
ಸಾಂದರ್ಭಿಕ ಚಿತ್ರ
ಬಾಲ್ಯವಿವಾಹಕ್ಕೆ ಬಲಿಯಾಗದೆ, ಠಾಣೆ ಮೆಟ್ಟಿಲೇರಿದ ಬಾಲಕಿ: ಸ್ವಂತ ಮದುವೆ ತಡೆದ ದಿಟ್ಟ ವಿದ್ಯಾರ್ಥಿನಿ
ತಾನು 8ನೇ ತರಗತಿಯಲ್ಲಿದ್ದಾಗ ಶಾಲೆಗೆ ಭೇಟಿ ನೀಡಿದ್ದ ಪೊಲೀಸ್ ಸಿಬ್ಬಂದಿ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ನೀಡಿದ್ದ ಜಾಗೃತಿ ಮಾಹಿತಿ ನೆನಪಿಸಿಕೊಂಡ ಬಾಲಕಿ, ನೇರವಾಗಿ ಪೊಲೀಸ್ ಠಾಣೆಗೆ ಬಂದು ತನ್ನ ಅಳಲು ತೋಡಿಕೊಂಡಿದ್ದಾಳೆ.
ತನಗಿಂತ ಹೆಚ್ಚು ವಯಸ್ಸಿನ ವಿಧುರನೊಂದಿಗೆ ಪೋಷಕರೇ ನಿಶ್ಚಯಿಸಿದ್ದ ಬಾಲ್ಯವಿವಾಹವನ್ನು ವಿರೋಧಿಸಿ, 16 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ ಅಪರೂಪದ ಮತ್ತು ಸ್ಪೂರ್ತಿದಾಯಕ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಡೆದಿದೆ.
ತಾನು 8ನೇ ತರಗತಿಯಲ್ಲಿದ್ದಾಗ ಶಾಲೆಗೆ ಭೇಟಿ ನೀಡಿದ್ದ ಪೊಲೀಸ್ ಸಿಬ್ಬಂದಿ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ನೀಡಿದ್ದ ಜಾಗೃತಿ ಮಾಹಿತಿ ನೆನಪಿಸಿಕೊಂಡ ಬಾಲಕಿ, ನೇರವಾಗಿ ಪೊಲೀಸ್ ಠಾಣೆಗೆ ಬಂದು ತನ್ನ ಅಳಲು ತೋಡಿಕೊಂಡಿದ್ದಾಳೆ. "ನನಗೆ ಈಗ ಮದುವೆಯಾಗಲು ಇಷ್ಟವಿಲ್ಲ. ಆದರೆ ನಮ್ಮ ತಂದೆ-ತಾಯಿ ಮತ್ತು ಅಣ್ಣ ಸೇರಿ, ಇತ್ತೀಚೆಗೆ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಆಗಸ್ಟ್ 17ರಂದು ನನ್ನನ್ನು ಕೊಟ್ಟು ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅವರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ," ಎಂದು ಠಾಣೆಯಲ್ಲಿ ವಿವರಿಸಿದ್ದಾಳೆ.
ದೂರು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ನವೀನ್ ಕುಮಾರ್, ಬಾಲಕಿಯ ಪೋಷಕರನ್ನು ಮತ್ತು ಸಹೋದರನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಆರೋಪವನ್ನು ನಿರಾಕರಿಸಿದರೂ, ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪೊಲೀಸರಿಂದ ಶ್ಲಾಘನೆ
"ಗ್ರಾಮೀಣ ಭಾಗಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುವ ಬಾಲ್ಯವಿವಾಹಗಳ ವಿರುದ್ಧ ಇತ್ತೀಚೆಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಈ ಬಾಲಕಿ ಒಬ್ಬಳೇ ಧೈರ್ಯವಾಗಿ ಠಾಣೆಗೆ ಬಂದಿದ್ದು ನಮಗೆ ಹೆಮ್ಮೆ ತಂದಿದೆ. ಆಕೆಯ ದಿಟ್ಟತನವು ಸಮಾಜಕ್ಕೆ ಮಾದರಿಯಾಗಿದೆ," ಎಂದು ಚಳ್ಳಕೆರೆ ಡಿವೈಎಸ್ಪಿ ಡಿ. ರಾಜಣ್ಣ ಶ್ಲಾಘಿಸಿದ್ದಾರೆ.
ಬಾಲಕಿಯ ದೂರಿನಲ್ಲಿ ಸತ್ಯಾಂಶವಿರುವುದು ಖಚಿತವಾದ ಹಿನ್ನೆಲೆಯಲ್ಲಿ, ಆಕೆಯನ್ನು ಮತ್ತು ಪೋಷಕರನ್ನು ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಬಾಲಕಿಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ಆಕೆಯನ್ನು ಬಾಲಮಂದಿರಕ್ಕೆ ಸೇರಿಸಲಾಗುವುದು ಎಂದು ಸಿಡಿಪಿಒ ನವೀನ್ ಕುಮಾರ್ ತಿಳಿಸಿದ್ದಾರೆ.