
Attack on Bus-Conductor | ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಭುಗಿಲೆದ್ದ ಕನ್ನಡಿಗರ ಆಕ್ರೋಶ, ಠಾಣೆಗೆ ಮುತ್ತಿಗೆ
ಮಾರಿಹಾಳ ಇನ್‌ಸ್ಪೆಕ್ಟರ್ ಮೇಲಾಧಿಕಾರಿಗೆ ಮಾಹಿತಿ ನೀಡದೇ ಪೋಕ್ಸೋ ಪ್ರಕರಣ ದಾಖಲಿಸಿರುವುದು ಸಂಚಲನ ಮೂಡಿಸಿದೆ. ಜೊತೆಗೆ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿದೆ.
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಮರಾಠಿ ಭಾಷಿಕರು ಹಲ್ಲೆ ನಡೆಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕನ್ನಡಿಗ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ರಾಜ್ಯದ ಹಲವೆಡೆ ಪ್ರತಿಭಟನೆಗೆ ಇಳಿದಿದ್ದು, ಬೆಳಗಾವಿ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಶುಕ್ರವಾರ ರಾತ್ರಿಯೇ ಪೊಲೀಸರು ಮೂವರು ಆರೋಪಿಗಳು ಹಾಗೂ ಒಬ್ಬ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಬಂಧಿತರಾದ ಮಾರುತಿ ತುರುಮರಿ, ರಾಹುಲ್ ಹಾಗೂ ಬಾಳು ಗೋಜಗೇಕರ್ ಎಂಬುವರನ್ನು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಮಾರಿಹಾಳ ಪೊಲೀಸರು ಕಂಡಕ್ಟರ್ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಮಾರಿಹಾಳ ಇನ್‌ಸ್ಪೆಕ್ಟರ್ ತಮಗೆ ಮಾಹಿತಿ ನೀಡದೇ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ ಎಂದು ಇಲಾಖೆಯ ಮೇಲಾಧಿಕಾರಿಗಳು ಹೇಳಿದ್ದು, ಈ ಬೆಳವಣಿಗೆ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿದೆ.
ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ
ಪೋಕ್ಸೋ ಪ್ರಕರಣ ದಾಖಲಿಸಿರುವ ಕುರಿತಂತೆ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರು ಪ್ರತಿಕ್ರಿಯಿಸಿ, ‘‘ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ. ಆದರೆ, ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾನು ದೂರು ಕೊಟ್ಟ ಬಳಿಕ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ" ಎಂದು ದೂರಿದ್ದಾರೆ.
ಈ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿ, ಪೋಕ್ಸೋ ಕಾಯ್ದೆಯಡಿ ದೂರು ಬಂದಾಗ ನಾವು ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಲಿದೆ. ಹಾಗಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಠಾಣೆಗೆ ಹೋರಾಟಗಾರರ ಮುತ್ತಿಗೆ
ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ಹಾಗೂ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬೆಳಗಾವಿ-ಬಾಗಲಕೋಟೆ ಹೆದ್ದಾರಿ ತಡೆದು ಪ್ರತಿಭಟಿಸಿದರು. ಈ ವೇಳೆಯಲ್ಲಿ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ಕನ್ನಡ ಪರ ಹೋರಾಟಗಾರರು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪ್ರತಿಕೃತಿ ದಹಿಸಲು ಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು ಮಾರಿಹಾಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಹೋರಾಟಗಾರರು ಠಾಣೆ ಎದುರು ಜಮಾಯಿಸಿ, ಮಹಾದೇವ ಹುಕ್ಕೇರಿ ವಿರುದ್ಧ ದಾಖಲಿಸಿರುವ ಪೋಕ್ಸೋ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಕಾರ್ಯಕರ್ತೆ ಆಯೆಷಾ ಸನದಿ ಅವರು ಠಾಣೆಯ ಮುಂಭಾಗ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಥಣಿಯಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕನ್ನಡ ಪರ ಹೋರಾಟಗಾರರು ಕನ್ನಡದ ಬಾವುಟ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಕೂಡ ಕನ್ನಡಪರ ಸಂಘಟನೆಗಳು ಕೆಎಸ್‌ಆರ್‌ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸಿ ಹಲ್ಲೆಗೊಳಗಾದ ಬಸ್ ನಿರ್ವಾಹಕರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಹಿಂಪಡೆಯಬೇಕು ಮತ್ತು ಮರಾಠ ಸಂಘಟನೆಗಳು ಗೂಂಡಾಗಿರಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಡಿಪೋ ಎದುರು ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ರಾಜ್ಯದ ವಿವಿಧೆಡೆ ಬೆಳಗಾವಿ ಘಟನೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಚಾಲನೆ ನೀಡಿವೆ.
