
The Federal Ground Report | ಧರ್ಮಸ್ಥಳದ ಹಳ್ಳಿಗಳಲ್ಲಿ ಭಯದ ವದಂತಿ: ಗುಂಡಿಗಳನ್ನು ಕಂಡರೆ ಗುಂಡಿಗೆ ನಡುಗುವುದು...
ನೂರಾರು ಶವಗಳನ್ನು ಹೂತಿಟ್ಟಿರುವ ಹೇಳಿಕೆ ರಾಜ್ಯದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹಲವು ಊಹಾಪೋಹಾಗಳೊಂದಿಗೆ ಜೀವನ ಸಾಗಿಸುವಂತಾಗಿದೆ.
ಕಪ್ಪು ಬಟ್ಟೆ ಧರಿಸಿದ ಅಪರಿಚಿತ ವ್ಯಕ್ತಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಹೇಳಿಕೆ ರಾಜ್ಯದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಧರ್ಮಸ್ಥಳದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹಲವು ಊಹಾಪೋಹಾಗಳೊಂದಿಗೆ ಜೀವನ ಸಾಗಿಸುವಂತಾಗಿದೆ.
ಅರಣ್ಯದಂಚಿನ ಹಳ್ಳಿಗಳಲ್ಲಿ ಕಾಣುವ ಗುಂಡಿಗಳು, ದಿಬ್ಬಗಳನ್ನು ಕಂಡರೆ ಜನ ದಿಗಿಲಾಗುವ ದೃಶ್ಯಗಳು ಕಂಡುಬಂದಿವೆ! ಎಲ್ಲಿ ಶವಗಳನ್ನು ಹೂತಿಡಲಾಗಿದೆಯೋ... ಎಲ್ಲಿ ಅಸ್ಥಿಪಂಜರಗಳು ಸಿಗುತ್ತವೋ ಎಂಬ ಆತಂಕಕ್ಕೆ ಹರಡಿರುವ ವದಂತಿಗಳೇ ಪ್ರಮುಖ ಕಾರಣವಾಗಿವೆ ಎಂದರೆ ತಪ್ಪಾಗಲಾರದು. ಅದರೆ, ಆ ವ್ಯಕ್ತಿ (ಸ್ವಚ್ಛತಾ ಕಾರ್ಮಿಕ ) ʼಶವಗಳನ್ನು ಹೂತಿದ್ದೇನೆ," ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಬಳಿಕ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ವದಂತಿಗಳು, ಊಹಾಪೋಹಗಳು ಹರಡುತ್ತಲೇ ಇವೆ. ಹಾಗಾಗಿ ಗುಂಡಿ, ದಿಬ್ಬ ಕಂಡರೆ ಸಾಕು... ಗುಂಡಿಗೆಯೇ ನಡುಗುವುದು ಎನ್ನುತ್ತಾರೆ ಇಲ್ಲಿನ ಹಳ್ಳಿಗರು!
ಒಂದು ರೀತಿಯಲ್ಲಿ ಅಲ್ಲಿನ ಗ್ರಾಮಸ್ಥರಲ್ಲಿ ತಳಮಳ ಉಂಟಾಗಿದ್ದು, ತಮ್ಮ ಮನೆಯ ಸುತ್ತಮುತ್ತಲು ಏನಾದರೂ ಶವಗಳನ್ನು ಹೂತಿಡಲಾಗಿದೆಯೇ ಎಂಬ ಭೀತಿ ಪ್ರಾರಂಭವಾಗಿದೆ. ಇದೇ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು ಶವಗಳ ಶೋಧ ನಡೆಸುವವರೆಗೆ ಈ ವಾತಾವರಣ ಹಾಗೇ ಇರಬಹುದು. ಪೊಲೀಸರು ಆದಷ್ಟು ಬೇಗ ಅಪರಿಚಿತ ವ್ಯಕ್ತಿ ತಾನು ಹೂತಿಟ್ಟಿರುವ ಶವಗಳನ್ನು ತೋರಿಸಬೇಕು. ಇಲ್ಲದಿದ್ದರೆ ಪೋಷಕರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಆತಂಕದ ಛಾಯೆ ಆವರಿಸಿಯೇ ಇರುತ್ತದೆ ಎಂದು ಮಾತುಗಳು ಕೇಳಿಬಂದಿವೆ.
ಗ್ರಾಮಗಳಲ್ಲಿ ಆತಂಕ
ಧರ್ಮಸ್ಥಳದ ಸುತ್ತಮುತ್ತಲಿನ ಪುದುವೆಟ್ಟು, ಕಲ್ಲೇರಿ, ಕನ್ಯಾಡಿ, ಬೋಲಿಯಾರ್ ಸೇರಿದಂತೆ ಹಲವು ಗ್ರಾಮಗಳಿವೆ. ದಟ್ಟ ಅರಣ್ಯ ಪ್ರದೇಶವಾಗಿರುವ ಕಾರಣ ಗ್ರಾಮಗಳಲ್ಲಿನ ಮನೆಗಳು ಬಹಳ ಅಂತರದಲ್ಲಿವೆ. ಹಸಿರಿನ ನಡುವೆ ಅಲ್ಲೊಂದು, ಇಲ್ಲೊಂದು ಮನೆಗಳಿವೆ. ಹೀಗಾಗಿ ಯಾವ ಜಾಗದಲ್ಲಿ ಶವಗಳನ್ನು ಹೂತಲಾಗಿದೆಯೋ ಎಂಬುದು ಯಕ್ಷಪ್ರಶ್ನೆಗಳಿವೆ. ಸತ್ಯಾಂಶ ಹೊರಬರುವವರಗೆ ಎಗ್ಗಿಲ್ಲದೆ ಊಹಾಪೋಹಗಳು ಧರ್ಮಸ್ಥಳದ ಸುತ್ತಮುತ್ತ ಹರಿದಾಡುತ್ತಿವೆ.

20ಕ್ಕೂ ಹೆಚ್ಚು ಗುಂಡಿಗಳಲ್ಲಿ ಶವಗಳೆಂಬ ವದಂತಿ..!
ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಹಲವು ಹಲವು ಗುಂಡಿಗಳಿವೆ. ಈ ಪೈಕಿ 20ಕ್ಕೂ ಹೆಚ್ಚು ಗುಂಡಿಗಳಲ್ಲಿ ಶವಗಳಿವೆ ಎಂಬ ಸುದ್ದಿ ಹಬ್ಬಿದೆ. ಹಲವು ವರ್ಷಗಳಿಂದ ಕೆಲಸ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪ್ರಕಾರ, ಪ್ರತಿ ಗುಂಡಿಗಳಲ್ಲಿ ಕನಿಷ್ಠ ಒಂದರಿಂದ ಮೂರು ಶವಗಳು ಇರುವ ಸಾಧ್ಯತೆಯೂ ಇದೆ.
ಅಪರಿಚಿತ ಗಂಡಸು, ಹೆಣ್ಣು ಮಕ್ಕಳ ಶವಗಳು ಇವೆ ಎಂಬ ಗುಮಾನಿ ಇದೆ. ಸ್ಥಳೀಯರಾದ ಪ್ರಕಾಶ್ (ಹೆಸರು ಬದಲಿಸಲಾಗಿದೆ) ದ ಕರ್ನಾಟಕ ಫೆಡರಲ್ ಜತೆ ಮಾತನಾಡಿ, ಅಪರಿಚಿತ ವ್ಯಕ್ತಿಯ ಹೇಳಿಕೆ ಬಳಿಕ ಧರ್ಮಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಯಾವ ಗ್ರಾಮದಲ್ಲಿ? ಎಲ್ಲೆಲ್ಲಿ ? ಶವಗಳನ್ನು ಹೂತು ಹಾಕಲಾಗಿದೆ ಎಂಬ ಭಯ ಶುರುವಾಗಿದೆ. ತಮ್ಮ ಜಮೀನಿನ ಸ್ಥಳದಲ್ಲಿ ಏನಾದರೂ ಶವಗಳನ್ನು ಹೂತು ಹಾಕಲಾಗಿದೆಯೇ? ಎಂಬ ಗುಮಾನಿಗಳು ಗ್ರಾಮಸ್ಥರಲ್ಲಿ ಉಂಟಾಗಿದೆ. ಒಂದು ವೇಳೆ ಹಾಗೇನಾದರೂ ಹಾಗಿದ್ದರೆ ಪೊಲೀಸರು ತಮ್ಮನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂಬ ಭಯ ಕಾಡುತ್ತಿದೆ. ಪೊಲೀಸರು ತನಿಖೆ ಮುಗಿಸಿದ ಬಳಿಕವೇ ಆತಂಕ ದೂರವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಭೀತಿಯಲ್ಲಿಯೇ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ಅಪರಿಚಿತ ವ್ಯಕ್ತಿ ನೀಡಿದ ದೂರಿನಲ್ಲೇನಿದೆ?
