Building collapse | ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಬಿಬಿಎಂಪಿ ಎಇಇ ಅಮಾನತು
x

Building collapse | ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಬಿಬಿಎಂಪಿ ಎಇಇ ಅಮಾನತು


ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ಸೋಮವಾರ ರಾತ್ರಿ ನಿರ್ಮಾಣ ಹಂತದ ಕಟ್ಟಡ ಕುಸಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಿದ್ದ ಎನ್‌ಡಿಆರ್‌ಎಫ್‌ ತಂಡ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆದಿದೆ.

ಕಟ್ಟಡದ ಅವಶೇಷಗಳಡಿಯಿಂದ ಈವರೆಗೆ ಒಟ್ಟು 13 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಬಿಬಿಎಂಪಿ ಎಇಇ ಅಮಾನತು

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಹೊರಮಾವು ವಿಭಾಗದ ಬಿಬಿಎಂಪಿ ಎಇಇ ಕೆ. ವಿನಯ್‌ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿದೆ. ನಕ್ಷೆ ಮಂಜೂರಾತಿ ಪಡೆಯದೇ 40* 60 ನಿವೇಶನದಲ್ಲಿ ಕಟ್ಟಡ ನಿರ್ಮಿಸುತ್ತಿದ್ದ ಮಾಲೀಕ ಮುನಿರಾಜು ರೆಡ್ಡಿ ಅವರಿಗೆ ಬಿಬಿಎಂಪಿ ಅಧಿಕಾರಿಗಳು ಏಪ್ರಿಲ್‌ನಲ್ಲಿ ಒಂದು ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಎರಡು ನೋಟಿಸ್‌ ನೀಡಿದ್ದರು. ಆದರೆ, ಇದಕ್ಕೆ ಕಟ್ಟಡ ಮಾಲೀಕರ ಯಾವುದೇ ಉತ್ತರ ನೀಡಿರಲಿಲ್ಲ. ಕಟ್ಟಡ ಮೂರು ಅಂತಸ್ತು ಇರುವಾಗಲೇ ನೋಟಿಸ್‌ ನೀಡಿದ್ದರೂ ಅಧಿಕಾರಿಗಳು ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದಕ್ಕೆ ಹೊಣೆಯಾಗಿಸಿ ಹೊರಮಾವು ಉಪವಿಭಾಗದ ಎಇಇ ಕೆ.ವಿನಯ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌

ಕಟ್ಟಡ ಮಾಲೀಕ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಹಾಗೂ ಅವರ ಪುತ್ರ ಮೋಹನ ರೆಡ್ಡಿ ಎಂಬುವರ ಮೇಲೆ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಮೃತ ಹರ್ಮನ್‌ ಅವರ ಸಂಬಂಧಿ ಮೊಹಮದ್‌ ಅರ್ಷದ್‌ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ಮಾಲೀಕರು ಬಿಬಿಎಂಪಿ ವತಿಯಿಂದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಅಕ್ರಮವಾಗಿ ಆರು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಆ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಬುಧವಾರ ಬೆಳಿಗ್ಗೆ ಪೂರ್ವ ವಿಭಾಗದ ಡಿಸಿಪಿ ದೇವರಾಜು ತಿಳಿಸಿದ್ದರು.

Read More
Next Story