
ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಇತಿಶ್ರೀ ಹಾಡಲು ಧರ್ಮ ಜಾಗೃತಿ ಸಮಾವೇಶ: ಬಿ.ವೈ. ವಿಜಯೇಂದ್ರ
ವಿಜಯೇಂದ್ರ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಎಸ್. ಆರ್. ವಿಶ್ವನಾಥ್, ಹರೀಶ್ ಪೂಂಜಾ ಮತ್ತಿರರು ಪಾಲ್ಗೊಂಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಅಂತ್ಯ ಹಾಡುವ ಉದ್ದೇಶದಿಂದ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಸೋಮವಾರ 'ಧರ್ಮಸ್ಥಳ ಚಲೋ' ಹಾಗೂ 'ಧರ್ಮ ಜಾಗೃತಿ ಸಮಾವೇಶ'ವನ್ನು ಆಯೋಜಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಗೆ ವಹಿಸಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಸೋಮವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ನಂತರ ಮಾತನಾಡಿದ ವಿಜಯೇಂದ್ರ, "ಕಳೆದ ಕೆಲವು ದಿನಗಳಿಂದ ಕ್ಷೇತ್ರದ ವಿರುದ್ಧ ನಿರಂತರ ಅಪಪ್ರಚಾರ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದ ಮಂಜುನಾಥನ ಭಕ್ತರು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳ ಸಂಹಾರವಾಗಬೇಕು ಎಂಬುದು ಭಕ್ತರ ಅಪೇಕ್ಷೆಯಾಗಿದ್ದು, ಇದಕ್ಕೆ ಇತಿಶ್ರೀ ಹಾಡಲು ಈ ಧರ್ಮ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದರು.
ಈ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು. ಸಮಾವೇಶಕ್ಕೂ ಮೊದಲು, ವಿಜಯೇಂದ್ರ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಎಸ್. ಆರ್. ವಿಶ್ವನಾಥ್, ಹರೀಶ್ ಪೂಂಜಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಸೇರಿದಂತೆ ಹಲವು ಶಾಸಕರು, ಮಾಜಿ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದರು.