
ರಸ್ತೆಗಳಲ್ಲಿ ಕಸ ಗುಡಿಸುವ ಯಂತ್ರಗಳು
ಕಸ ಗುಡಿಸುವ ಯಂತ್ರ ಖರೀದಿ: ಬಾಡಿಗೆ ಬದಲು ಸ್ವಂತಕ್ಕೆ ಖರೀದಿಸಲು ಬಿಜೆಪಿ ಮುಖಂಡ ಆಗ್ರಹ
ಫೆ.17ರಂದು ಬರೆದ ಪತ್ರದಲ್ಲಿ ವಿಶ್ವದ ಅತ್ಯುತ್ತಮ ಕಸಗುಡಿಸುವ ಯಂತ್ರಗಳನ್ನು ತಯಾರಿಸುವ ʼಡುಲೆವೊʼ ಮತ್ತು ʼಚಾಲೆಂಜರ್ʼ ಕಸ ಗುಡಿಸುವ ವಾಹನಗಳ ಅಂದಾಜು ಪಟ್ಟಿಯ ವಿವರಗಳನ್ನು ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ ನೀಡುವ ಪ್ರಸ್ತಾವಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ದುಬಾರಿ ಬಾಡಿಗೆ ನೀಡುವ ಬದಲು ಇದೇ ಹಣದಲ್ಲಿ ಸ್ವಂತ ವಾಹನಗಳನ್ನು ಖರೀದಿಸಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ 59 ಕಸ ಗುಡಿಸುವ ಯಂತ್ರಗಳ ನಿರ್ವಹಣೆಗೆಂದು ಏಳು ವರ್ಷಗಳ ಅವಧಿಗೆ 613 ಕೋಟಿ ರೂ. ವೆಚ್ಚ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಅನವಶ್ಯಕ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಫೆ.17ರಂದೇ ದಾಖಲೆಗಳ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದು, ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುವ ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದೆ ಎಂದು ಹೇಳಿದ್ದಾರೆ.
ವಿಶ್ವದ ಅತ್ಯುತ್ತಮ ಕಸ ಗುಡಿಸುವ ಯಂತ್ರಗಳನ್ನು ತಯಾರಿಸುವ ʼಡುಲೆವೊʼ ಕಸ ಗುಡಿಸುವ ಯಂತ್ರಗಳು ಮತ್ತು ʼಚಾಲೆಂಜರ್ʼ ಕಸ ಗುಡಿಸುವ ವಾಹನಗಳ ಅಂದಾಜು ಪಟ್ಟಿಯ ವಿವರಗಳನ್ನು ಈ ಹಿಂದೆಯೇ ನೀಡಲಾಗಿದೆ. ಜಿಬಿಎ ಸಾರ್ವಜನಿಕ ತೆರಿಗೆ ಹಣವನ್ನು ಬೃಹತ್ ಪ್ರಮಾಣದಲ್ಲಿ ದುರ್ಬಳಕೆ ಮಾಡಲು ಹೊರಟಿದೆ. ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆ ಬದಲು ಅದೇ ಮೊತ್ತಕ್ಕೆ ಸ್ವಂತಕ್ಕೆ ಖರೀದಿಸಬಹುದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

