
ಲಂಚದ ವಿಡಿಯೋ ವಿವಾದ | ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ ?
ಈ ವೇಳೆ ಪ್ರಕರಣಕ್ಕೆ ಸ್ಪಷ್ಟನೆ ಕೊಡಲು ಮುಂದಾದ ರವಿಕುಮಾರ್ ಅವರಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದು, ಮೊದಲು ರಾಜೀನಾಮೆ ಕೊಡಿ, ಆ ಬಳಿಕ ಮಾತನಾಡೋಣ ಎಂದು ಸ್ಪಷ್ಟನುಡಿಗಳಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಕಮಿಷನ್ ಕೇಳುವ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿವೆ.
ಕಮಿಷನ್ ಆರೋಪದ ವಿಡಿಯೋ ರಾಜಕೀಯವಾಗಿಯೂ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿ ಸರ್ಕಾರಕ್ಕೆ ಮುಜುಗರ ಎದುರಾಗಿದೆ. ಹಾಗಾಗಿ ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಪ್ರಕರಣಕ್ಕೆ ಸ್ಪಷ್ಟನೆ ಕೊಡಲು ಮುಂದಾದ ರವಿಕುಮಾರ್ ಅವರಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದು, ಮೊದಲು ರಾಜೀನಾಮೆ ಕೊಡಿ, ಆ ಬಳಿಕ ಮಾತನಾಡೋಣ ಎಂದು ಸ್ಪಷ್ಟನುಡಿಗಳಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್.ರವಿಕುಮಾರ್ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ನಿಗಮ ಸ್ಥಾಪಿಸಿ, ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದೆ. ನಿಗಮದ ಅಧ್ಯಕ್ಷರನ್ನಾಗಿ ಎಸ್. ರವಿಕುಮಾರ್ ಅವರನ್ನು ಕಳೆದ ವರ್ಷ ನೇಮಿಸಲಾಗಿತ್ತು.
ಇತ್ತೀಚೆಗೆ ನಿಗಮದ ಕಚೇರಿಯಲ್ಲೇ ಯೋಜನೆ ಅನುಮೋದನೆಗಾಗಿ ಕಮಿಷನ್ ಕುರಿತು ಮಾತನಾಡಿರುವ ಹಾಗೂ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಲಂಚದ ಹಣ ಸ್ವೀಕರಿಸಿರುವ ವಿಡಿಯೋವನ್ನು ಸೋಮವಾರ ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ ಬಿಡುಗಡೆ ಮಾಡಿದ್ದರು. ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜಕೀಯದಲ್ಲಿ ಸಂಚಲನ
ವಿಡಿಯೋ ಬಹಿರಂಗ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಥಮಿಕ ಮಾಹಿತಿ ಪಡೆದಿದ್ದು, ವಿಷಯವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎನ್ನಲಾಗಿದೆ.
ರವಿಕುಮಾರ್ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ನಿರೀಕ್ಷೆಇದೆ. ಪಕ್ಷದ ಒಳಗೆ ಹಲವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಧಕ್ಕೆ ತರುವ ಸಂಭವ ಇದೆ. ಹಾಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಹಿಂದಿರುಗಿದ ನಂತರ ಈ ಕುರಿತು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.