ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಯ ತಾಯಿ ಸಾವು
x

ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಯ ತಾಯಿ ಸಾವು


ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಯ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಭಾನುವಾರ ರಾತ್ರಿ ಉಸಿರಾಟದ ಸಮಸ್ಯೆ ಎಂದು ಹುಳಿಮಾವು ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್‌ ಮಟ್ಟ ಕಡಿಮೆಯಾಗಿದ್ದು, ಆಕೆಯನ್ನು ವೆಂಟಿಲೇಟರ್‌ಗೆ ಅಳವಡಿಸುವ ಪ್ರಕ್ರಿಯೇ ಆರಂಭವಾಗಿತ್ತು. ಆದರೆ, ನಿತ್ರಾಣಗೊಂಡು ಕುಸಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೂ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಯಡಿಯೂರಪ್ಪ ಅವರು ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆನ್ನಲಾದ ಆರೋಪವನ್ನು ಆಕೆಯ ತಾಯಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಮಾ.14 ರಂದು ದಾಖಲಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಆದೇಶ ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ, ಯುವತಿಯ ತಾಯಿ ನೀಡಿದ ವಿಡಿಯೋದಲ್ಲಿದ್ದಾರೆ ಎನ್ನಲಾದ ಯಡಿಯೂರಪ್ಪ ಅವರಂತೆ ಹೋಲುವ ವ್ಯಕ್ತಿಯ ಧ್ವನಿ ಸಾಮ್ಯತೆ ಬಗ್ಗೆ ಯಡಿಯೂರಪ್ಪ ಅವರ ಧ್ಬನಿ ಮಾದರಿಯನ್ನು ಸಂಗ್ರಹಿಸಿತ್ತು.

ಈ ನಡುವೆ ಯುವತಿಯ ತಾಯಿ ಪ್ರಕರಣದ ತನಿಖೆಯನ್ನು ಪ್ರಾಮಾಣಿಕ ನಿವೃತ್ತ ನ್ಯಾಯಾಧೀಶರ ನಿಗಾದಲ್ಲಿ ಸಿಬಿಐಗೆ ವಹಿಸಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. "ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪೋಕ್ಸೋ (POCSO) ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಆರೋಪಿ ಯಡಿಯೂರಪ್ಪ ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಿಐಡಿ ಪೊಲೀಸರು ಅವರನ್ನು ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ," ಎಂದು ಪತ್ರದಲ್ಲಿ ಬರೆದಿದ್ದರು. ಸಿಐಡಿ ಪೊಲೀಸರು, ತಮ್ಮ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವುದಾಗಿ ಹೇಳಿರುವ ಆಕೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು.

ಹಿನ್ನೆಲೆ

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾ.14 ತಡ ರಾತ್ರಿ ಮಹಿಳೆಯೊಬ್ಬರು ನೀಡಿದ ದೂಡಿನ ಮೇಲೆ ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ, ಎಫ್ ಐಆರ್ ಮಾಡಲಾಗಿತ್ತು. ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹಾಯ ಪಡೆಯಲು ಫೆಬ್ರವರಿ 2 ರಂದು ಅವರನ್ನು ಭೇಟಿ ಮಾಡಿದ್ದಾಗ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸದಾಶಿವನಗರ ಪೊಲೀಸರು ಬಿಎಸ್ ಯಡಿಯೂರಪ್ಪ (81) ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO) ಅಡಿಯಲ್ಲಿ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 ಎ ಅಡಿ ಪ್ರಕರಣ ದಾಖಲಿಸಿದ್ದರು.

Read More
Next Story