ಅಪರಿಚತ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದು, ನಿರಂತರ ಪ್ರಾಣಬೆದರಿಕೆಯೊಡ್ಡಿ, ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಗೊಳಗಾದ ಹಾಗೂ ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಮೃತ ದೇಹಗಳು ಮತ್ತು ಸಾಕ್ಷ್ಯಗಳನ್ನು ಬಲವಂತವಾಗಿ ಹೂತುಹಾಕಿಸಲಾಗಿದೆ. ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

"ಕೊಲೆಗಳು, ಸ್ವೀಕರಿಸಿದ ಶವಗಳನ್ನು ಹೂತುಹಾಕದಿದ್ದರೆ ಆ ಶವಗಳ ಜೊತೆಯಲ್ಲೇ ಮಣ್ಣು ಪಾಲಾಗಿಸುವ ನಿರಂತರ ಜೀವಬೆದರಿಕೆ ಮತ್ತು ಥಳಿತಗಳ ನೋವಿನ ನೆನಪಿನ ಹೊರೆಯನ್ನು ಇನ್ನೂ ಹೊರಲು ಸಾಧ್ಯವಿಲ್ಲ. ಈ ಮೂಲಕ ನಾನು ಬಹಿರಂಗಪಡಿಸುತ್ತಿರುವ, ಕೊಲೆಯಾದ ಅನೇಕ ಪುರುಷರು ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಯುವತಿಯರು ಮತ್ತು ಮಹಿಳೆಯರ ಮಾಹಿತಿಯನ್ನು ತೀವ್ರಗತಿಯಲ್ಲಿ ತನಿಖೆಗೊಳಪಡಿಸಿ, ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಬೇಕು. 11 ವರ್ಷಗಳ ಹಿಂದೆ ರಾತ್ರೋರಾತ್ರಿ ಈ ಪ್ರದೇಶ ತೊರೆದು ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದೇನೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಗೊಳಗಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ," ಎಂದು ಆತ ಉಲ್ಲೇಖಿಸಿದ್ದಾನೆ.
"ಅತ್ಯಂತ ಕೆಳಗಿನದೆಂದು ಕರೆಯಲಾಗುವ ಜಾತಿಯಲ್ಲಿ ಹುಟ್ಟಿದ್ದು, 1995 ರಿಂದ ಡಿಸೆಂಬರ್ 2014ರ ವರೆಗೆ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ, ನೇತ್ರಾವತಿ ನದಿಯ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೆಲಸವನ್ನು ನಿರ್ವಹಿಸುತ್ತಿದ್ದೆ. ನಿಯಮಿತ ಉದ್ಯೋಗಿಯಾಗಿ ಕೆಲಸ ಪ್ರಾರಂಭಿಸಿದ್ದು, ನಂತರದ ದಿನಗಳಲ್ಲಿ ಅತ್ಯಂತ ಭಯಾನಕ ಅಪರಾಧಗಳ ಸಾಕ್ಷ್ಯಗಳನ್ನು ಮರೆಮಾಚುವ ಕೆಲಸವಾಗಿ ಬದಲಾಯಿತು. ನನ್ನ ಉದ್ಯೋಗದ ಆರಂಭದಲ್ಲಿ, ಮೃತ ದೇಹಗಳು ಕಾಣಿಸಿಕೊಳ್ಳುವುದನ್ನು ಗಮನಿಸಿದೆ. ಮೊದಲಿಗೆ, ಇವು ಆತ್ಮಹತ್ಯೆ ಅಥವಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿದ ಮೃತ ದೇಹಗಳು ಎಂದು ನಾನು ಭಾವಿಸಿದ್ದೆ. ಅದರಲ್ಲಿ, ಮಹಿಳೆಯರ ಶವಗಳೇ ಹೆಚ್ಚಾಗಿದ್ದವು. ಅನೇಕ ಮಹಿಳಾ ಶವಗಳು ಬಟ್ಟೆ ಅಥವಾ ಒಳ ಉಡುಪುಗಳಿಲ್ಲದೆ ಕಂಡು ಬಂದವು. ಲೈಂಗಿಕ ಆಕ್ರಮಣ ಮತ್ತು ಹಿಂಸೆಯ ಸ್ಪಷ್ಟ ಲಕ್ಷಣಗಳನ್ನು ಕೆಲವು ಶವಗಳು ಹೊಂದಿದ್ದವು. ಆ ದೇಹಗಳ ಮೇಲೆ ಹಿಂಸೆಯನ್ನು ಸೂಚಿಸುವ ಗಾಯಗಳು ಅಥವಾ ಕತ್ತುಹಿಸುಕುವಿಕೆಯು ಕಂಡು ಬರುತ್ತಿದ್ದವು," ಎಂದು ಆರೋಪಿಸಿದ್ದಾನೆ.
"1998ರ ಸುಮಾರಿಗೆ, ನನ್ನ ಮೇಲ್ವಿಚಾರಕರು ಈ ದೇಹಗಳನ್ನು ಪೊಲೀಸರಿಗೆ ವರದಿ ಮಾಡುವ ಬದಲು, ನಾನು ಈ ದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ನಾನು ತಕ್ಷಣವೇ ನಿರಾಕರಿಸಿ, ಆ ಸಾವುಗಳನ್ನು ಪೊಲೀಸರಿಗೆ ತಿಳಿಸಬೇಕು ಎಂದು ಪ್ರತಿಕ್ರಿಯಿಸಿದಾಗ, ತೀವ್ರವಾಗಿ ಥಳಿಸಲ್ಪಟ್ಟಿದ್ದೇನೆ. ಕೆಲವು ದೇಹಗಳ ಮೇಲೆ ಆಸಿಡ್ ನಿಂದ ಸುಟ್ಟ ಗುರುತುಗಳೂ ಸಹ ಇರುತ್ತಿದ್ದವು. ತೀವ್ರವಾಗಿ ಕಾಡಿದ್ದು, 2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್ ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡಿದ್ದು, ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಅವಳ ದೇಹವು ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳನ್ನು ಹೊಂದಿತ್ತು. ಗುಂಡಿ ಅಗೆಯಲು ಮತ್ತು ಆಕೆ ಶಾಲಾ ಬ್ಯಾಗ್ ನೊಂದಿಗೆ ಅವಳನ್ನು ಹೂಳಲು ನಿರ್ದೇಶಿಸಿದರು. ಆ ಸನ್ನಿವೇಶವು ಇಂದಿಗೂ ಮಾಸಿಲ್ಲ. ಮತ್ತೊಂದು ಮರೆಯಲಾಗದ ಘಟನೆಯು 20ರ ಹರೆಯದ ಮಹಿಳೆಯ ಮೃತ ದೇಹದ್ದಾಗಿತ್ತು. ಆಕೆಯ ಮುಖ ಆಸಿಡ್ ನಿಂದ ಸುಡಲಾಗಿತ್ತು. ಆ ದೇಹವನ್ನು ದಿನಪತ್ರಿಕೆಯಿಂದ ಮುಚ್ಚಲಾಗಿತ್ತು. ಆಕೆಯ ದೇಹವನ್ನು ಹೂಳದೆ, ಆಕೆಯ ಪಾದರಕ್ಷೆ ಮತ್ತು ಅವಳ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಅವಳೊಂದಿಗೆ ಸುಡಲು ನನಗೆ ಮೇಲ್ವಿಚಾರಕರು ಸೂಚಿಸಿದರು," ಎಂದು ಅಪರಿಚಿತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾನೆ.
ಧರ್ಮಸ್ಥಳ ಪ್ರದೇಶದಲ್ಲಿ ಭಿಕ್ಷಾಟನೆಗೆ ಬಂದ ಬಡ ಮತ್ತು ನಿರ್ಗತಿಕ ಪುರುಷರು ವ್ಯವಸ್ಥಿತವಾಗಿ ಕೊಲೆಯಾದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಈ ಕೊಲೆಗಳು ನನ್ನ ಸಮ್ಮುಖದಲ್ಲೇ ನಡೆದವು. ದೂರದ ಅರಣ್ಯ ಪ್ರದೇಶಗಳಲ್ಲಿ ಈ ದೇಹಗಳನ್ನು ಹೂತು ಹಾಕಲು ನನಗೆ ನಿರ್ದೇಶನ ನೀಡುತ್ತಿದ್ದರು. ಧರ್ಮಸ್ಥಳ ಪ್ರದೇಶದಾದ್ಯಂತ ನನ್ನ ಜೀವ ಉಳಿಸಿಕೊಳ್ಳಲು, ಅನಿವಾರ್ಯವಾಗಿ ಮತ್ತು ರಹಸ್ಯವಾಗಿ ಮೃತ ದೇಹಗಳನ್ನು ಹೂತು ಹಾಕಿರುವ ಸ್ಥಳಗಳನ್ನು ತನಿಖಾಧಿಕಾರಿಗೆ ತೋರಿಸಲು ಸಿದ್ಧನಿರುವೆ. ನಾನು ಹೂತಿಟ್ಟ ಶವಗಳ ಅವಶೇಷಗಳನ್ನು ಪೊಲೀಸ್ ಸಮ್ಮುಖದಲ್ಲಿ ಹೊರತೆಗೆಯಲು ಸಿದ್ಧನಿರುವೆ ಎಂದು ಹೇಳಿದ್ದಾನೆ.
ಆತನ ಹೇಳಿಕೆಯಿಂದ ಸಹಜವಾಗಿ ಸುತ್ತುಮುತ್ತಲಿನ ಗ್ರಾಮಗಳಲ್ಲಿ ಒಂದು ರೀತಿಯ ಭಯದ, ಆತಂಕದ ವಾತಾವರಣ ಕಂಡುಬಂದಿದೆ.