ʻಜೂ.1ರಿಂದ ರಾಜ್ಯದಲ್ಲಿ ಡಿಎಲ್ ಹೊಸ ನಿಯಮ ಜಾರಿʼ ವದಂತಿಗೆ ಬ್ರೇಕ್
ಚಾಲನಾ ಪರವಾನಗಿ (ಡಿಎಲ್) ಪಡೆಯುವುದು, ವಾಹನ ಚಾಲನಾ ಪರೀಕ್ಷೆ ಹಾಗೂ ಚಾಲನಾ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾರಿಗೆ ತಂದಿರುವ ಹೊಸ ನಿಯಮಾವಳಿಯು ರಾಜ್ಯದಲ್ಲಿ ಸದ್ಯಕ್ಕೆ ಜಾರಿಯಾಗುವುದಿಲ್ಲ. ಹೊಸ ನಿಯಮಾವಳಿ ಜಾರಿ ಸಂಬಂಧ ಸಚಿವಾಲಯದಿಂದ ರಾಜ್ಯದ ಸಾರಿಗೆ ಇಲಾಖೆಗೆ ಈವರೆಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ, ಹಿಂದಿನಂತೆಯೇ ಆರ್‌ಟಿಒ ಕಚೇರಿಗಳಲ್ಲೇ ಡಿ.ಎಲ್ ನೀಡಿಕೆ ಮತ್ತು ವಾಹನ ಚಾಲನಾ ಪರೀಕ್ಷೆ ನಡೆಯಲಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತ ಎಎಂ ಯೋಗೀಶ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ವೈರಲ್
ಜೂ.1ರ ನಂತರ ವಾಹನ ಚಾಲನಾ ತರಬೇತಿ ಕೇಂದ್ರಗಳೇ ಡಿ.ಎಲ್. ನೀಡುತ್ತವೆ. ಡಿ.ಎಲ್‌ಗಾಗಿ ಸಾರ್ವಜನಿಕರು ಆರ್‌ಟಿಒ ಕಚೇರಿಗಳಿಗೆ ಹೋಗಬೇಕಿಲ್ಲ. ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದೆ. ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಕಟವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಆಯುಕ್ತ ಎಎಂ ಯೋಗೀಶ್ ಅವರು, ʻʻಚಾಲನಾ ತರಬೇತಿ ಕೇಂದ್ರಗಳು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನಷ್ಟೇ ನೀಡುತ್ತವೆ. ಆ ಪ್ರಮಾಣಪತ್ರಗಳ ಆಧಾರದಲ್ಲಿ ಆರ್‌ಟಿಒ ಕಚೇರಿಗಳಲ್ಲಿ ಡಿ.ಎಲ್. ನೀಡಲಾಗುತ್ತದೆ. ಡಿ.ಎಲ್. ನೀಡಿಕೆ ವಿಚಾರದಲ್ಲಿ ಆರ್‌ಟಿಒಗೆ ಇರುವ ಅಧಿಕಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲʼʼ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೊಸ ಆದೇಶ ಹೇಳೋದೇನು?
ʻʻಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳೇ ಚಾಲನಾ ಪರೀಕ್ಷೆ ನಡೆಸಲಿವೆ. ಪರೀಕ್ಷೆಯಲ್ಲಿಉತ್ತೀರ್ಣರಾದವರಿಗೆ ಆಯಾ ಕೇಂದ್ರಗಳೇ ಪ್ರಮಾಣಪತ್ರ ನೀಡಲಿವೆ. ಸಾರ್ವಜನಿಕರು ಡಿ.ಎಲ್.ಗೆ ಅರ್ಜಿ ಹಾಕುವಾಗ ಆ ಪ್ರಮಾಣಪತ್ರ ಸಲ್ಲಿಸಿದರೆ, ಆರ್‌ಟಿಒ ಕಚೇರಿಗಳಲ್ಲಿಮತ್ತೆ ಚಾಲನಾ ಪರೀಕ್ಷೆಗೆ ಹಾಜರಾಗಬೇಕಿಲ್ಲ.ʼʼ
ʻʻಖಾಸಗಿ ವ್ಯಕ್ತಿಗಳು, ಸ್ವಯಂಸೇವಾ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ವಾಹನ ಉತ್ಪಾದನಾ ಕಂಪನಿಗಳು ಅಥವಾ ಯಾವುದೇ ಕಂಪನಿಯೂ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರೀಕ್ಷಾ ಕೇಂದ್ರವನ್ನು ಆರಂಭಿಸಬಹುದು. ಒಂದು ಕಂಪನಿಯು ರಾಜ್ಯವೊಂದರಲ್ಲಿಗರಿಷ್ಠ ಐದು ಕೇಂದ್ರಗಳನ್ನಷ್ಟೇ ತೆರೆಯಬಹುದು. ಕೇಂದ್ರಗಳನ್ನು ತೆರೆಯಲು ಕಡ್ಡಾಯವಾಗಿ ಕೆಲ ಮೂಲಸೌಕರ್ಯಗಳನ್ನು ಹೊಂದಿರಬೇಕೆಂದು ಸಚಿವಾಲಯ ಷರತ್ತು ವಿಧಿಸಿದೆ.ʼʼ
ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿವೆ. ಅದರಂತೆ ಡಿ.ಎಲ್ ನೀಡಿಕೆ, ವಾಹನ ಚಾಲನಾ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿಸದ್ಯ ಆರ್‌ಟಿಒ ಕಚೇರಿಗಳಲ್ಲೇ ಡಿ.ಎಲ್.ಗೆ ಅರ್ಜಿ ಮತ್ತು ಪೂರಕ ದಾಖಲೆಪತ್ರಗಳನ್ನು ಪಡೆದು ವಾಹನ ಚಾಲನಾ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿಇಲಾಖೆಯ ಮಾನ್ಯತೆ ಪಡೆದ ಅಧಿಕೃತ ಚಾಲನಾ ತರಬೇತಿ ಮತ್ತು ಚಾಲನಾ ಪರೀಕ್ಷಾ ಕೇಂದ್ರಗಳೇ ಇಲ್ಲ. ಹೀಗಾಗಿ, ಸದ್ಯಕ್ಕೆ ನೂತನ ವ್ಯವಸ್ಥೆ ಜಾರಿ ಸಾಧ್ಯವಿಲ್ಲ,'' ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರದ ಈ ಸಾರಿಗೆ ನೀತಿ ನಿಯಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳಿಗೆ ಸಮಾನ ಅಧಿಕಾರವಿದೆ. ಕೇಂದ್ರವು ಸಾರಿಗೆಗೆ ಸಂಬಂಧಿಸಿದಂತೆ ಯಾವುದೇ ನಿಯಮ ರೂಪಿಸಿದರೂ, ಅದು ದೇಶದೆಲ್ಲೆಡೆ ಏಕಕಾಲಕ್ಕೆ ಜಾರಿಯಾಗುವುದಿಲ್ಲ. ಪ್ರತಿ ರಾಜ್ಯ ಸರಕಾರ ಪ್ರತ್ಯೇಕವಾಗಿ ಆದೇಶ ಹೊರಡಿಸಿದರಷ್ಟೇ ಕೇಂದ್ರದ ನಿಯಮಗಳು ರಾಜ್ಯದಲ್ಲೂ ಜಾರಿಯಾಗುತ್ತವೆ. ಅಗತ್ಯ ಸಂದರ್ಭಗಳಲ್ಲಿರಾಜ್ಯ ಸರಕಾರಗಳು ಕೇಂದ್ರದ ನಿಯಮಗಳಿಗೆ ಬದಲಾವಣೆ ತರುವ ಅವಕಾಶವೂ ಇದೆ. ಇದು ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆ.