ಕಟ್ಟಡ ನಕ್ಷೆ ಉಲ್ಲಂಘನೆ: ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ, ಇಲ್ಲಿದೆ ದಂಡ ಶುಲ್ಕದ ವಿವರ
x

ಕಟ್ಟಡ ನಕ್ಷೆ ಉಲ್ಲಂಘನೆ: ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ, ಇಲ್ಲಿದೆ ದಂಡ ಶುಲ್ಕದ ವಿವರ

ಕಟ್ಟಡ ಪರವಾನಗಿ ಪಡೆದು ಸೆಟ್ ಬ್ಯಾಕ್‌, ಕವರೇಜ್‌ಗಳಲ್ಲಿ ಶೇ 15 ರ ಮಿತಿಯೊಳಗೆ ಉಲ್ಲಂಘನೆ ಮಾಡಿರುವ ಪ್ರಕರಣಗಳಿಗೆ ನಗರ ಸ್ಥಳೀಯ ಸಂಸ್ಥೆವಾರು ದಂಡ ನಿಗದಿಗೊಳಿಸಿದೆ.


ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹೊರತುಪಡಿಸಿ ರಾಜ್ಯದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಉಲ್ಲಂಘನೆ ಪ್ರಕರಣಗಳಲ್ಲಿ ಒಂದು ಬಾರಿಗೆ ದಂಡ ವಿಧಿಸಿ ಪರಿಷ್ಕೃತ ಕಟ್ಟಡ ನಕ್ಷೆ ಮಂಜೂರು ಮಾಡಲು ತೀರ್ಮಾನಿಸಿದೆ. ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ದಂಡ ನಿಗದಿ ಮಾಡಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಕಟ್ಟಡ ಪರವಾನಗಿ ಪಡೆದು ಸೆಟ್ ಬ್ಯಾಕ್‌, ಕವರೇಜ್‌ಗಳಲ್ಲಿ ಶೇ 15 ರ ಮಿತಿಯೊಳಗೆ ಉಲ್ಲಂಘನೆ ಮಾಡಿರುವ ಪ್ರಕರಣಗಳಿಗೆ ನಗರ ಸ್ಥಳೀಯ ಸಂಸ್ಥೆವಾರು ದಂಡ ನಿಗದಿಗೊಳಿಸಿದೆ.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ, ಇತರೆ ಉದ್ದೇಶದ ಕಟ್ಟಡಗಳಿಗೆ ಪ್ರತಿ ಚ.ಮೀ.ಗೆ 1000 ರೂ, ವಾಣಿಜ್ಯ ಕಟ್ಟಡಗಳಿಗೆ 1500 ರೂ. ದಂಡದ ಮೊತ್ತ ನಿಗದಿ ಮಾಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಗಳಿಗೆ 1200 ರೂ., ವಾಣಿಜ್ಯ ಕಟ್ಟಡಗಳಿಗೆ 1800ರೂ, ನಗರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಹಾಗೂ ಇತರೆ ಉದ್ದೇಶದ ಕಟ್ಟಡಗಳಿಗೆ 1500 ರೂ, ವಾಣಿಜ್ಯ ಕಟ್ಟಡಗಳಿಗೆ 2250 ರೂ., ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕೆ ಹಾಗೂ ಇತರೆ ಉದ್ದೇಶದ ಕಟ್ಟಡಗಳಿಗೆ 2000 ರೂ, ವಾಣಿಜ್ಯ ಕಟ್ಟಡಗಳಿಗೆ 5 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ.

ಇನ್ನು ಕಟ್ಟಡ ಪರವಾನಗಿ ಪಡೆದು FAR (Floor Area Ratio) ಮತ್ತು ಕಾರ್ ಪಾರ್ಕಿಂಗ್ (Car Parking) ಪ್ರದೇಶ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ಶೇ.5ರ ಮಿತಿಯೊಳಗಿನ ಉಲ್ಲಂಘನೆ ಆಧರಿಸಿ ನಗರ ಸ್ಥಳೀಯ ಸಂಸ್ಥೆವಾರು ದಂಡ ನಿಗದಿ ಮಾಡಲಾಗಿದೆ.

ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘನೆ ಮಾಡಿ ನಿರ್ಮಿಸಿರುವ ಕಾರ್ ಪಾರ್ಕಿಂಗ್‌ಗೆ 5000 ರೂ, ಎಫ್ಎಆರ್ ಉಲ್ಲಂಘಿಸಿರುವ ಪ್ರತಿ ಚ.ಮೀ.ಗೆ (ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡ) ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ರೂ., ಪುರಸಭೆಯಲ್ಲಿ 1200 ರೂ, ನಿಗದಿಪಡಿಸಲಾಗಿದೆ.

ವಾಣಿಜ್ಯ ಕಟ್ಟಡಗಳಿಗೆ ಪಟ್ಟಣ ಪಂಚಾಯಿತಿಯಲ್ಲಿ 1500 ರೂ, ಪುರಸಭೆಯಲ್ಲಿ 1800 ರೂ. ನಿಗದಿ ಮಾಡಲಾಗಿದೆ. ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಫ್ಎಆರ್ ಉಲ್ಲಂಘಿಸಿದ ಪ್ರತಿ ಚ.ಮೀ.ಗೆ (ವಸತಿ, ಕೈಗಾರಿಕಾ, ಇತರೆ ಕಟ್ಟಡ) ನಗರಸಭೆಯಲ್ಲಿ 1500 ರೂ, ಮಹಾನಗರ ಪಾಲಿಕೆಯಲ್ಲಿ2000 ರೂ, ವಾಣಿಜ್ಯ ಕಟ್ಟಡಗಳಿಗೆ ನಗರಸಭೆ ವ್ಯಾಪ್ತಿಯಲ್ಲಿ 2250 ರೂ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3000 ರೂ,. ನಿಗದಿ ಮಾಡಲಾಗಿದೆ.

Read More
Next Story