Lokayukta Trap | ಆರೋಪಿಗಳ ಬಂಧನಕ್ಕೂ ಲಂಚ; ಲೋಕಾಯುಕ್ತ ಬಲೆಗೆ ಬಿದ್ದ  ಸೈಬರ್‌ ಠಾಣೆ ಎಸಿಪಿ, ಎಎಸ್‌ಐ
x

Lokayukta Trap | ಆರೋಪಿಗಳ ಬಂಧನಕ್ಕೂ ಲಂಚ; ಲೋಕಾಯುಕ್ತ ಬಲೆಗೆ ಬಿದ್ದ ಸೈಬರ್‌ ಠಾಣೆ ಎಸಿಪಿ, ಎಎಸ್‌ಐ

ಮಂಗಳವಾರ ರಾತ್ರಿ ಆರ್.ಟಿ. ನಗರದ ನಿರ್ಜನ ಸ್ಥಳದಲ್ಲಿ ದೂರುದಾರರಿಂದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿ ಎಎಸ್ಐ ಕೃಷ್ಣಮೂರ್ತಿ ಅವರನ್ನು ಬಂಧಿಸಿದರು. ತಡರಾತ್ರಿ ಎಸಿಪಿ ತನ್ವೀರ್ ಮನೆಗೆ ನುಗ್ಗಿ ಅವರನ್ನೂ ಬಂಧಿಸಿದರು.


ಖಾಸಗಿ ಕಂಪನಿಯ ವೆಬ್‌ಸೈಟ್‌ ಹ್ಯಾಕ್ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು ಅಂತಿಮವಾಗಿ 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ (Cybercrime, Economic Offences, and Narcotics) ಪೊಲೀಸ್ ಠಾಣೆ ಎಸಿಪಿ ತನ್ವೀರ್ ಎಸ್.ಆರ್. ಹಾಗೂ ಎಎಸ್ಐ ಕೃಷ್ಣಮೂರ್ತಿ ಅವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಅದ್ವಿ ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ವೆಬ್‌ಸೈಟ್‌ ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಅದರಲ್ಲಿನ ಮಾಹಿತಿ ತಿರುಚಿದ್ದರು. ಇದರಿಂದ ಕಂಪನಿಗೆ ಸಾಕಷ್ಟು ನಷ್ಟ ಉಂಟಾಗಿತ್ತು. ವೆಬ್‌ಸೈಟ್‌ ಹ್ಯಾಕ್ ಆಗಿರುವ ಕುರಿತು ಕಂಪನಿ ಮಾಲೀಕ ಮಧುಸೂದನ್ ಬಿ.ಎಸ್. ಅವರು ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಮಧುಸೂದನ್ ಅವರು ಸಾಕಷ್ಟು ಬಾರಿ ಮನವಿ ಮಾಡಿದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ.

ಈಚೆಗೆ ಪೊಲೀಸರ ಬಳಿ ಬಂದ ಮಧುಸೂದನ್ ಅವರು ಪ್ರಕರಣ ಕುರಿತು ವಿಚಾರಿಸಿದಾಗ ಆರೋಪಿಗಳನ್ನು ಬಂಧಿಸಲು 4 ಲಕ್ಷ ಲಂಚ ನೀಡುವಂತೆ ಎಸಿಪಿ ಮತ್ತು ಎಎಸ್ಐ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 2 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದರು. ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಧುಸೂದನ್ ಅವರು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2ಕ್ಕೆ ದೂರು ಸಲ್ಲಿಸಿದ್ದರು.

2 ಲಕ್ಷ ರೂ. ಲಂಚದ ಹಣವನ್ನು ಎಎಸ್ಐ ಬಳಿ ನೀಡುವಂತೆ ಎಸಿಪಿ ತನ್ವೀರ್ ಸೂಚಿಸಿದ್ದರು. ಅದರಂತೆ ಮಂಗಳವಾರ ರಾತ್ರಿ ಆರ್.ಟಿ. ನಗರದ ನಿರ್ಜನ ಸ್ಥಳದಲ್ಲಿ ದೂರುದಾರರಿಂದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿ ಎಎಸ್ಐ ಕೃಷ್ಣಮೂರ್ತಿ ಅವರನ್ನು ಬಂಧಿಸಿದರು. ತಡರಾತ್ರಿ ಎಸಿಪಿ ತನ್ವೀರ್ ಮನೆಗೆ ನುಗ್ಗಿ ಅವರನ್ನೂ ಬಂಧಿಸಿದರು.

ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿ, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More
Next Story