Brand Shivamogga | ಕೋಮು ಸಂಘರ್ಷದ ನೆಲದಲ್ಲಿ ಸಹಬಾಳ್ವೆಯ ಹಾಡು
x

Brand Shivamogga | ಕೋಮು ಸಂಘರ್ಷದ ನೆಲದಲ್ಲಿ ಸಹಬಾಳ್ವೆಯ ಹಾಡು

ಇಡೀ ಜಿಲ್ಲೆಯಲ್ಲಿ ಈ ಬಾರಿ ಹಬ್ಬದ ಹಂಗಾಮ ಶಾಂತಿ ಮತ್ತು ಸೌಹಾರ್ದದ ಸಂಭ್ರಮವಾಗಿ ಬದಲಾಗಿದೆ. ಸಹಬಾಳ್ವೆಯ ಸುಗ್ಗಿಯಾಗಿ ಹೊರಹೊಮ್ಮಿದೆ. ಕೋಮು ಸಂಘರ್ಷದ ನೆಲದಲ್ಲಿ ಈಗ ಸಹಬಾಳ್ವೆಯ ಹಾಡು ಕೇಳತೊಡಗಿದೆ.


ಕೆಲವೇ ವರ್ಷಗಳ ಹಿಂದೆ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳು ಬಂದವೆಂದರೆ ಇಡೀ ರಾಜ್ಯದ ಗಮನ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದತ್ತ ನೆಟ್ಟಿರುತ್ತಿತ್ತು. ಹಾಗೇ, ಕಳೆದ ಮೂರು ವರ್ಷಗಳಿಂದ ಕೂಡ ಶಿವಮೊಗ್ಗ ರಾಜ್ಯದ ಗಮನ ಸೆಳೆಯುತ್ತಿದೆ; ಆದರೆ ಈಗ ಒಳ್ಳೆಯ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ ಎಂಬುದು ವಿಶೇಷ.

ಹೌದು, ತೀರಾ ಇತ್ತೀಚಿನವರೆಗೂ ಗಣೇಶೋತ್ಸವ ಬಂತೆಂದರೆ ಶಿವಮೊಗ್ಗ ನಗರ ಮಾತ್ರವಲ್ಲದೆ ಇಡೀ ಜಿಲ್ಲೆಯಾದ್ಯಂತ ಜನಸಾಮಾನ್ಯರಲ್ಲಿ ಏನೋ ಆತಂಕ, ದಿಗಿಲು ಆವರಿಸುತ್ತಿತ್ತು. ಅದರಲ್ಲೂ ಶಿವಮೊಗ್ಗದ ಪ್ರಖ್ಯಾತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಎಂದರೆ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಖಾಕಿ ಸರ್ಪಗಾವಲು ಮೆರೆಯುತ್ತಿತ್ತು. ಬಿಗಿ ಬಂದೋಬಸ್ತಿನ ನಡುವೆಯೂ ಗಲಭೆ ಹೊತ್ತಿ ಉರಿದು ಊರು ತಿಂಗಳುಗಟ್ಟಲೆ ಕರ್ಫ್ಯೂ, ಕೊಲೆ, ದೊಂಬಿ, ದಾಳಿಗಳಲ್ಲಿ ನಲುಗಿ ಹೋಗುತ್ತಿತ್ತು.

ಹಿಂದೂ- ಮುಸ್ಲಿಂ ಸಮುದಾಯದ ಹೆಸರಲ್ಲಿ ರಾಜಕೀಯ ಹಿತಾಸಕ್ತಿಯ ಕಿಡಿಗೇಡಿಗಳು ಮತ್ತು ಧರ್ಮಾಂಧ ಮತೀಯ ಶಕ್ತಿಗಳು ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಸಂಭ್ರಮದ ಹೊತ್ತಿಗೇ ಹೊಂಚು ಹಾಕುತ್ತಿದ್ದ ದಿನಗಳಿದ್ದವು. ಹಾಗಾಗಿಯೇ ಗಣೇಶೋತ್ಸವ ಮತ್ತು ಈದ್ ಎಂದರೆ ಶಿವಮೊಗ್ಗದ ಜನತೆಗೆ ಆತಂಕದ ಹಂಗಾಮವೇ ಆಗಿಹೋಗಿತ್ತು.

