ಶಾಮನೂರು ಶಿವಶಂಕರಪ್ಪ ಕನಸು ಈಡೇರಿಸಲು 1000 ವಿದ್ಯಾರ್ಥಿನಿಯರಿಗೆ ಹೈಟೆಕ್ ಹಾಸ್ಟೆಲ್
x

ಲಿಂಗಾಯತ ಮಹಾಸಭಾದಿಂದ ಶಾಮನೂರು ಶಿವಶಂಕರಪ್ಪಗೆ ನಿಧನ 

ಶಾಮನೂರು ಶಿವಶಂಕರಪ್ಪ ಕನಸು ಈಡೇರಿಸಲು 1000 ವಿದ್ಯಾರ್ಥಿನಿಯರಿಗೆ ಹೈಟೆಕ್ ಹಾಸ್ಟೆಲ್

ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬೃಹತ್ ಹಾಸ್ಟೆಲ್ ನಿರ್ಮಿಸುವುದು ಶಾಮನೂರು ಅವರ ಕನಸಾಗಿದ್ದು, ಅದನ್ನು ನನಸು ಮಾಡಲು ಮಹಾಸಭಾ ಬದ್ಧವಾಗಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನಲ್ಲಿ ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಸುಸಜ್ಜಿತ ಹಾಸ್ಟೆಲ್ ನಿರ್ಮಿಸುವುದು ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಅವರ ದೊಡ್ಡ ಆಶಯವಾಗಿತ್ತು. ಈ ಕನಸನ್ನು ನನಸು ಮಾಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಪೂರ್ಣ ಬದ್ಧವಾಗಿದೆ ಎಂದು ಅರಣ್ಯ ಸಚಿವ ಹಾಗೂ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಅವರು ಬುಧವಾರ ನಗರದ ತರಳಬಾಳು ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬುಧವಾರ ಆಯೋಜಿಸಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರ 'ನುಡಿನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಈಗಾಗಲೇ ಎರಡು ಎಕರೆ ಜಮೀನು ಖರೀದಿಸಲಾಗಿದ್ದು, ಕಟ್ಟಡದ ನೀಲನಕ್ಷೆ ಹಾಗೂ ರೂಪರೇಷೆಗಳು ಸಿದ್ಧವಾಗಿವೆ ಎಂದು ಅವರು ಮಾಹಿತಿ ನೀಡಿದರು.

ಸತತ ಹದಿಮೂರೂವರೆ ವರ್ಷಗಳ ಕಾಲ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶಿವಶಂಕರಪ್ಪ ಅವರು ಜನಸಾಮಾನ್ಯರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ಕೇವಲ ನಾಯಕರಾಗಿರದೆ, ಸಮಾಜಕ್ಕೆ ಪ್ರೀತಿಯ 'ಅಪ್ಪಾಜಿ'ಯಾಗಿದ್ದರು. ಆಡಳಿತ ಅಥವಾ ವಿರೋಧ ಪಕ್ಷ ಯಾವುದೇ ಇರಲಿ, ಸಮಾಜದ ಹಿತಾಸಕ್ತಿಯ ವಿಷಯ ಬಂದಾಗ ಅವರು ಅತ್ಯಂತ ನಿರ್ಭಯವಾಗಿ ಮತ್ತು ನಿಷ್ಠುರವಾಗಿ ಮಾತನಾಡುತ್ತಿದ್ದರು. ತಮ್ಮ ತಂದೆ ಡಾ. ಭೀಮಣ್ಣ ಖಂಡ್ರೆ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮಹಾಸಭೆಯನ್ನು ಕಟ್ಟಿ ಬೆಳೆಸಿದ ಅವರ ಜೀವನೋತ್ಸಾಹ ಇಂದಿನ ಪೀಳಿಗೆಗೆ ಮಾದರಿ ಎಂದು ಈಶ್ವರ ಖಂಡ್ರೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಧನ ಶ್ರೀಮಂತಿಕೆಯ ಜೊತೆಗೆ ಅದ್ಭುತವಾದ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದರು. ಸಾಮಾನ್ಯ ವ್ಯಾಪಾರಿ ಕುಟುಂಬದಲ್ಲಿ ಜನಿಸಿ, ಸ್ವಂತ ಪರಿಶ್ರಮದಿಂದ ಶಿಕ್ಷಣ, ಉದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಿದ ಅವರು ದಾವಣಗೆರೆಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು ಎಂದು ಶ್ಲಾಘಿಸಿದರು.

ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶಿವಶಂಕರಪ್ಪ ಅವರು ಒಂದು ಸಮುದಾಯದ ಪ್ರಾತಿನಿಧಿಕ ವ್ಯಕ್ತಿಯಾಗಿ ಬದುಕಿದ ಮೇರು ವ್ಯಕ್ತಿ. ಕೈಗಾರಿಕಾ ನಗರವಾಗಿದ್ದ ದಾವಣಗೆರೆಯನ್ನು ಜ್ಞಾನಕಾಶಿಯಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪಕ್ಷಭೇದ ಮರೆತು ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು ನಿಜವಾದ ಅಜಾತಶತ್ರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿವೃತ್ತ ಡಿಜಿಪಿ ಶಂಕರ ಬಿದರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶಿವಶಂಕರಪ್ಪ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್, ಮುಖಂಡರಾದ ಪ್ರಭಾಕರ ಕೋರೆ, ಲೀಲಾದೇವಿ ಆರ್. ಪ್ರಸಾದ್, ರಾಣಿ ಸತೀಶ್ ಹಾಗೂ ಅನೇಕ ಶಾಸಕರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದು ಅಗಲಿದ ನಾಯಕನಿಗೆ ಭಾವಪೂರ್ಣ ನಮನ ಸಲ್ಲಿಸಿದರು.

Read More
Next Story