
ಜಮೀರ್ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ: ಯೋಜನಾ ಆಯೋಗದ ಉಪಾಧ್ಯಕ್ಷ ಪಾಟೀಲ್ ಗಂಭೀರ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಹಾಗೂ ಸಚಿವ ಜಮೀರ್ ಅವರ ವಸತಿ ಇಲಾಖೆಯಲ್ಲೇ ಮನೆಗಳ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ವಾಸನೆ ಬಡಿದಿದೆ. ಈ ಬಗ್ಗೆ ಸಿದ್ದರಾಮಯ್ಯ ಆಪ್ತರೇ ಆಗಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರ ವಸತಿ ಇಲಾಖೆಯಲ್ಲೇ ಮನೆಗಳ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ವಾಸನೆ ಬಡಿದಿದೆ.
ಈ ಬಗ್ಗೆ ಸಿದ್ದರಾಮಯ್ಯ ಅವರ ಇನ್ನೊಬ್ಬ ಆಪ್ತ ಶಾಸಕ, ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಹಿರಿಯ ನಾಯಕ ಬಿ.ಆರ್. ಪಾಟೀಲ್ ಅವರೇ ಸ್ವತಃ ಆರೋಪ ಮಾಡಿದ್ದಾರೆ ಎನ್ನಲಾಗಿ, ಸರ್ಕಾರಕ್ಕೆ ತೀರಾ ಮುಜುಗರ ಸೃಷ್ಟಿಸಿದೆ.
ಈ ಸಂಬಂಧ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಬಿ.ಆರ್. ಪಾಟೀಲ್ ಅವರದ್ದೇ ಎನ್ನಲಾದ ಧ್ವನಿಯಿಂದ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಸರ್ಫರಾಜ್ ಖಾನ್ ಎಂಬವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಹಲವು ಹಗರಣಗಳ ಆರೋಪಗಳಿಂದ ಮುಜುಗರಕ್ಕೆ ಒಳಗಾಗುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಇನ್ನೊಂದು ಗಂಭೀರ ಆರೋಪದಿಂದ ಮತ್ತಷ್ಟು ಮುಜುಗರ ಸೃಷ್ಟಿಯಾದಂತಾಗಿದೆ. ಇದು ಈಗ ವಿರೋಧ ಪಕ್ಷಗಳ ವ್ಯಾಪಕ ಟೀಕೆಗೂ ಒಳಗಾಗಿದೆ.
ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಖುದ್ದು ಆರೋಪ ಮಾಡಿದ ಕಾಂಗ್ರೆಸ್ ನ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಲಂಚ ಪಡೆಯುತ್ತಿರುವ ವ್ಯಕ್ತಿಗಳ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಒಂದಿಲ್ಲೊಂದು ಕಾರಣಕ್ಕೆ ಸರ್ಕಾರವನ್ನು ಪಾಟೀಲ್ ಅವರು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ರಚನೆಯಾದ ಕೆಲ ತಿಂಗಳಲ್ಲೇ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿ.ಆರ್ ಪಾಟೀಲ್, ಅ ಬಗ್ಗೆ ತಮ್ಮ ಲೆಟರ್ಹೆಡ್ನಲ್ಲಿಯೇ ಸುಮಾರು ೫೦ಕ್ಕೂ ಹೆಚ್ಚು ಶಾಸಕರ ಸಹಿ ಹಾಕಿಸಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಮೂಲಕ ಶಾಸಕಾಂಗ ಸಭೆ ಕರೆಯದೆ ಕ್ಷೇತ್ರಗಳನ್ನು ಕೆಲವು ಸಚಿವರು ಅವಗಣನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ಸಿಎಂ ಸಲಹೆಗಾರ
ಅದಾದ ಬಳಿಕ ಬಿ.ಅರ್. ಪಾಟೀಲ್ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಸಲಹೆಗಾರನಾಗಿ ನೇಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಬಹಿರಂಗ ಅಕ್ರೋಶ ವ್ಯಕ್ತಪಡಿಸಿದ್ದ ಪಾಟೀಲ್ ಅವರು ವಿಧಾನಸಭೆ ಅಧಿವೇಶನದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಹಾಗೂ ತಾವು ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪತ್ರ ಬರೆದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅವರನ್ನು ಸಿದ್ದರಾಮಯ್ಯ ನಿಯುಕ್ತಿಗೊಳಿಸಿದ್ದರು. ಈಗ ವಸತಿ ಖಾತೆಯಲ್ಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿರುವ ಆಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.
ಆಡಿಯೋದಲ್ಲೇನಿದೆ?
ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ಕೊಟ್ಟವರಿಗಷ್ಟೇ ಮನೆ ಹಂಚಿಕೆಯಾಗುತ್ತಿದೆ. ಸ್ವತಹ ಬಿ.ಅರ್. ಪಾಟೀಲ್ ಅವರ ಶಿಫಾರಸು ಪತ್ರಗಳಿಗೆ ಬೆಲೆ ನೀಡದ ವಸತಿ ಇಲಾಖೆ, ಗ್ರಾಮ ಪಂಚಾಯತಿ ಅಧ್ಯಕ್ಷರು ಕೊಟ್ಟ ವಸತಿ ನಿಲಯದ ಶಿಫಾರಸು ಪತ್ರಕ್ಕೆ ಬೆಲೆ ನೀಡಲಾಗಿದೆ ಎಂದು ದೂರವಾಣಿ ಕರೆಯಲ್ಲಿ ಪಾಟೀಲ್ ಆರೋಪಿಸಿದ್ದಾರೆ.
ಆಳಂದ (ಬಿ.ಅರ್. ಪಾಟೀಲ್ ಕ್ಷೇತ್ರ) ಮತಕ್ಷೇತ್ರದ ಮುನ್ನಳ್ಳಿಯಲ್ಲಿ 200 ಮನೆ ಹಿತ್ತಲ ಶಿರೂರದಲ್ಲಿ 100 , ದಂಗಾಪುರದಲ್ಲಿ 200 ಮನೆ ಕವಲಗಾ ಹಾಗೂ ಮಾಡಿಯಾಳದಲ್ಲಿ ತಲಾ 200 ಮನೆ ಸೇರಿದಂತೆ 950ಮನೆಗಳನ್ನು ಲಂಚ ಪಡೆದು ನೀಡಿರುವ ಗಂಭೀರ ಆರೋಪವನ್ನೂ ಪಾಟೀಲ್ ಮಾಡಿದ್ದಾರೆ. "ಮನೆ ಮಂಜೂರು ಮಾಡಿರುವ ಮಾಹಿತಿ ವಹಿರಂಗ ಪಡಿಸಿದ್ರೆ ಸರ್ಕಾರವೆ ಅಲ್ಲಾಡುತ್ತೆ," ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಆರ್. ಅಶೋಕ್ ಆಗ್ರಹ
ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅವರು ಅಧಿಕಾರದಲ್ಲಿ ಮುಂದುವರಿಬಾರದು. ಸಿಎಂ ಸಿದ್ದರಾಮಯ್ಯ ಈ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಅವರು ತಮ್ಮ 'ಎಕ್ಸ್' (ಹಿಂದೆ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಬಿ.ಆರ್. ಪಾಟೀಲ್ ಅವರ ಮೊಬೈಲ್ ಕರೆ ಆಡಿಯೋ ಆಧಾರದ ಮೇಲೆ, ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ "ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದು, ತಮ್ಮಲ್ಲಿರುವ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗಪಡಿಸಿದರೆ ಸರ್ಕಾರವೇ ಅಲ್ಲಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚಗುಳಿತನದ ಬಗ್ಗೆ ಬಿ. ಆರ್ ಪಾಟೀಲ್, ತಮಗಿರುವ ಮಾಹಿತಿಯನ್ನು ಬಹಿರಂಗಪಡಿಸಬೇಕು ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ವಿಷಯದಲ್ಲಿ ರಾಜ್ಯ ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.