
ಸಂಸದ ಬಸವರಾಜ ಬೊಮ್ಮಾಯಿ
ಪ್ರತಿ ರೈತರಿಂದ ನೂರು ಕ್ವಿಂಟಲ್ ಜೋಳ ಖರೀದಿಸಲು ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
ಒಬ್ಬ ರೈತರಿಂದ ಕೇವಲ 20 ಕ್ವಿಂಟಲ್ ತೆಗೆದುಕೊಳ್ಳುತ್ತೇವೆ ಎನ್ನುವುದು ಮೂಗಿಗೆ ತುಪ್ಪ ಹಚ್ಚುವ ಕೆಲಸ. ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಪ್ರತಿಯೊಬ್ಬ ರೈತರಿಂದ ಕನಿಷ್ಠ ನೂರು ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಬೇಕು. ರಾಜ್ಯ ಸರ್ಕಾರ ಹೆಚ್ಚವರಿ ಎಂಎಸ್‌ಪಿ ದರ ನೀಡಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಭಾನುವಾರ(ಡಿ.7) ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಇಪ್ಪತ್ತು ಕ್ವಿಂಟಲ್ ಜೋಳ ಖರೀದಿಸುವುದಾಗಿ ಹೇಳಿ ರೈತರ ಮೂಗಿಗೆ ತುಪ್ಪ ಸವರುತ್ತಿದೆ. ರೈತರು ಈ ವರ್ಷ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಪ್ರತಿ ರೈತರಿಂದ ಕನಿಷ್ಠ ನೂರು ಕ್ವಿಂಟಲ್ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ 25 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಿ
ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದು, ಅದರಲ್ಲಿ ಕನಿಷ್ಠ 25 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಬೇಕು. ಪ್ರತಿಯೊಂದು ತಾಲೂಕಿನಲ್ಲಿಯೂ ಖರೀದಿ ಕೇಂದ್ರ ತೆಗೆಯಬೇಕು. ಕೇಂದ್ರಗಳೂ ಸರಿಯಾಗಿ ಆರಂಭವಾಗಿಲ್ಲ. ಹಾವೇರಿಯಲ್ಲಿ ಇನ್ನೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ರೈತರು ರೊಚ್ಚಿಗೆದ್ದು ರಸ್ತೆ ತಡೆ ಮಾಡುತ್ತಿದ್ದಾರೆ. ಈಗಲಾದರೂ ಸರ್ಕಾರ ಕಣ್ಣು ತೆರೆದು ಪ್ರತಿಯೊಬ್ಬ ರೈತರಿಂದ ಕನಿಷ್ಠ ನೂರು ಕ್ವಿಂಟಲ್ ಮೆಕ್ಕೆ ಜೋಳ ಖರೀದಿ ಮಾಡಬೇಕು. ಎಂಎಸ್‌ಪಿಗೆ ಹೆಚ್ಚುವರಿ ಬೆಲೆಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಸಮಸ್ಯೆಗಳು ಚರ್ಚೆಯಾಗಲಿ
ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗುತ್ತಿದೆ. ಸರ್ಕಾರ ಯಾವುದೇ ಮೂಲ ಸೌಕರ್ಯ ಒದಗಿಸುತ್ತಿಲ್ಲ. ರಸ್ತೆಗಳು ಹದಗೆಟ್ಟು ಹೋಗಿವೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಅಲ್ಲದೇ ಕಬ್ಬು ಮತ್ತು ಮೆಕ್ಕೆಜೋಳ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಇವೆಲ್ಲ ವಿಷಯವನ್ನು ಸಮಗ್ರವಾಗಿ ಚರ್ಚೆ ಮಾಡಿ ಸರ್ಕಾರ ಪರಿಹಾರ ಕೊಡಬೇಕು. ಬೆಳೆ ಹಾನಿ ಪರಿಹಾರದಲ್ಲೂ ದೊಡ್ಡ ಅನ್ಯಾಯವಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.