ಸುಳ್ಳು ಪೋಕ್ಸೋ ದೂರು ದಾಖಲು
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಪ್ರಕರಣದ ಮಾಹಿತಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಪಡೆದಿದ್ದೇನೆ. ಆರೋಪಿಗಳು ಬೇಕೆಂತಲೇ ನಿರ್ವಾಹಕನ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೋಕ್ಸೋ ದೂರಿಗೆ ಸಂಬಂಧಿಸಿದ ಯಾವುದೇ ಘಟನೆ ಅಲ್ಲಿ ನಡೆದಿಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ಈ ರೀತಿ ಆದಾಗ ಎಲ್ಲರೂ ಖಂಡಿಸಬೇಕು ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಹಲ್ಲೆ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯಾಂಶ ಬಯಲಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಘಟನೆಗೆ ಕಾರಣವಾದ ಬೆಳಗಾವಿ- ಸುಳೇಬಾವಿ ಬಸ್ ಅನ್ನು ಮಾರಿಹಾಳ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಚಾಲಕ ಕತಲಸಾಬ್ ಅತ್ತಾರ್ ಅವರು ಶನಿವಾರ ಸಾರಿಗೆ ಇಲಾಖೆಯ ಅನುಮತಿ ಪಡೆದು ಬಸ್ ತೆಗೆದುಕೊಂಡು ಹೋಗಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ದುರುದ್ದೇಶಪೂರಕವಾಗಿ ಪೋಕ್ಸೋ ದೂರು ದಾಖಲಿಸಿದ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರ ಸಾರಿಗೆ ಬಸ್ ಸಂಚಾರ ಸ್ಥಗಿತ
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.
ಕರ್ನಾಟಕದ ಹಲವು ಕಡೆ ಮಹಾರಾಷ್ಟ್ರ ಸಾರಿಗೆ ಬಸ್‌ಗಳನ್ನು ತಡೆದು ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಬೆಳಗಾವಿ ಗಡಿಯವರೆಗೆ ಮಾತ್ರ ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಕರ್ನಾಟಕ ಸಾರಿಗೆ ಬಸ್‌ಗಳು ಯಥಾಸ್ಥಿತಿಯಲ್ಲಿ ಮಹಾರಾಷ್ಟ್ರದ ವಿವಿಧ ಕಡೆಗೆ ಸಂಚರಿಸುತ್ತಿವೆ.
ಘಟನೆ ಹಿನ್ನೆಲೆ ಏನು?
ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಹಾಗೂ ಚಾಲಕ ಕತ್ತಲ್ ಸಾಬ್ ಶುಕ್ರವಾರ ಎಂದಿನಂತೆ ಬೆಳಗಾವಿ ನಗರ ನಿಲ್ದಾಣದಿಂದ ಪಂಥ ಬಾಳೇಕುಂದ್ರಿ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು 2 ಉಚಿತ ಟಿಕೆಟ್ ತಗೊಂಡಿದ್ದಾಳೆ. ಇನ್ನೊಬ್ಬರು ಯಾರು ಎಂದು ಪ್ರಶ್ನಿಸಿದಾಗ ಯುವಕನನ್ನು ತೋರಿಸಿದ್ದಾಳೆ. ಆಗ ನಿರ್ವಾಹಕ ಮಹಾದೇವ ಹುಕ್ಕೇರಿ ಅವರು, ಹುಡುಗರಿಗೆ ಫ್ರೀ ಟಿಕೆಟ್ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದ್ದಾರೆ. ಏನೇ ಹೇಳುವುದಿದ್ದರೂ ಮರಾಠಿಯಲ್ಲಿ ಹೇಳಿ ಎಂದು ದಬಾಯಿಸಿದ್ದಾಳೆ. ನನಗೆ ಮರಾಠಿ ಬರಲ್ಲ ಎಂದು ಮಹಾದೇವ ಹುಕ್ಕೇರಿ ಕನ್ನಡದಲ್ಲಿ ಪ್ರತಿಕ್ರಿಯಿಸಿದಾಗ, ಮರಾಠಿ ಕಲಿತುಕೊಳ್ಳಬೇಕು ಎಂದು ಜಗಳ ತೆಗೆದಿದ್ದಾಳೆ.
ಈ ವೇಳೆ ಆಕೆಯ ಜೊತೆಗಿದ್ದ ಯುವಕ ಊರಿನ ಜನರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ಬಸ್ ಸಣ್ಣ ಬಾಳೇಕುಂದ್ರಿಗೆ ಬರುತ್ತಿದ್ದಂತೆ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಸುಮಾರು 20 ಮಂದಿ ಹಲ್ಲೆ ನಡೆಸಿದ್ದಾರೆ.