ಆದರೆ, ಈಗ ಪರಿಸ್ಥಿತಿ ಕೆಲಮಟ್ಟಿಗೆ ಬದಲಾಗಿದೆ. ಹಿಂದೂ-ಮುಸ್ಲಿಂ ಸಮುದಾಯಗಳನ್ನು ಒಡೆದು ಬೇಳೆ ಬೇಯಿಸಿಕೊಳ್ಳುವ ಶಕ್ತಿಗಳ ಪ್ರಯತ್ನಗಳ ಹೊರತಾಗಿಯೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗದ ಗಣೇಶೋತ್ಸವ ಶಾಂತಿ ಮತ್ತು ಸೌಹಾರ್ದದ ಹಳಿಗೆ ಬಂದಿದೆ. ಹಾಗೇ ಈದ್ ಮಿಲಾದ್ ಮೆರವಣಿಗೆಗಳು ಕೂಡ ಶಾಂತಿಯಿಂದ ನಡೆಯುತ್ತಿವೆ. ನಗರದ ಜನ ಅಪರೂಪಕ್ಕೆ ಹಬ್ಬದ ಸಂಭ್ರಮವನ್ನು ಆತಂಕವಿಲ್ಲದೆ, ದಿಗಿಲುಬೀಳದೆ ಆಚರಿಸುವಂತಾಗಿದೆ.

ಹೇಗಾಯಿತು ಈ ಬದಲಾವಣೆ?

ದಶಕಗಳ ಕಾಲದಿಂದಲೂ ಕೋಮು ಸಂಘರ್ಷಕ್ಕೆ ಹೆಸರಾಗಿದ್ದ ಈ ಹಬ್ಬಗಳ ಹಂಗಾಮು ಹೀಗೆ ಕೇವಲ ಮೂರ್ನಾಲ್ಕು ವರ್ಷಗಳಲ್ಲೇ ಸೌಹಾರ್ದದ, ನೆಮ್ಮದಿಯ ಹಾದಿಗೆ ಬರುತ್ತಿರುವುದು ಹೇಗೆ? ಅಂತಹ ಬದಲಾವಣೆಗೆ ಕಾರಣವೇನು? ಎಂಬ ಪ್ರಶ್ನೆ ಸಹಜ.

ಸ್ವತಃ ಶಿವಮೊಗ್ಗದ ಜನತೆಯೇ ಅಚ್ಚರಿಪಡುವಂತಹ ಈ ಬದಲಾವಣೆ ಸಾಧ್ಯವಾಗಿರುವುದು ಹಿಂದೂ ಮುಸ್ಲಿಂ ಮತ್ತು ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರ ಕಾಳಜಿಯ ಕಾರಣದಿಂದ. ಆದರೆ, ತಮ್ಮ ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತರಾಗಿ ಇದ್ದ ಧರ್ಮಗುರುಗಳನ್ನು ಇಂತಹದ್ದೊಂದು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುವಂತೆ ಮಾಡಿರುವುದು ಮಾತ್ರ ಶಿವಮೊಗ್ಗದ ಶಾಂತಿ ಮತ್ತು ಸೌಹಾರ್ದ ಬಯಸುವ ಸಾಮಾಜಿಕ ಹೋರಾಟಗಾರರ ಗುಂಪು.

ಶಾಂತಿ ನಡಿಗೆ ಸಮಿತಿಯ ಸೌಹಾರ್ದ ಹಬ್ಬ- ಬ್ರಾಂಡ್‌ ಶಿವಮೊಗ್ಗ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗುರುಗಳೊಂದಿಗೆ ಜಿಲ್ಲಾಧಿಕಾರಿ‌ ಗುರುದತ್‌ ಹೆಗಡೆ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್

