B.Y. Vijayendra - Ramesh Jarkiholi face-off Emphasis on calming differences?
x

ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ರೆಬಲ್‌ ನಾಯಕನ ಕೈಕುಲುಕಿ 'ಏನಣ್ಣಾ ಚೆನ್ನಾಗಿದ್ದೀರಾ?' ಎಂದ ವಿಜಯೇಂದ್ರ!

ರಾಜ್ಯ ಬಿಜೆಪಿಯಲ್ಲಿ ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ರಮೇಶ್‌ ಜಾರಕಿಹೊಳಿ, ಪ್ರತಾಪ್‌ ಸಿಂಹ ಸೇರಿದಂತೆ ಹಲವು ನಾಯಕರು ಅನೇಕ ಬಾರಿ ಸಭೆಗಳನ್ನು ನಡೆಸಿ ರಾಜ್ಯಾಧ್ಯಕ್ಷರ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.


Click the Play button to hear this message in audio format

ಇಲ್ಲಿನ ಸುವರ್ಣಸೌಧದಲ್ಲಿ ಸೋಮವಾರದಿಂದ (ಡಿ.8) ಆರಂಭಗೊಂಡಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸುವ ಘಟನೆಯೊಂದು ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಅವರ ವಿರುದ್ಧವೇ ಬಹಿರಂಗ ಸಮರ ಸಾರಿದ್ದ 'ರೆಬಲ್‌' ನಾಯಕ ರಮೇಶ್‌ ಜಾರಕಿಹೊಳಿ ಮುಖಾಮುಖಿಯಾಗಿದ್ದು, ಈ ಸಂದರ್ಭದಲ್ಲಿ ನಡೆದ ವಿದ್ಯಮಾನಗಳು ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿ.ವೈ. ವಿಜಯೇಂದ್ರ ಅವರು ಸುವರ್ಣಸೌಧದಲ್ಲಿರುವ ವಿರೋಧ ಪಕ್ಷದ ನಾಯಕರ ಕಚೇರಿಗೆ ಆಗಮಿಸಿದರು. ಈ ವೇಳೆಗಾಗಲೇ ಕಚೇರಿಯಲ್ಲಿ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಹಾಗೂ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಕುಳಿತು ಮಾತುಕತೆ ನಡೆಸುತ್ತಿದ್ದರು. ಒಳಬರುತ್ತಿದ್ದಂತೆಯೇ ರಮೇಶ್‌ ಜಾರಕಿಹೊಳಿ ಅವರನ್ನು ಕಂಡ ವಿಜಯೇಂದ್ರ, ತಾವೇ ಮುಂದಾಗಿ ಅವರ ಬಳಿ ತೆರಳಿ ಕೈಕುಲುಕಿದರು. ಅಷ್ಟೇ ಅಲ್ಲದೇ, "ಏನಣ್ಣಾ ಚೆನ್ನಾಗಿದ್ದೀರಾ?" ಎಂದು ನಗುಮುಖದಿಂದಲೇ ಕುಶಲೋಪರಿ ವಿಚಾರಿಸಿದರು. ರಾಜಕೀಯ ವೈಮನಸ್ಸನ್ನು ಬದಿಗಿಟ್ಟು ವಿಜಯೇಂದ್ರ ಅವರು ತೋರಿದ ಈ ಸೌಹಾರದ ನಡೆಗೆ ಜಾರಕಿಹೊಳಿ ಕೂಡ ಸಕಾರಾತ್ಮಕವಾಗಿಯೇ ಸ್ಪಂದಿಸಿದರು.

ಭಿನ್ನಮತ ಶಮನಕ್ಕೆ 'ದೋಸ್ತಿ' ಅಸ್ತ್ರವೇ?

ಕಳೆದ ಕೆಲ ತಿಂಗಳುಗಳಿಂದ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಂಡಾಯದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಸ್ವತಃ ವಿಜಯೇಂದ್ರ ಅವರೇ ಭಿನ್ನಮತೀಯ ನಾಯಕನ ಬಳಿ ತೆರಳಿ ಮಾತನಾಡಿಸಿರುವುದು, ಪಕ್ಷದೊಳಗಿನ ಆಂತರಿಕ ಕಲಹವನ್ನು ಶಮನಗೊಳಿಸುವ ತಂತ್ರಗಾರಿಕೆಯ ಭಾಗವೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಪಕ್ಷದ ಹಿತದೃಷ್ಟಿಯಿಂದ ಹೊಂದಾಣಿಕೆಯ ರಾಜಕಾರಣಕ್ಕೆ ರಾಜ್ಯಾಧ್ಯಕ್ಷರು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.

ಜಾರಕಿಹೊಳಿ ನೇತೃತ್ವದ ಬಂಡಾಯದ ಹಿನ್ನೆಲೆ

ಬಿ.ವೈ. ವಿಜಯೇಂದ್ರ ಅವರನ್ನು ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ದಿನದಿಂದಲೂ ಪಕ್ಷದೊಳಗೆ ಒಂದು ಪ್ರಬಲ ಬಣ ಅವರ ವಿರುದ್ಧ ತಿರುಗಿಬಿದ್ದಿದೆ. ಪ್ರಮುಖವಾಗಿ ರಮೇಶ್‌ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ ಹಾಗೂ ಪ್ರತಾಪ್‌ ಸಿಂಹ ಸೇರಿದಂತೆ ಹಲವು ಹಿರಿಯ ನಾಯಕರು ಅನೇಕ ಬಾರಿ ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲದೆ, ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಹೈಕಮಾಂಡ್‌ ನಾಯಕರಿಗೂ ದೂರು ನೀಡಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು.

ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಸಾಹುಕಾರ್‌

ಈ ಹಿಂದೆ ವಿಜಯೇಂದ್ರ ವಿರುದ್ಧ ರಮೇಶ್‌ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. "ವಿಜಯೇಂದ್ರನನ್ನು ಬಿಜೆಪಿ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ" ಎಂದು ಏಕವಚನದಲ್ಲಿಯೇ ಟೀಕಿಸಿದ್ದರು. ಅಲ್ಲದೆ, "ನಮ್ಮ ಭಿನ್ನಾಭಿಪ್ರಾಯ ಇರುವುದು ಕೇವಲ ಅಧ್ಯಕ್ಷರ ವಿಚಾರದಲ್ಲಿ ಮಾತ್ರ. ಇಂದಿಗೂ ಬಿ.ಎಸ್‌. ಯಡಿಯೂರಪ್ಪನವರೇ ನಮ್ಮ ನಾಯಕರು. ಆದರೆ ಅಧ್ಯಕ್ಷರ ಬದಲಾವಣೆ ಆದರೆ ಪಕ್ಷಕ್ಕೆ ಒಳ್ಳೆಯದು" ಎಂದು ಹೇಳಿಕೆ ನೀಡಿದ್ದರು. ಇಂತಹ ತೀಕ್ಷ್ಣ ಮಾತುಗಳ ನಂತರ ಇದೀಗ ಸುವರ್ಣಸೌಧದಲ್ಲಿ ಇಬ್ಬರೂ ನಾಯಕರು ನಗುಮುಖದಿಂದ ಮುಖಾಮುಖಿಯಾಗಿರುವುದು ಬಂಡಾಯದ ಕಾವು ತಣ್ಣಗಾಗುವ ಮುನ್ಸೂಚನೆಯೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story