೂರ್ತಿ, ಗಾಲಿ ಜನಾರ್ಧನ ರೆಡ್ಡಿ ಇದ್ದರು.
ಏನಿದು ಪ್ರಕರಣ?
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಗುರುವಾರ (ಡಿ.19) ರಂದು ವಿಧಾನ ಪರಿಷತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆ ಸಂಬಂಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತು ಅವಹೇಳನಕಾರಿ ಪದಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ರವಿ ಹೊರಬಂದಿದ್ದರು.
ಈ ಪ್ರಕರಣವನ್ನು ಇಲ್ಲಿಗೆ ಮುಗಿಸುವ ಪ್ರಶ್ನೆಯೇ ಇಲ್ಲ ಎಂದಿರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ ರವಿಗೆ ಸರಿಯಾದ ಶಿಕ್ಷೆಯಾಗುವವರೆಗೆ ತಾವು ಕಾನೂನು ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದಾರೆ ಎನ್ನಲಾಗಿರುವ ಎರಡು ವಿಡಿಯೋಗಳನ್ನು ಸೋಮವಾರ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಪತ್ರ ಬರೆಯುವುದಾಗಿಯೂ ಘೋಷಿಸಿದ್ದಾರೆ.