
ಬಿಜೆಪಿ ರಾಜ್ಯಾಧ್ಯಕ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಯತ್ನಾಳ್
ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ತಾಳ್ಮೆಗೂ ಮಿತಿಯಿದೆ ಎಂದ ಬಿ.ವೈ. ವಿಜಯೇಂದ್ರ
ಯತೀಂದ್ರ ಅವರು ಹೈಕಮಾಂಡ್ ರೀತಿಯಲ್ಲಿ ವರ್ತಿಸುತ್ತಾ ಸಿಎಂ ಸ್ಥಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿಯಾಗಿ ಮಾತನಾಡುವಾಗ ಕಾಂಗ್ರೆಸ್ ಶಾಸಕರೇ ಅವರನ್ನು 'ಪಕ್ಷದ ಹೈಕಮಾಂಡ್' ಎಂದು ಕಾಲೆಳೆಯುತ್ತಾರೆ ಎಂದು ತಿಳಿಸಿದರು.
ತಮ್ಮ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ 1 ರೂಪಾಯಿ ಅಥವಾ 1 ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿರುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಅವರ ಇತ್ತೀಚಿನ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಮತ್ತು ನಾನು ಉಪಮುಖ್ಯಮಂತ್ರಿಯಾಗಲು ಯೋಜಿಸಲಾಗಿದ್ದು, ಡಿಕೆಶಿಯವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ನಾನೇ ಕರೆದುಕೊಂಡು ಹೋಗಿ ಚರ್ಚಿಸಿದ್ದೇನೆ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರುವುದಿಲ್ಲ. ನನ್ನ ತಾಳ್ಮೆಗೂ ಒಂದು ಮಿತಿಯಿದೆ," ಎಂದು ಅವರು ಎಚ್ಚರಿಕೆ ನೀಡಿದರು.
ಡ್ರಗ್ಸ್ ಹಾವಳಿ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯೇಂದ್ರ, "ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಹಾವಳಿ ಮಿತಿಮೀರಿದೆ. ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಜಾಲದ ಹಿಂದಿರುವ ಪ್ರಭಾವಿ ಶಕ್ತಿಗಳನ್ನು ಮಟ್ಟಹಾಕಬೇಕು," ಎಂದು ಒತ್ತಾಯಿಸಿದರು.
ಯತೀಂದ್ರ ವಿರುದ್ಧ ವ್ಯಂಗ್ಯ
ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲದ ಬಗ್ಗೆ ಮಾತನಾಡಿದ ಅವರು, ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ವ್ಯಂಗ್ಯವಾಡಿದರು. "ರಾಜ್ಯದಲ್ಲಿ ಅಭಿವೃದ್ಧಿ ಮರೆತು ಕುರ್ಚಿ ಕಿತ್ತಾಟ ನಡೆಯುತ್ತಿದೆ. ಯತೀಂದ್ರ ಅವರು ಹೈಕಮಾಂಡ್ ರೀತಿಯಲ್ಲಿ ವರ್ತಿಸುತ್ತಾ ಸಿಎಂ ಸ್ಥಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖಾಸಗಿಯಾಗಿ ಮಾತನಾಡುವಾಗ ಕಾಂಗ್ರೆಸ್ ಶಾಸಕರೇ ಅವರನ್ನು 'ಪಕ್ಷದ ಹೈಕಮಾಂಡ್' ಎಂದು ಕಾಲೆಳೆಯುತ್ತಾರೆ," ಎಂದು ವಿಜಯೇಂದ್ರ ಕುಟುಕಿದರು.

