
ಸಾಂದರ್ಭಿಕ ಚಿತ್ರ
ದಿನಸಿ ಡೆಲಿವರಿಗೆ ಬಂದವನಿಂದ ಬ್ರೆಜಿಲ್ ಮಾಡೆಲ್‌ಗೆ ಲೈಂಗಿಕ ಕಿರುಕುಳ; ಬಂಧನ
ನಗರದ ಖಾಸಗಿ ಕಂಪನಿಯೊಂದರಲ್ಲಿ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿರುವ 21 ವರ್ಷದ ಸಂತ್ರಸ್ತೆ, ಅಕ್ಟೋಬರ್ 17ರಂದು ಆರ್‌ಟಿ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಡೆಲಿವರಿ ಆ್ಯಪ್ ಮೂಲಕ ದಿನಸಿ ಆರ್ಡರ್ ಮಾಡಿದ್ದರು.
ನಗರದಲ್ಲಿ ದಿನಸಿ ವಸ್ತುಗಳನ್ನು ಡೆಲಿವರಿ ಮಾಡಲು ಬಂದ ಯುವಕನೊಬ್ಬ, ಫ್ಲ್ಯಾಟ್‌ನಲ್ಲಿ ಒಂಟಿಯಾಗಿದ್ದ ಬ್ರೆಜಿಲ್ ಮೂಲದ ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಡಿಪ್ಲೊಮಾ ವಿದ್ಯಾರ್ಥಿಯನ್ನು ಆರ್‌ಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನ ವಿದ್ಯಾರ್ಥಿ ಕುಮಾರ್ ರಾವ್ ಪವಾರ್ (21) ಬಂಧಿತ ಆರೋಪಿ. ಈತ ಆನ್‌ಲೈನ್ ದಿನಸಿ ಡೆಲಿವರಿ ಸಂಸ್ಥೆ ‘ಬ್ಲಿಂಕಿಟ್’ನಲ್ಲಿ (Blinkit) ಅರೆಕಾಲಿಕ ಉದ್ಯೋಗಿಯಾಗಿದ್ದ.
ನಗರದ ಖಾಸಗಿ ಕಂಪನಿಯೊಂದರಲ್ಲಿ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿರುವ 21 ವರ್ಷದ ಸಂತ್ರಸ್ತೆ, ಅಕ್ಟೋಬರ್ 17ರಂದು ಆರ್‌ಟಿ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಡೆಲಿವರಿ ಆ್ಯಪ್ ಮೂಲಕ ದಿನಸಿ ಆರ್ಡರ್ ಮಾಡಿದ್ದರು. ಮಧ್ಯಾಹ್ನ ಸುಮಾರು 3.20ಕ್ಕೆ ದಿನಸಿ ತಲುಪಿಸಲು ಬಂದ ಆರೋಪಿ ಕುಮಾರ್, ಫ್ಲ್ಯಾಟ್‌ನಲ್ಲಿ ರೂಪದರ್ಶಿ ಒಬ್ಬರೇ ಇರುವುದನ್ನು ಗಮನಿಸಿದ್ದಾನೆ.
ಈ ಸಂದರ್ಭದಲ್ಲಿ ಆಕೆಯನ್ನು ಮಾತಿಗೆಳೆದು, ಅನುಚಿತವಾಗಿ ವರ್ತಿಸಿ ಆಕೆಯ ದೇಹವನ್ನು ಸ್ಪರ್ಶಿಸಲು ಯತ್ನಿಸಿದ್ದಾನೆ. ಆತನ ವರ್ತನೆಯಿಂದ ಆತಂಕಗೊಂಡ ರೂಪದರ್ಶಿ, ಕಿರುಚಿಕೊಂಡು ತಕ್ಷಣವೇ ಬಾಗಿಲು ಹಾಕಿಕೊಂಡಿದ್ದಾರೆ. ತಕ್ಷಣವೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬಂಧನ ಮತ್ತು ತನಿಖೆ
ಭಯದಿಂದ ಕೂಡಲೇ ವಿಷಯ ತಿಳಿಸದ ಸಂತ್ರಸ್ತೆ, ಕೆಲವು ದಿನಗಳ ನಂತರ ತನ್ನ ಉದ್ಯೋಗದಾತರಿಗೆ ಮಾಹಿತಿ ನೀಡಿದ್ದಾರೆ. ಅವರು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಕ್ಟೋಬರ್ 25ರಂದು ಆರ್‌ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತಾದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕುಮಾರ್‌ನನ್ನು ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ, ‘ಬ್ಲಿಂಕಿಟ್’ ಸಂಸ್ಥೆಯು ಆರೋಪಿಯನ್ನು ಕೆಲಸದಿಂದ ವಜಾಗೊಳಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪೊಲೀಸರಿಗೆ ತಿಳಿಸಿದೆ.