ಮೂರು ವರ್ಷಗಳ ಹಿಂದೆ ಹರ್ಷ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗ ಹೊತ್ತಿ ಉರಿದಿತ್ತು. ವಾರಗಟ್ಟಲೆ ಕರ್ಫ್ಯೂ, ಗಲಭೆ, ದಾಳಿ, ಅಂಗಡಿಮುಂಗಟ್ಟುಗಳಿಗೆ ಬೆಂಕಿ,.. ಹೀಗೆ ಭಾರೀ ಅನಾಹುತಕ್ಕೆ ನಗರ ನಲುಗಿಹೋಗಿತ್ತು. ಅದೇ ವರ್ಷ ಟಿಪ್ಪು ವಿಷಯದಲ್ಲಿ, ಈದ್ ಮಿಲಾದ್ ಮೆರವಣಿಗೆ ವಿಷಯದಲ್ಲಿ ಕೂಡ ಗಲಭೆಗಳು ಉಂಟಾಗಿದ್ದವು. ಆ ಹಿನ್ನೆಲೆಯಲ್ಲಿ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಕೆ ಪಿ ಶ್ರೀಪಾಲ್, ಶಿಕ್ಷಣ ತಜ್ಞ ಕೆ ಕಿರಣ್‌ ಕುಮಾರ್, ರೈತ ಮುಖಂಡ ಎಚ್‌ ಆರ್‌ ಬಸವರಾಜಪ್ಪ, ದಲಿತ ಹೋರಾಟಗಾರ ಎಂ ಗುರುಮೂರ್ತಿ, ಮತ್ತು ಜನಪ್ರಿಯ ವೈದ್ಯ ಧನಂಜಯ ಸರ್ಜಿ ಮುಂತಾದ ಸಾಮಾಜಿಕ ಕಾಳಜಿಯ ಮನಸ್ಸುಗಳು ನಗರದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಮರು ಸ್ಥಾಪಿಸುವ ಯತ್ನಕ್ಕೆ ಕೈಹಾಕಿದರು.

ಮುಖ್ಯವಾಗಿ ಶಿವಮೊಗ್ಗದ ಚೈತನ್ಯ ಸಂಸ್ಥೆ(ಎಸ್‌ಎಂಎಸ್‌ಎಸ್‌) ಮುಖ್ಯಸ್ಥ ಫಾದರ್‌ ರೋಷನ್‌ ಕ್ಲಿಪ್‌ಫರ್ಡ್‌ ಪಿಂಟೋ, ಜಗದೀಶ್‌, ಫಾದರ್‌ ಪಿಯೂಸ್‌, ಎಸ್‌ಐಒ ಸಂಸ್ಥೆಯ ಇಸ್ಮಾಯಿಲ್‌, ಪತ್ರಕರ್ತ ಲಿಯಾಖತ್‌, ಅಬತಮ್‌ ಫರ್ವೇಜ್‌, ಮಹಮ್ಮದ್‌ ಹುಸೇನ್‌, ರಫೀ ಮತ್ತಿತರ ಸೌಹಾರ್ದ ಬಯಸುವ ಮನಸ್ಸುಗಳು ಆ ಯತ್ನಕ್ಕೆ ಕೈಜೋಡಿಸಿದರು. ಕೋಮು ದಳ್ಳುರಿಯಲ್ಲಿ ಬೇಯುತ್ತಿದ್ದ ನಗರಕ್ಕೆ ಸೌಹಾರ್ದದ, ಸಹಬಾಳ್ವೆಯ ಸಾಂತ್ವನ ಹೇಳಲು ಮುಂದಾದರು.

ಪರಿಣಾಮವಾಗಿ, ʼಶಾಂತಿಗಾಗಿ ನಡಿಗೆʼ ಎಂಬ ಹೆಸರಿನಲ್ಲಿ ನಗರದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸೇರಿದಂತೆ ವಿವಿಧ ಧರ್ಮ ಗುರುಗಳು, ಸ್ವಾಮೀಜಿಗಳು, ಸಾಮಾಜಿಕ ಸಂಘಟನೆಗಳ ಮುಖಂಡರು ಕೈಗೊಂಡ ಜಾಥಾದಲ್ಲಿ ಆ ಬಾರಿ ಬರೋಬ್ಬರಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸ್ವತಃ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಮುಂದೆ ನಿಂತು ಸೌಹಾರ್ದದ ಜಾಥಾಕ್ಕೆ ಚಾಲನೆ ನೀಡಿದ್ದರು. ಸ್ವಯಂಪ್ರೇರಿತರಾಗಿ ಹರಿದುಬಂದ ಆ ಜನಸಾಗರ, ನಿಜಕ್ಕೂ ಶಿವಮೊಗ್ಗ ನಗರದ ಜನತೆಗೆ ಏನು ಬೇಕಿದೆ? ಜನ ಏನನ್ನು ಬಯಸುತ್ತಿದ್ದಾರೆ? ಎಂಬ ಸ್ಪಷ್ಟ ಸಂದೇಶ ರವಾನಿಸಿತ್ತು. ಯಾರೋ ಕೆಲವರ ರಾಜಕೀಯ, ಮತೀಯ ಮತ್ತು ವೈಯಕ್ತಿಕ ದ್ವೇಷ-ಅಸೂಹೆಯ ಹಿತಾಸಕ್ತಿಗಾಗಿ ನಗರದ ಜನಸಾಮಾನ್ಯರು, ಕೂಲಿಕಾರ್ಮಿಕರು, ಅಂದಂದಿನ ಅನ್ನವನ್ನು ಅಂದಂದಿನ ದುಡಿಮೆಯಲ್ಲೇ ಸಂಪಾದಿಸುವ ಶ್ರಮಿಕರು, ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿಮುಂಗಟ್ಟು ನಡೆಸುವವರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಹೀಗೆ ಸಾವಿರಾರು ಜನರ ಬದುಕು ಹೈರಾಣಾಗುವುದು ಯಾವ ನ್ಯಾಯ ? ಎಂಬ ಪ್ರಶ್ನೆಯನ್ನೂ ಆ ಜಾಥಾದ ಯಶಸ್ಸು ಎತ್ತಿತ್ತು.

