ರಾಹುಲ್ ಗಾಂಧಿಗೆ ಬೆದರಿಕೆ | ಬಿಜೆಪಿ ವಕ್ತಾರರ ಬೆದರಿಕೆಗೆ ಪ್ರಧಾನಿ ಮೋದಿ- ಅಮಿತ್‌ ಶಾ ಮೌನ ಸಮ್ಮತಿಯೇ?
x

ಸಿದ್ದರಾಮಯ್ಯ 

ರಾಹುಲ್ ಗಾಂಧಿಗೆ ಬೆದರಿಕೆ | ಬಿಜೆಪಿ ವಕ್ತಾರರ ಬೆದರಿಕೆಗೆ ಪ್ರಧಾನಿ ಮೋದಿ- ಅಮಿತ್‌ ಶಾ ಮೌನ ಸಮ್ಮತಿಯೇ?

ಬಿಜೆಪಿಯವರು ಮೊದಲು ತೆರೆಮರೆಯಲ್ಲಿ‌ ನಿಂತು ತಮ್ಮ ವಿರೋಧಿಗಳ‌ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದಿದ್ದರು. ಈಗ ನೇರಾನೇರವಾಗಿ ಅಖಾಡಕ್ಕೆ ಇಳಿದಂತಿದ್ದಾರೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರವಾಗಿ ಧ್ವನಿಯೆತ್ತುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ವಕ್ತಾರರೊಬ್ಬರು “ಎದೆಗೆ ಗುಂಡು ಹೊಡೆಯುತ್ತೇವೆ, ಹುಷಾರ್..!” ಎಂದು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಆದರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನ ನೋಡಿದರೆ ಸಮ್ಮತಿ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆದರಿಕೆಯೊಡ್ಡಿ ಸೈದ್ಧಾಂತಿಕ ವಿರೋಧಿಗಳ ಧ್ವನಿ ಅಡಗಿಸುವುದು, ಅದಕ್ಕೂ ಬಗ್ಗದಿದ್ದಾಗ ಅವರನ್ನೇ ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದೇನಲ್ಲ. ಮೊದಲೆಲ್ಲ, ತೆರೆಮರೆಯಲ್ಲಿ‌ ನಿಂತು ತಮ್ಮ ವಿರೋಧಿಗಳ‌ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರಾ ನೇರ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿಗಳನ್ನು ಸಂವಾದ, ಚರ್ಚೆಗಳ ಮೂಲಕ ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರದ ದುರುಳರಿಂದ ಪ್ರಾಣ ಕಳೆದುಕೊಂಡವರು ಒಬ್ಬರಾ?, ಇಬ್ಬರಾ?. ಮಹಾತ್ಮ ಗಾಂಧಿಯವರಿಂದ ಆರಂಭಗೊಂಡ ಈ ಹತ್ಯಾ ಸರಣಿ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಕೊಲೆಗಾರರಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿ ಸಂಘ ಪರಿವಾರದ ನಾಯಕರು ಸುಲಭದಲ್ಲಿ ತಲೆ ತೊಳೆದುಕೊಂಡರೂ, ಅವರ ಕೈಗಳಿಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗಲಿಲ್ಲ.

ಈ ಹಿಂದೆ ನನಗೆ ಮಾತ್ರವಲ್ಲ ನಾಡಿನ ಅನೇಕ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರಿಗೂ ಕೊಲೆ ಬೆದರಿಕೆ ಒಡ್ಡಿ ಪತ್ರಗಳನ್ನು ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಹೆದರಿ ನಂಬಿದ ಸಿದ್ಧಾಂತಕ್ಕೆ ಬೆನ್ನು ಹಾಕುವ ಜಾಯಮಾನ ನನ್ನದಲ್ಲ. ಒಂದಲ್ಲಾ ಒಂದು ದಿನ ನ್ಯಾಯದ ಎದುರು ಈ ಎಲ್ಲಾ ದುಷ್ಟರು ಮಂಡಿಯೂರುತ್ತಾರೆಂಬ ಭರವಸೆ ನನಗಿದೆ.

ರಾಹುಲ್ ಗಾಂಧಿಯವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದು ಮೊದಲಲ್ಲ. ಇಂತಹ ಕೊಲೆಗಡುಕರಿಂದಲೇ ರಾಹುಲ್ ಅವರು ತಮ್ಮ ಅಜ್ಜಿ ಮತ್ತು‌ ಅಪ್ಪನನ್ನು ಕಳೆದುಕೊಂಡವರು. ರಾಹುಲ್ ಗಾಂಧಿ ಈಗ ಒಬ್ಬಂಟಿ ಅಲ್ಲ, ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ ಎನ್ನುವುದು ಬಿಜೆಪಿಯ ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಟಿವಿ ಚರ್ಚೆಯೊಂದರಲ್ಲಿ ಕೇರಳದ ಬಿಜೆಪಿ ನಾಯಕ ಪ್ರಿಂಟು ಮಹಾದೇವನ್ ರಾಹುಲ್‌ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಗಾಂಧಿ ಅವರು ಭಾರತದಲ್ಲಿ ನೇಪಾಳದ Gen- Z ನಂತಹ ಪ್ರತಿಭಟನೆಯ ಕನಸು ಕಂಡರೆ ಅವರ ಎದೆಗೆ ಗುಂಡು ತಾಗುತ್ತದೆ ಎಂದು ಅವರು ತಿಳಿಸಿದ್ದರು. ಈ ಬಗ್ಗೆ ಅವರ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು.

Read More
Next Story