
ಜನಾರ್ಧನ್ ಪೂಜಾರಿ
"ದೇಗುಲ ಬಳಿ ಶವ ಹೂಳುವುದು ನಮ್ಮ ಸಂಸ್ಕೃತಿ": ಧರ್ಮಸ್ಥಳ ಎಸ್ಐಟಿ ತನಿಖೆಗೆ ಜನಾರ್ದನ ಪೂಜಾರಿ ಆಕ್ರೋಶ
ಕೇವಲ ಆರೋಪಗಳನ್ನು ಆಧರಿಸಿ ಎಸ್ಐಟಿಯವರು ಧರ್ಮಸ್ಥಳದ ಆವರಣದಲ್ಲಿ ಶವಗಳಿಗಾಗಿ ಅಗೆಯುತ್ತಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ, ಎಷ್ಟು ಹುಡುಕಿದರೂ ಸಿಗುವುದೂ ಇಲ್ಲ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
"ದೇವಸ್ಥಾನದ ವಠಾರದಲ್ಲಿ ಶವ ಹೂಳುವುದು ಭಾರತದ ಸಂಸ್ಕೃತಿಯ ಭಾಗ. ಮಸೀದಿ, ಚರ್ಚ್ಗಳಲ್ಲಿಯೂ ಇದೇ ಪದ್ಧತಿ ಇದೆ" ಎಂದು ಹೇಳುವ ಮೂಲಕ ಹಿರಿಯ ರಾಜಕಾರಣಿ ಬಿ. ಜನಾರ್ದನ ಪೂಜಾರಿ ಅವರು, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟಿನಲ್ಲಿ ಭಾನುವಾರ ನಡೆದ 'ಮುದ್ದುಕೃಷ್ಣ-2025' ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕೇವಲ ಆರೋಪಗಳನ್ನು ಆಧರಿಸಿ ಎಸ್ಐಟಿಯವರು ಧರ್ಮಸ್ಥಳದ ಆವರಣದಲ್ಲಿ ಶವಗಳಿಗಾಗಿ ಅಗೆಯುತ್ತಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ, ಎಷ್ಟು ಹುಡುಕಿದರೂ ಸಿಗುವುದೂ ಇಲ್ಲ. ಆದರೆ, ಈ ಪ್ರಕ್ರಿಯೆಯಿಂದ ಪವಿತ್ರ ಕ್ಷೇತ್ರದ ಹೆಸರು ಹಾಳಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಏಕೆ ಬಾಯಿ ಬಿಡುತ್ತಿಲ್ಲ? ಅವರು ಏನು ಮಾಡುತ್ತಿದ್ದಾರೆ?" ಎಂದು ರಾಜ್ಯ ಸರ್ಕಾರದ ಮೌನವನ್ನು ಖಾರವಾಗಿ ಪ್ರಶ್ನಿಸಿದರು.
ಧರ್ಮಸ್ಥಳ ಕೇವಲ ಜೈನರಿಗೆ ಅಥವಾ ಒಂದು ಸಮಾಜಕ್ಕೆ ಸೇರಿದ್ದಲ್ಲ, ಅದರ ಗೌರವವನ್ನು ಹಾಳುಮಾಡಲು ಯಮನಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದ ಪೂಜಾರಿ, "ಶ್ರೀ ವೀರೇಂದ್ರ ಹೆಗ್ಗಡೆಯವರೇ, ನಿಮ್ಮ ಜೊತೆ ಕೇವಲ ಈ ದೇಶವಲ್ಲ, ಇಡೀ ಜಗತ್ತೇ ಇದೆ. ಈ ಪೂಜಾರಿ ಮತ್ತು ಕುದ್ರೋಳಿ ದೇವಸ್ಥಾನವೂ ನಿಮ್ಮ ಜೊತೆಗಿದೆ" ಎಂದು ಭಾವನಾತ್ಮಕವಾಗಿ ನುಡಿದರು. "ಪ್ರಧಾನಿ ನರೇಂದ್ರ ಮೋದಿಯವರಿಗೆ ಧೈರ್ಯ ಮತ್ತು ತಾಕತ್ತು ಇದ್ದರೆ ಧರ್ಮಸ್ಥಳಕ್ಕೆ ಬಂದು ಭಾಷಣ ಮಾಡಲಿ. 'ಮಸೀದಿಗಳಲ್ಲಿ ಶವ ಹೂತಿಲ್ಲವೇ, ಕೇವಲ ದೇವಸ್ಥಾನಗಳಲ್ಲಿ ಮಾತ್ರವೇ?' ಎಂದು ಅವರು ಕೇಳಬೇಕು" ಎಂದು ಸವಾಲೆಸೆದರು.
ಇದೇ ವೇಳೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, "ಹಿಂದೂ ದೇಗುಲಗಳನ್ನು ಗುರಿಯಾಗಿಸಲಾಗುತ್ತಿದೆ. ಎಸ್ಡಿಪಿಐ ಸಂಘಟನೆ ಏಕೆ ಪ್ರತಿಭಟಿಸುತ್ತದೆ? ಅವರು ದೇಶದ್ರೋಹಿಗಳು. ಈ ಹಿಂದೆ ಅಯ್ಯಪ್ಪ ಸ್ವಾಮಿ ಹಾಗೂ ಶನಿ ಶಿಂಗ್ಣಾಪುರ ದೇಗುಲಗಳನ್ನೂ ಇದೇ ರೀತಿ ಗುರಿ ಮಾಡಿದ್ದರು" ಎಂದು ಹೇಳಿದರು.