ಬದಲಾವಣೆಯ ಭರವಸೆಯ ಹಾದಿ

ಹಾಗೆ ಶುರುವಾದ ಶಿವಮೊಗ್ಗದ ಶಾಂತಿ ನಡಿಗೆ, ಇದೀಗ ಮೂರನೇ ವರ್ಷವನ್ನು ಪೂರೈಸಿದೆ. ಶಾಂತಿಗಾಗಿ ಶಿವಮೊಗ್ಗ ಹಾಕಿದ ಹೆಜ್ಜೆಗಳು ಇದೀಗ ಸೌಹಾರ್ದದ ವಾತಾವರಣವನ್ನು, ಸಹಬಾಳ್ವೆಯ ದಿನಗಳನ್ನು ಜನರ ಪಾಲಿಗೆ ಕೊಡುವ ದಿಕ್ಕಿನಲ್ಲಿ ದಾಪುಗಾಲುಗಳಾಗಿವೆ.

ಈ ಬದಲಾವಣೆಯ ಮತ್ತು ಭರವಸೆಯ ಕುರಿತು ʼಶಾಂತಿಗಾಗಿ ನಡಿಗೆʼ ಸೌಹಾರ್ದ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರಾದ ಸಾಮಾಜಿಕ ಹೋರಾಟಗಾರ ಕೆ ಪಿ ಶ್ರೀಪಾಲ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, “ಹರ್ಷ ಕೊಲೆ ಪ್ರಕರಣ ಮತ್ತು ಆ ನಂತರದ ಘಟನೆಗಳಿಂದಾಗಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಊರುಗಳಲ್ಲಿ ಜನ ಭಯಭೀತಿಯಿಂದ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ತಿಂಗಳುಗಟ್ಟಲೆ ಬಂದ್, ಕರ್ಫ್ಯೂಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿತ್ತು. ಅಷ್ಟೇ ಅಲ್ಲ; ಶಿವಮೊಗ್ಗ ಎಂದರೆ ಗಲಭೆ ಊರು ಎಂಬಂತೆ ಬ್ರಾಂಡಿಂಗ್ ಆಗಿ ಹೋಗಿತ್ತು. ಆಗ ಶಿವಮೊಗ್ಗ ಜನರ ಬದುಕಿನ ನೆಮ್ಮದಿಗಾಗಿ ಮತ್ತು ಊರಿನ ಉದ್ಯಮ, ವ್ಯವಹಾರ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುವಂತೆ ಮಾಡುವ ಯತ್ನವಾಗಿ ಹುಟ್ಟಿಕೊಂಡಿದ್ದೇ ಈ ಶಾಂತಿಗಾಗಿ ನಡಿಗೆ ಎಂಬ ಸೌಹಾರ್ದ ಕಾರ್ಯಕ್ರಮ. ʼಶಾಂತಿ ನಡಿಗೆ ಸಮಿತಿʼ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಅದರ ಮೂಲಕ ನಾಳೆಯ ನೆಮ್ಮದಿಗಾಗಿ ತಿಂಗಳುಗಟ್ಟಲೆ ನಿರಂತರ ಸಭೆ- ಚರ್ಚೆಗಳನ್ನು ನಡೆಸಲಾಯಿತು” ಎಂದು ವಿವರಿಸಿದರು.

