ಶಿಕ್ಷಣ ಸಚಿವರಿಗೇ ಗ್ರೇಸ್‌ ಮಾರ್ಕ್ಸ್‌ ಕೊಟ್ಟ ಹಾಗಿದೆ: ಮಧು ಬಂಗಾರಪ್ಪ ವಿರುದ್ಧ ಸಿ ಟಿ ರವಿ ವ್ಯಂಗ್ಯ
x

ಶಿಕ್ಷಣ ಸಚಿವರಿಗೇ ಗ್ರೇಸ್‌ ಮಾರ್ಕ್ಸ್‌ ಕೊಟ್ಟ ಹಾಗಿದೆ: ಮಧು ಬಂಗಾರಪ್ಪ ವಿರುದ್ಧ ಸಿ ಟಿ ರವಿ ವ್ಯಂಗ್ಯ


ಶಿಕ್ಷಣ ಇಲಾಖೆ ವಿಷಯದಲ್ಲಿ ಸರ್ಕಾರದ ತುಘಲಕ್‌ ನೀತಿಯ ಕಾರಣದಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಕನ್ನಡವೇ ಗೊತ್ತಿಲ್ಲದವರಿಗೆ ಶಿಕ್ಷಣ ಖಾತೆ ಹೊಣೆ ವಹಿಸಿರುವುದು ಇದಕ್ಕೆ ಕಾರಣ. ಮುಖ್ಯಮಂತ್ರಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೇ ಗ್ರೇಸ್‌ ಮಾರ್ಕ್ಸ್‌ ಕೊಟ್ಟಂತಿದೆ ಎಂದು ಬಿಜೆಪಿ ನಾಯಕ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತು ಶಿಕ್ಷಣ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್‌ಎಸ್‌ಎಲ್‌ ಸಿ ಗ್ರೇಸ್‌ ಅಂಕ ಕೊಟ್ಟು ಅವಾಂತರ ಸೃಷ್ಟಿಸಲಾಗಿದೆ. ಪಾಸೇ ಆಗದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದರಿಂದ ಬಹುಶಃ ಅವರಿಗೆ ಯಾರನ್ನೂ ಫೇಲ್‌ ಮಾಡಲೇಬಾರದು ಎಂಬ ನಿರೀಕ್ಷೆ ಇರಬಹುದೇನೋ. ಆದರೆ, ಗ್ರೇಸ್‌ ಅಂಕದಂತಹ ಗಂಭೀರ ವಿಷಯದಲ್ಲಿಯೂ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆ ಬಗ್ಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಇದು ಆಡಳಿತದ ಮೇಲೆ ಮುಖ್ಯಮಂತ್ರಿಗಳಿಗೆ ಎಷ್ಟರಮಟ್ಟಿಗೆ ಹಿಡಿತವಿದೆ ಎಂಬುದಕ್ಕೆ ಸಾಕ್ಷಿ ಎಂದೂ ಅವರು ಟೀಕಿಸಿದ್ದಾರೆ.

ತಮಗೆ ಕನ್ನಡ ಓದಲು ಬರುವುದಿಲ್ಲ ಎಂದು ಶಿಕ್ಷಣ ಸಚಿವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಕನ್ನಡ ಆಡಳಿತ ಭಾಷೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಕನ್ನಡ ಆಡಳಿತ ಭಾಷೆಯಾಗಿರುವ ಸರ್ಕಾರದ ಸಚಿವರೇ ಕನ್ನಡವನ್ನು ಓದಲು ನನಗೆ ಬರುವುದಿಲ್ಲ ಎಂಬುದು ಗಂಭೀರ ವಿಷಯ. ಅದಕ್ಕಿಂತ ಗಂಭೀರ ಸಂಗತಿ ಸ್ವತಃ ಶಿಕ್ಷಣ ಸಚಿವರಾಗಿ ಅವರು ಅಂತಹ ಹೇಳಿಕೆ ನೀಡಿರುವುದು ದುರಂತ. ನಾವು ಕನ್ನಡಿಗರು ಬಹಳ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಇದು. ಬಹುಶಃ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರಿಗೂ ಗ್ರೇಸ್‌ ಅಂಕ ಕೊಟ್ಟ ಹಾಗಿದೆ. ಆ ಗ್ರೇಸ್‌ ಮಾರ್ಕ್ಸ್‌ ಮೇಲೆಯೇ ಅವರನ್ನು ಸಚಿವರನ್ನಾಗಿ ಮಾಡಿದಂತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ, ಕನ್ನಡಿಗರಾಗಿ, ಕನ್ನಡ ಕಲಿತು ನನಗೆ ಕನ್ನಡ ಓದಲು ಬರಲ್ಲ ಎಂಬುದು ಎಷ್ಟರಮಟ್ಟಿಗೆ ಸರಿ? ಎಲ್ಲಾ ಕೇರಳದಿಂದಲೋ, ತಮಿಳುನಾಡಿನಿಂದಲೋ ಬಂದು ಇಲ್ಲಿ ಕನ್ನಡ ಕಲಿತಿದ್ದರೆ, ಪರವಾಗಿಲ್ಲ ಇಷ್ಟಾದರೂ ಮಾತನಾಡಲು ಬರುತ್ತದೆ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಆದರೆ, ನೀವು ಇಲ್ಲೇ ಹುಟ್ಟಿ ಬೆಳೆದವರು, ಅದರಲ್ಲೂ ಮಲೆನಾಡಿನ ಶಿವಮೊಗ್ಗದವರು, ಜೊತೆಗೆ ಬಂಗಾರಪ್ಪ ಅವರ ಸುಪುತ್ರರು. ನೀವು ಕನ್ನಡ ಬರೋದಿಲ್ಲ ಎಂದು ಹೇಳುವುದು ಯಾರಿಗೆ ಗೌರವ ಕೊಡುವ ಸಂಗತಿ? ಹಾಗಾಗಿ ಕನ್ನಡ ಬರುವ ಮತ್ತು ಶಿಕ್ಷಣದ ಭಾಷೆ ಅರ್ಥವಾಗುವವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ, ಕನ್ನಡ ಬರದವರನ್ನು ಬೇಕಾದರೆ ನೀವು ಅಬಕಾರಿ ಖಾತೆಗೆ ಹಾಕಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

Read More
Next Story