ಬಿಎಸ್‌ವೈ ಷಡ್ಯಂತ್ರಗಳನ್ನು ಜಯಿಸಿದ್ದಾರೆ: ವಿಜಯೇಂದ್ರ
x

ಬಿಎಸ್‌ವೈ ಷಡ್ಯಂತ್ರಗಳನ್ನು ಜಯಿಸಿದ್ದಾರೆ: ವಿಜಯೇಂದ್ರ


ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೈಕೋರ್ಟ್‌ ಬಂಧನ ವಾರಂಟ್‌ಗೆ ತಡೆ ನೀಡಿರುವುದು ಅವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ ಎಂದು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿರುವ ವಿಜಯೇಂದ್ರ "ಯಡಿಯೂರಪ್ಪ ಅವರ ಮೇಲೆ ಕರುನಾಡ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜಕಾರಣ ಮಾನ್ಯ ಯಡಿಯೂರಪ್ಪ ಅವರ ಹಿಂಬಾಲಿಸಿಕೊಂಡು ಬರುತ್ತಲೇ ಇದೆ, ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ," ಎಂದು ಹೇಳಿದ್ದಾರೆ.

"ಇಂದು ಉಚ್ಚ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಘನ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ "ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ" ಎನ್ನುವ ಮಾತನ್ನು ಉಲ್ಲೇಖಿಸಿರುವುದು ಬಿ.ಎಸ್ ಯಡಿಯೂರಪ್ಪನವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ.," ಎಂದು ಅವರು ಬರೆದಿದ್ದಾರೆ.

ಬಿಜೆಪಿ ಸ್ವಾಗತ

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಅವರು, ಪೋಕ್ಸೊ ಕೇಸಿನಡಿ ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಗಳಲ್ಲಿ ಮತ್ತು ಟಿ.ವಿಯಲ್ಲಿ ಸುದ್ದಿ ಬರುತ್ತಿತ್ತು. ಯಡಿಯೂರಪ್ಪ ಅವರಿಗೆ 82 ವರ್ಷವಾಗಿದೆ. ಅವರು ಓಡಿ ಹೋಗುವ ವ್ಯಕ್ತಿ ಅಲ್ಲ. 4 ಬಾರಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ದೊಡ್ಡ ಜನನಾಯಕ. ಅದೆಲ್ಲ ಇತಿಹಾಸವನ್ನು ಗಮನಿಸಿ ಈ ಆದೇಶ ನೀಡಿದ್ದಾಗಿ ವಿಶ್ಲೇಷಿಸಿದರು.

ಕೇಸನ್ನು ದಾಖಲಿಸಿದ ಮಹಿಳೆ ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಮತ್ತು ದ್ವೇಷದ ರಾಜಕಾರಣ ಮಾಡಲು ಇದನ್ನು ದಾಖಲಿಸಲಾಗಿತ್ತು. ಇವುಗಳನ್ನು ಗಮನಿಸಿದ ಹೈಕೋರ್ಟ್ ಆದೇಶ ನೀಡಿದೆ ಎಂದರು. ಇದು ಯಡಿಯೂರಪ್ಪನವರ ದೀರ್ಘ ಹೋರಾಟಕ್ಕೆ ಸಿಕ್ಕಿದ ಜಯ ಎಂದು ಹೇಳಿದರು.

3 ತಿಂಗಳ ಕಾಲ ಏನೂ ಚಟುವಟಿಕೆ ನಡೆದವರು, ಚಾರ್ಜ್‍ಶೀಟ್ ಮಾಡದವರು, ಈಗ ರಾಹುಲ್ ಗಾಂಧಿ ಮತ್ತು ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ಏಕಾಏಕಿ ಅವರನ್ನು ಬಂಧಿಸಲು ಸರಕಾರ ಮುಂದಾಗಿತ್ತು. ಸರಕಾರ ತನ್ನ ಹುಳುಕುಗಳನ್ನು ಮುಚ್ಚಿಹಾಕಲು ಈ ಷಡ್ಯಂತ್ರ ಮಾಡಿತ್ತು ಎಂಬುದಕ್ಕೆ ಯಾವುದೇ ಅನುಮಾನ ಬೇಡ ಎಂದು ನುಡಿದರು. ಈ ಸರಕಾರದ ಕೆಟ್ಟ ಉದ್ದೇಶವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಹೈಕೋರ್ಟಿನ ಆದೇಶವನ್ನು ಬಿಜೆಪಿ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ತಿಳಿಸಿದರು.

Read More
Next Story