ಈದ್‌ ಮಿಲಾದ್‌ ಮೆರವಣಿಗೆಗೆ ಮುನ್ನ ಶಾಂತಿ ನಡಿಗೆ ಸಮಿತಿಯಿಂದ ಮುಸ್ಲಿಂ ಬಾಂಧವರಿಗೆ ಶುಭಾಶಯ

“ಮೊದಲ ವರ್ಷ ನಮ್ಮ ಪ್ರಯತ್ನಕ್ಕೆ ದೊಡ್ಡ ಮಟ್ಟಿನ ಯಶಸ್ಸು ಸಿಕ್ಕಿತ್ತು. ಹತ್ತು ಸಾವಿರಕ್ಕೂ ಹೆಚ್ಚು ಜನ ಆ ಬಾರಿ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ತಮಗೆ ಶಾಂತಿ- ಸೌಹಾರ್ದದ ಶಿವಮೊಗ್ಗ ಬೇಕು ಎಂಬ ಸಂದೇಶ ನೀಡಿದ್ದರು. ಕಳೆದ ವರ್ಷ 2023ರಲ್ಲಿ ಎರಡು ಸಾವಿರ ಅಡಿ ಉದ್ದದ ಭಾರತ ಧ್ವಜವನ್ನು ಹಿಡಿದು ನಗರದ ಉದ್ದಕ್ಕೂ ಜಾಥಾ ನಡೆಸುವ ಮೂಲಕ ಸೌಹಾರ್ದವೇ ದೇಶದ ಪ್ರಗತಿಗೆ ಹಾದಿ ಎಂಬ ಸಂದೇಶ ಸಾರಲಾಗಿತ್ತು. ಈ ಬಾರಿ ಬ್ರಾಂಡ್ ಶಿವಮೊಗ್ಗ ಎಂಬ ಪರಿಕಲ್ಪನೆಯಲ್ಲಿ ಶಾಂತಿ ಮತ್ತು ಸಹಬಾಳ್ವೆಯೇ ಬ್ರಾಂಡ್ ಶಿವಮೊಗ್ಗ; ಕೋಮು ದ್ವೇಷ, ಗಲಭೆಯಗಳು ಶಿವಮೊಗ್ಗವನ್ನು ಬ್ರಾಂಡ್ ಮಾಡಲು ಬಿಡುವುದಿಲ್ಲ ಎಂಬ ಸಂದೇಶ ಸಾರಿದ್ದೇವೆ” ಎಂದು ಶ್ರೀಪಾಲ್ ವಿವರಿಸಿದರು.

ಅವರ ಹಬ್ಬಕ್ಕೆ ಇವರೂ, ಇವರ ಹಬ್ಬಕ್ಕೆ ಅವರೂ ಮಿಡಿಯುತ್ತಾರೆ!

ಇದೀಗ ಶಾಂತಿ ನಡಿಗೆಯ ಪ್ರತಿಫಲವಾಗಿ ಶಿವಮೊಗ್ಗದಲ್ಲಿ ಹಿಂದೆಂದೂ ಕಾಣದ ಹೊಸ ಸೌಹಾರ್ದದ ಪರಂಪರೆ ಆರಂಭವಾಗಿದೆ.

ಈ ಬಾರಿಯ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳೆರಡೂ ಅಂತಹ ಸೌಹಾರ್ದದ ಪರಂಪರೆಗೆ ಚಾಲನೆ ನೀಡಿವೆ. ಕಳೆದ ವಾರ ನಗರದ ವಿವಿಧ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಶಾಂತಿ ನಡಿಗೆ ಸಮಿತಿಯ ನೇತೃತ್ವದಲ್ಲಿ ನಗರದ ಮುಸ್ಲಿಂ ಮುಖಂಡರು ಗಣಪತಿ ಮೂರ್ತಿಗೆ ಬೃಹತ್ ಹಾರ ಹಾಕಿ ತಮ್ಮ ಭಕ್ತಿ ಮತ್ತು ಗೌರವ ತೋರಿದ್ದಾರೆ. ಅಲ್ಲದೆ, ಹಿಂದೂ ಮಹಾಸಬಾ ಗಣಪತಿ ಮೂರ್ತಿ ಪೆಂಡಾಲ್‌ಗೆ ಹೋಗಿ ಅಲ್ಲಿಯೂ ವಿಶೇಷ ಪೂಜೆ ಮಾಡಿಸಿ ನಮನ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅಲ್ಲಲ್ಲಿ ಹಣ್ಣು, ಸಿಹಿ ತಿಂಡಿ, ಪಾನಕ ಹಂಚಿ ಹಿಂದೂ ಸಹೋದರರ ದಣಿವು ನೀಗಿಸಿದ್ದಾರೆ.


