
ಸಾಂದರ್ಭಿಕ ಚಿತ್ರ
ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು
ತನಗೆ ಮದುವೆ ಇಷ್ಟವಿಲ್ಲ ಎಂದು ಮದುಮಗಳು ಹೇಳಿದ್ದಾರೆ. ಹುಡುಗಿಯ ಪೋಷಕರು, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ, 'ನಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ' ಮದುಮಗಳು ಹೇಳಿದ್ದಾಳೆ.
ಹಾಸನ ಜಿಲ್ಲೆಯಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದ್ದು, ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವಧು ಮದುವೆಗೆ ನಿರಾಕರಿಸಿದ್ದಾಳೆ. ತಾನು ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಮತ್ತು ಆತನನ್ನೇ ಮದುವೆಯಾಗುವುದಾಗಿ ವಧು ಹೇಳಿದ್ದು, ಗೊಂದಲಕ್ಕೆ ಕಾರಣವಾಗಿ ಮದುವೆಯೇ ನಿಂತು ಹೋಗಿದೆ.
ಮದುವೆ ಸಮಾರಂಭದಲ್ಲಿ ಮಂತ್ರಘೋಷಗಳು ಮೊಳಗುತ್ತಿದ್ದಂತೆ ಮತ್ತು ಗಟ್ಟಿಮೇಳದ ಸಿದ್ಧತೆಯೊಂದಿಗೆ ವರನು ತಾಳಿ ಕಟ್ಟಲು ಸಜ್ಜಾಗಿದ್ದ. ಆದರೆ, ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಪ್ರಿಯಕರನ ಮೊಬೈಲ್ ಕರೆ ಬಂದಿದ್ದು, ವಧು ಮದುವೆಗೆ ನಿರಾಕರಿಸಿದ್ದಾರೆ.
ವರನು ವಧುವಿಗೆ "ನಿಜವಾಗಿಯೂ ಮದುವೆ ಇಷ್ಟವಿದೆಯಾ?" ಎಂದು ಹಲವು ಬಾರಿ ಪ್ರಶ್ನಿಸಿದ್ದಾನೆ. ಆದರೆ ವಧು, ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಹುಡುಗಿಯ ಪೋಷಕರು ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸಿದಾಗ, ತಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ವಧು ಸ್ಪಷ್ಟಪಡಿಸಿದ್ದಾಳೆ. ಮದುವೆ ಬೇಡ ಎಂದು ಹಸಮಣೆಯಿಂದ ಎದ್ದು ನಿಂತ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನಲ್ಲಿ ಹೊರಟು ಹೋಗಿದ್ದಾಳೆ. ಇದರಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.