ಅಂತಹ ಸಹಬಾಳ್ವೆಯ, ಪರಸ್ಪರ ಗೌರವಾದರದ ವರಸೆ ಕೇವಲ ಒಂದು ಬದಿಗೆ ಸೀಮಿತವಾಗಿಲ್ಲ. ಹಿಂದುತ್ವದ ಪ್ರಯೋಗಶಾಲೆ ಎಂದೇ ಹೆಸರಾಗಿದ್ದ ಶಿವಮೊಗ್ಗ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಈದ್ ಮಿಲಾದ್ ಮೆರವಣಿಗೆಯ ವೇಳೆ ಪಾನಕ, ಹಣ್ಣು, ಸಿಹಿ ಹಂಚಿ ಮುಸ್ಲಿಂ ಸಹೋದರರ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ ವಾರದ ಈದ್ ಮೆರವಣಿಗೆಯಲ್ಲಿ ಕಂಡ ಸೌಹಾರ್ದದ ಈ ನಡೆ ನಿಜಕ್ಕೂ ಶಿವಮೊಗ್ಗ ಜನತೆಯ ನೆಮ್ಮದಿಯ ಭರವಸೆಯನ್ನು ಚಿಗುರಿಸಿದೆ.

ಹೀಗೆ ಒಬ್ಬರ ಸಂಭ್ರಮದಲ್ಲಿ, ಆಚರಣೆಯಲ್ಲಿ, ಭಕ್ತಿ- ಆರಾಧನೆಯಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಕೈಜೋಡಿಸುವುದು, ನಿಜವಾದ ಅರ್ಥದಲ್ಲಿ ಸಹೋದರತ್ವ ಸಾರುವುದು ಕೇವಲ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಮು ಸಂಘರ್ಷಕ್ಕೆ ಹೆಸರಾಗಿದ್ದ ಭದ್ರಾವತಿ, ತೀರ್ಥಹಳ್ಳಿ, ಸಾಗರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳ ಗಣಪತಿ ಉತ್ಸವ ಮತ್ತು ಈದ್ ಮೆರವಣಿಗೆಯಲ್ಲೂ ಈ ಸೌಹಾರ್ದದ ಮಾದರಿಯ ನಡೆಗಳು ಮರುಕಳಿಸಿವೆ.

ಹಾಗಾಗಿ ಇಡೀ ಜಿಲ್ಲೆಯಲ್ಲಿ ಈ ಬಾರಿ ಹಬ್ಬದ ಹಂಗಾಮ ಶಾಂತಿ ಮತ್ತು ಸೌಹಾರ್ದದ ಸಂಭ್ರಮವಾಗಿ ಬದಲಾಗಿದೆ. ಸಹಬಾಳ್ವೆಯ ಸುಗ್ಗಿಯಾಗಿ ಹೊರಹೊಮ್ಮಿದೆ. ಕೋಮು ಸಂಘರ್ಷದ ನೆಲದಲ್ಲಿ ಈಗ ಸಹಬಾಳ್ವೆಯ ಹಾಡು ಕೇಳತೊಡಗಿದೆ. ಒಳ್ಳೆಯ ನಾಲ್ಕು ಮನಸ್ಸುಗಳು ನಿಜವಾಗಿಯೂ ಪ್ರಯತ್ನ ಪಟ್ಟರೆ, ಯಾವ ಹಿತಾಸಕ್ತಿಗಳೂ ಇಲ್ಲದೆ ಪ್ರಾಮಾಣಿಕ ಪ್ರಯತ್ನ ಅದಾಗಿದ್ದರೆ ಹೇಗೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಶಿವಮೊಗ್ಗ ಸಾಕ್ಷಿಯಾಗಿದೆ.

Read More
Next Story